ಮಂಗಳೂರು, ಆ. 28: ರಾಜ್ಯದ ಬಯಲು ಸೀಮೆಗೆ ಕುಡಿಯುವ ನೀರಿನ ಹೆಸರಿನಲ್ಲಿ ಕೈಗೆತ್ತಿಕೊಳ್ಳಲಾಗಿರುವ 60 ಕಿ.ಮೀ. ವ್ಯಾಪ್ತಿಗೊಳಪಡುವ ಎತ್ತಿನಹೊಳೆ ಯೋಜನೆಯ ಪ್ರಾಥಮಿಕ ಕಾಮಗಾರಿಗಳು ನಮ್ಮ ಪಶ್ಚಿಮ ಘಟ್ಟ ಹಾಗೂ ಸುತ್ತಮುತ್ತಲಿನ ಹಚ್ಚ ಹಸುರಿನ ಪ್ರಕೃತಿಯ ಮಾರಣ ಹೋಮದ ಯೋಜನೆ ಎಂಬುದು ಸಾಮಾನ್ಯರಿಗೂ ಪ್ರಥಮ ನೋಟದಲ್ಲೇ ಅರಿವಾಗುತ್ತದೆ. ಮಾತ್ರವಲ್ಲ, ಸದ್ಯ ಈ ಯೋಜನೆಯಿಂದ ಹೊರಗಿರುವಂತೆ ಭಾಸವಾಗುತ್ತಿರುವ ದ.ಕ. ಜಿಲ್ಲೆಯ ಕುಮಾರಧಾರಾ ಹಾಗೂ ಸಕಲೇಶಪುರದ ಹೇಮಾವತಿ ನದಿಗಳಿಗೂ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.
ಬಯಲು ಸೀಮೆಗೆ ನೀರು ಹರಿಸಲು ಉತ್ಸಾಹ ತೋರುತ್ತಿರುವ ರಾಜ್ಯ ಸರಕಾರ, ಈ ಯೋಜನೆಯಿಂದ ಪ್ರಮುಖವಾಗಿ ಸಂತ್ರಸ್ತರಾಗಲಿರುವ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಜನರ ಅಹವಾಲನ್ನೇ ಆಲಿಸಿಲ್ಲ. ಯೋಜನೆಯ ಕಾಮಗಾರಿ ಅನುಷ್ಠಾನಗೊಂಡು ಕೆಲ ತಿಂಗಳಲ್ಲೇ ಸದ್ದಿಲ್ಲದೆ ನೂರಾರು ಮರಗಳು ಧರಾಶಾಯಿಯಾಗಿದ್ದರೂ, ನೀರು ಹರಿಸಲು ಬೇಕಾದ ಗಜ ಗಾತ್ರದ ಸಾವಿರಾರು ಪೈಪುಗಳು ರೈತರ ಗದ್ದೆಗಳ ರಾಶಿ ರಾಶಿಯಾಗಿ ಬಿದ್ದಿದ್ದರೂ, ನೀರೇ ಇಲ್ಲದ ಹಳ್ಳ- ಹೊಳೆಗಳ ನೀರು ಸಂಗ್ರಹಿಸಲು ಅವೈಜ್ಞಾನಿಕ ಅಣೆಕಟ್ಟು ನಿರ್ಮಾಣವಾಗುತ್ತಿದ್ದರೂ ಈ ಬಗ್ಗೆ ಯೋಜನೆಯ ವಾಸ್ತವಾಂಶವನ್ನು ಜನರ ಮುಂದಿಡುವ ಕೆಲಸವನ್ನು ಸರಕಾರವಿನ್ನೂ ಮಾಡಿಲ್ಲ.
