ಕನ್ನಡ ವಾರ್ತೆಗಳು

ರಿಕ್ಷಾ ಚಾಲಕ ಹಿದಾಯತ್ ಕೊಲೆ ಪ್ರಕರಣ : ಹಲವರ ವಿಚಾರಣೆ : ಮಹತ್ವದ ಸುಳಿವು ಲಭ್ಯ

Pinterest LinkedIn Tumblr

Rishow_murdr_photo_2

ಮಂಗಳೂರು, ಆ.30: ಕಿನ್ಯ ಗ್ರಾಮದ ಸಂಕೇಶ ರಸ್ತೆಯ ಮಾಂಗಟ್ಟೆ ಎಂಬಲ್ಲಿ ಶನಿವಾರ ಬೆಳಿಗ್ಗೆ ತನ್ನ ರಿಕ್ಷಾದಲ್ಲಿ ಶವವಾಗಿ ಪತ್ತೆಯಾದ ಚಾಲಕನ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ಕೆಲವು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಕೌಟುಂಬಿಕ ವಿವಾದದಲ್ಲಿ ಈ ಹತ್ಯೆ ನಡೆದಿದೆಯೆನ್ನಲಾಗಿದೆ.

ಕೊಲೆಯಾಗಿರುವ ಹಿದಾಯತ್ (35) ಉಳ್ಳಾಲ ಅಳೇಕಲ ನಿವಾಸಿ ಅಬ್ದುಲ್ ಖಾದರ್ ರ ಪುತ್ರನಾಗಿದ್ದು, ತೊಕ್ಕೊಟ್ಟು ಒಳಪೇಟೆಯ ರಿಕ್ಷಾಪಾರ್ಕ್ ನಲ್ಲಿ ಬಾಡಿಗೆ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ರಿಕ್ಷಾ ಪಾರ್ಕ್ ನಿಂದ ಪತ್ನಿಗೆ ದೂರವಾಣಿ ಕರೆ ಮಾಡಿದ್ದ ಹಿದಾಯತ್ ಬಾಡಿಗೆಗೆ ದೂರ ಹೋಗುತ್ತಿದ್ದೇನೆ. ಅಡುಗೆ ಮಾಡುವುದು ಬೇಡ, ಬರುವಾಗ ಊಟ ತರುತ್ತೇನೆ ಎಂದು ತಿಳಿಸಿದ್ದರು.

ತಡರಾತ್ರಿಯಾದರೂ ಹಿದಾಯತ್ ಮನೆಗೆ ಮರಳಿರಲಿಲ್ಲ. ಪತ್ನಿ ಈ ವಿಷಯವನ್ನು ಹಿದಾಯತ್ ಸೋದರ ಹನೀಫ್ ಗೆ ತಿಳಿಸಿದ್ದು, ಹನೀಫ್ ಮತ್ತು ಇನ್ನೋರ್ವ ಸೋದರ ಮಹಮ್ಮದ್ ರಫೀಕ್ ನಿನ್ನೆ ಬೆಳಿಗ್ಗೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಇದೇ ವೇಳೆ ಮಾಂಗಟ್ಟೆ ಬಳಿ ನಿರ್ಜನ ಪ್ರದೇಶದಲ್ಲಿ ಹಿದಾಯತ್ ರ ರಿಕ್ಷಾ ಪತ್ತೆಯಾಗಿದ್ದು, ಅದರಲ್ಲಿ ಚಾಲಕನ ಸ್ಥಾನದಲ್ಲಿ ಹಿದಾಯತ್ ರ ಶವವಿತ್ತು. ತಲೆಯ ಹಿಂಬದಿಗೆ ಭಾರೀ ಕಲ್ಲಿನಿಂದ ಜಜ್ಜಿ, ದೊಣ್ಣೆಯಿಂದ ಬಡಿದು ಅವರ ಹತ್ಯೆ ಮಾಡಲಾಗಿತ್ತು.

ಹಿದಾಯತ್ ಮೊದಲ ಪತ್ನಿಗೆ ತಲಾಖ್ ನೀಡಿದ್ದು, 10 ತಿಂಗಳ ಹಿಂದೆ ಇನ್ನೊಂದು ಮದುವೆ ಮಾಡಿಕೊಂಡಿದ್ದರು. ಮೊದಲ ಪತ್ನಿ ಇನ್ನೊಬ್ಬರನ್ನು ಮರುಮದುವೆ ಮಾಡಿಕೊಂಡಿದ್ದಾಳೆ. ಆದರೆ ಹಿದಾಯತ್ ಆಕೆಗೆ ದೂರವಾಣಿ ಕರೆ, ಮೆಸೇಜ್ ಗಳನ್ನು ಮಾಡಿ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಆಕೆಯ ಸೋದರರು ಮತ್ತು ಎರಡನೇ ಪತಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಮೊದಲ ಪತ್ನಿಯ ಸೋದರ ತನಗೆ ಎರಡು ದಿನಗಳ ಹಿಂದೆ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಹಿದಾಯತ್ ಶುಕ್ರವಾರ ಉಳ್ಳಾಲ ಠಾಣೆಗೆ ಮೌಖಿಕ ದೂರು ನೀಡಿದ್ದರು. ಆದರೆ ಎಫ್ಐಆರ್ ದಾಖಲಾಗುವ ಮೊದಲೇ ಅವರ ಕೊಲೆ ನಡೆದು ಹೋಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Write A Comment