ಕನ್ನಡ ವಾರ್ತೆಗಳು

ಬಿಜೆಪಿ ನಾಯಕ ಉಚ್ಚಿಲ ಮನೆಗೆ ನುಗ್ಗಿ ದಾಂದಲೆ ಪ್ರಕರಣ – ಆರು ಆರೋಪಿಗಳ ಬಂಧನ

Pinterest LinkedIn Tumblr

Chandra_Shekar_attack_3

ಮಂಗಳೂರು: ಬಿಜೆಪಿಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಸೋಮೇಶ್ವರ ಉಚ್ಚಿಲ ನಿವಾಸಿ, ಚಂದ್ರಶೇಖರ ಉಚ್ಚಿಲ ಅವರ ಮನೆಗೆ ಶುಕ್ರವಾರ ತಡರಾತ್ರಿ ಮಾರಕಾಸ್ತ್ರಗಳೊಂದಿಗೆ ನುಗ್ಗಿ ದಾಂದಲೆ ನಡೆಸಿದ ತಂಡದ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಜನಾಡಿ ನಿವಾಸಿಗಳಾದ ನಝೀರ್, ರುಕ್ಸಾನ್, ರಫೀಕ್, ತೈಸರ್, ರಮೀಝ್, ಕಿನ್ಯ ನಿವಾಸಿ ಫಯಾಜ್ ಎಂದು ಹೆಸರಿಸಲಾಗಿದೆ.

ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಎರಡು ಬೈಕ್ ಗಳಲ್ಲಿ ಆರು ಯುವಕರು ಉಚ್ಚಿಲದ ಮನೆಯ ಬಳಿ ಬಂದಿದ್ದು, ಅವರ ಪೈಕಿ ಓರ್ವ ಆವರಣ ಪ್ರವೇಶಿಸಿ ಮನೆಯ ಬಾಗಿಲು ಬಡಿದಿದ್ದ. ಈ ವೇಳೆ ಉಚ್ಚಿಲರು ಮನೆಯಲ್ಲಿರಲಿಲ್ಲ. ಅವರ ಸೋದರನ ಮಗ, ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ್ ಬಾಗಿಲು ತೆರೆಯಲು ಮುಂದಾದಾಗ ತಂಡದಲ್ಲಿದ್ದವರು ಅವಾಚ್ಯ ಶಬ್ದಗಳಿಂದ ಬೈದು ತಲವಾರಿನಿಂದ ಹಲ್ಲೆಗೆ ಮುಂದಾಗಿದ್ದರು.

ಅಪಾಯವನ್ನು ಗ್ರಹಿಸಿದ ರಾಜೇಶ್ ತಕ್ಷಣ ಬಾಗಿಲು ಹಾಕಿಕೊಂಡು ಸ್ನೇಹಿತರಿಗೆ ದೂರವಾಣಿ ಕರೆ ಮಾಡಿದ್ದರು. ಬೊಬ್ಬೆ ಕೇಳಿ ನೆರೆಕರೆಯವರೂ ಧಾವಿಸಿ ಬಂದಿದ್ದು, ದಾಳಿಕೋರರು ಅಲ್ಲಿಂದ ಬೀರಿ ಕಡೆಗೆ ಪರಾರಿಯಾಗಿದ್ದರು. ರಾಜೇಶ್ ಉಚ್ಚಿಲ್ ರ ಸ್ನೇಹಿತರು ಬೀರಿ ಬಳಿ ಒಂದು ಬೈಕ್ ನ್ನು ತಡೆದಿದ್ದು, ಅದರಲ್ಲಿದ್ದ ಇಬ್ಬರು ಪರಾರಿಯಾಗಿ, ರುಕ್ಸಾನ್ ಎಂಬಾತ ಸಿಕ್ಕಿ ಬಿದ್ದಿದ್ದ. ಆತನನ್ನು ಪೊಲೀಸರಿಗೊಪ್ಪಿಸಲಾಗಿತ್ತು.

ರುಕ್ಸಾನ್ ಕಡೆಯಿಂದಲೇ ಆತನ ತಂಡಕ್ಕೆ ದೂರವಾಣಿ ಕರೆ ಮಾಡಿಸಿದ್ದ ಪೊಲೀಸರು ತಾನು ಬೀದಿಯ ಕಟ್ಟಡವೊಂದರ ಬಳಿಯಿದ್ದೇನೆ, ತನ್ನನ್ನು ಕರೆದುಕೊಂಡು ಹೋಗಿ ಎಂದು ಹೇಳಿಸಿದ್ದರು. ಇದಾದ ಸ್ವಲ್ಪ ಹೊತ್ತಿನ ಬಳಿಕ ಇತರ ಆರೋಪಿಗಳು ಕಾರಿನಲ್ಲಿ ಅಲ್ಲಿಗೆ ಬಂದಾಗ ಅವರನ್ನು ಬಂಧಿಸಲಾಗಿದೆ.

ಈ ಹಿಂದೆ ಚಂದ್ರಶೇಖರ ಉಚ್ಚಿಲ ಅವರ ಕೊಲೆಗೆ ಎರಡು ಬಾರಿ ಯತ್ನ ನಡೆದಿದ್ದು, ಆ ಬಗ್ಗೆ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಲೇ ಇದೆ. ತನ್ಮಧ್ಯೆ, ಆರೋಪಿಗಳು ರಾಜಿಯಲ್ಲಿ ಪ್ರಕರಣವನ್ನೂ ಇತ್ಯರ್ಥಗೊಳಿಸಿಕೊಳ್ಳಲು ಯತ್ನಿಸಿದ್ದು, ಉಚ್ಚಿಲ ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಇದೇ ದ್ವೇಷದಿಂದ ಇದೀಗ ಮೂರನೇ ಬಾರಿಗೆ ಅವರ ಹತ್ಯೆಗೆ ಸಜ್ಜಾಗಿ ಈ ತಂಡ ಬಂದಿತ್ತೆಂದು ಶಂಕಿಸಲಾಗಿದೆ.

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Write A Comment