ಇವೆಲ್ಲದರ ನಡುವೆ ಈ ಯೋಜನೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕುಮಾರಧಾರಾ ಹಾಗೂ ಸಕಲೇಶಪುರದ ಜೀವನದಿಯಾಗಿರುವ ಹೇಮಾವತಿ ನದಿಗಳನ್ನೂ ಆಪೋಶನಗೈಯುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುತ್ತಿಲ್ಲ.ಯೋಜನೆಯ ಪ್ರಕಾರ ಬಯಲು ಸೀಮೆ ಪ್ರದೇಶಗಳಿಗೆ 24 ಟಿಎಂಸಿ ನೀರು ಹರಿಸಲು ಈ ಯೋಜನೆಯಿಂದ ಸಾಧ್ಯವೇ ಇಲ್ಲ. ಪರಿಸರ ತಜ್ಞ ಟಿ.ವಿ. ರಾಮಚಂದ್ರ ಇತ್ತೀಚೆಗೆ ನಡೆಸಿರುವ ಅಧ್ಯಯನ ವರದಿಯ ಪ್ರಕಾರ ‘ಎತ್ತಿನಹೊಳೆಯಿಂದ ಕೇವಲ 9 ಟಿಎಂಸಿ ನೀರು ಮಾತ್ರ ಲಭಿಸಬಹುದು’. ಹಾಗಿರುವಾಗ 24 ಟಿಎಂಸಿ ನೀರು ಪೂರೈಕೆಯ ತನ್ನ ವಾಗ್ದಾನವನ್ನು ಪೂರೈಸಲು ಮುಂದಿನ ದಿನಗಳಲ್ಲಿ ಕರಾವಳಿ ಹಾಗೂ ಮಲೆನಾಡಿನ ನದಿಗಳಿಗೆ ಕನ್ನ ಹಾಕಲಾಗುತ್ತದೆ ಎಂಬ ಪರಿಸರವಾದಿಗಳ ಹೇಳಿಕೆಯಲ್ಲಿ ಅರ್ಥವಿದೆ.
ಕಳೆದ ಜೂನ್ 30ರಂದು ಅರಸೀಕೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಬಿ. ಶಿವರಾಂ, ‘‘ಎತ್ತಿನ ಹೊಳೆ ಯೋಜನೆಯಂತೆ ಕುಮಾರಧಾರಾ ಏತ ಯೋಜನೆಯ ಮೂಲಕ ಹಾಸನ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಸರಬರಾಜು ಮಾಡುವ ಸರಕಾರದ ಯೋಜನೆ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ’’ ಎಂಬ ಹೇಳಿಕೆಯನ್ನ್ನು ನೀಡಿರುವುದನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ.
ಇದರ ಜತೆಯಲ್ಲೇ ಎತ್ತಿನ ಹೊಳೆ ಯೋಜನೆಯ ಪ್ರಕಾರ ಹೊಂಗಡ ಹೊಳೆ, ಕೇರಿಹೊಳೆ, ಕಾಗಿನಿರೆ, ಎತ್ತಿನಹೊಳೆ, ಎತ್ತಿನ ಹಳ್ಳ, ಹೆಬ್ಬಸಾಲೆ, ಕಾಡುಮನೆಹೊಳೆ, ದೇಖಲ ಮೊದಲಾದ ಹಳ್ಳ, ಹೊಳೆಗಳಲ್ಲಿ ಅಣೆಕಟ್ಟುಗಳನ್ನು ಕಟ್ಟಲಾಗುತ್ತದೆ. ಈ ಅಣೆಕಟ್ಟುಗಳಲ್ಲಿ ಸಂಗ್ರಹಿಸಲಾಗುವ ನೀರನ್ನು ದೊಡ್ಡನಾಗರದ ಹರವನಹಳ್ಳಿಯ ಬೃಹದಾಕಾರದ ಟ್ಯಾಂಕ್‌ಗೆ ಹರಿಸಿ ಅಲ್ಲಿಂದ ತೆರೆದ ಕಾಲುವೆಗಳ ಮೂಲಕ ಕುಡಿಯುವ ನೀರನ್ನು ಬಯಲು ಸೀಮೆಗಳಿಗೆ ಹರಿಸಲಾಗುತ್ತದೆ. ಅಣೆಕಟ್ಟುಗಳಲ್ಲಿ ಸಂಗ್ರಹಿಸಲಾಗುವ ನೀರನ್ನು ಹರವನಹಳ್ಳಿಯ ಟ್ಯಾಂಕ್‌ಗೆ ಗಜ ಗಾತ್ರದ ಪೈಪುಗಳನ್ನು ಉಪಯೋಗಿಸಲಾಗುತ್ತದೆ. ಈ ಪೈಪುಗಳು ಹಿರಿದನ ಹಳ್ಳಿಯಿಂದ ಹೆಬ್ಬಸಾಲೆಯವರೆಗೆ ಸಾಗಿ ಅಲ್ಲಿಂದ ಹೇಮಾವತಿ ನದಿಯ ಮೂಲಕ ಹರವನ ಹಳ್ಳಿಗೆ ಸಾಗಬೇಕಾಗುತ್ತವೆೆ.
ಸಕಲೇಶಪುರದ ಜನರ ಕುಡಿಯುವ ನೀರಿನ ಮೂಲವಾಗಿರುವ ಹೇಮಾವತಿ ನದಿಯಲ್ಲಿ ಮಳೆಗಾಲದಲ್ಲೇ (ಆಗಸ್ಟ್ 25ರಂದು ದ.ಕ. ಜಿಲ್ಲಾ ಪತ್ರಕರ್ತರ ತಂಡ ಭೇಟಿ ನೀಡಿದ್ದ ಸಂದರ್ಭ) ನೀರಿನ ಹರಿವು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತಿತ್ತು. ಹೇಮಾವತಿ ನದಿಯ ಅಡಿಯಿಂದ ಬೃಹದಾಕಾರದ ಪೈಪ್ ಮೂಲಕ ನೀರನ್ನು ಹರವನ ಹಳ್ಳಿಯತ್ತ ಹರಿಸಲಾಗುತ್ತದೆ ಎಂದು ಹೇಳಲಾಗಿದೆ.
ಹೆಬ್ಬಸಾಲೆಯ ಪ್ರದೇಶದಲ್ಲಿ ಕಾಡುಮನೆ ಹೊಳೆ, ಹಕ್ಕಿಹೊಳೆ, ಕಬ್ಬಿನಾಲೆ ಹೊಳೆಯನ್ನು ಎತ್ತಿನಹೊಳೆಗೆ ಜೋಡಿಸಿ ನೀರೆತ್ತುವಲ್ಲಿ ಹೇಮಾವತಿ ನದಿ ಹರಿಯುತ್ತಿದೆ. ಹೇಮಾವತಿ ಕಾವೇರಿಯ ಉಪನದಿಯಾಗಿದ್ದು, ಮುಂದೊಂದು ದಿನ ಕಾವೇರಿ ನದಿ ವಿವಾದವು ರಾಜ್ಯ ಹಾಗೂ ಜಿಲ್ಲೆಗಳ ನಡುವೆ ಸಂಘರ್ಷಕ್ಕೂ ಕಾರಣವಾಗಬಹುದು. ನೀರೇ ಇಲ್ಲದ ಹಳ್ಳ ಹೊಳೆಗಳಿಗೆ ಅಣೆಕಟ್ಟು!
ಈ ಮಾತು ಅಪಹಾಸ್ಯದಂತೆ ಕಾಣುತ್ತಿದ್ದರೂ ವಾಸ್ತವ. ಈಗಾಗಲೇ ಆರಂಭವಾಗಿರುವ ಎತ್ತಿನಹೊಳೆ ಯೋಜನೆಗಾಗಿ ಶಿರಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಎತ್ತಿನ ಹಳ್ಳದಲ್ಲಿ ಅಣೆಕಟ್ಟು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹೆದ್ದಾರಿ ಬಳಿ ನೀವೇನಾದರೂ ಕಾಮಗಾರಿ ನಡೆಯುತ್ತಿರುವ ಬಗ್ಗೆ ಕುತೂಹಲದಿಂದ ವೀಕ್ಷಿಸಿದರೆ, ಸುಮಾರು 140 ಅಡಿಗೂ ಎತ್ತರದ ಅಣೆಕಟ್ಟು ನಿರ್ಮಾಣವಾಗಿದೆ. ಆದರೆ, ಅಲ್ಲಿ ಹರಿಯುವ ನೀರು ಒಂದಡಿಯೂ ಇಲ್ಲವಾಗಿದೆ.
ಈ ಅಣೆಕಟ್ಟಿಗಾಗಿ ಈಗಾಗಲೇ ಖಾಸಗಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಹಲವಾರು ಮರಗಳನ್ನು ಕಡಿದಿರುವ ಕುರುಹುಗಳೂ ಕಾಣಸಿಗುತ್ತವೆ. ಈ ಪರಿಸ್ಥಿತಿ ಕೇವಲ ಎತ್ತಿನ ಹಳ್ಳದ್ದು ಮಾತ್ರವಲ್ಲ. ಯೋಜನೆಗಾಗಿ ಒಟ್ಟು ಎಂಟು ಅಣೆಕಟ್ಟು ನಿರ್ಮಾಣವಾಗಲಿರುವ ಇತರ ಹಳ್ಳ ಹೊಳೆಗಳಲ್ಲೂ ನೀರಿನ ಹರಿವೇ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ 13,000 ಕೋಟಿ ರೂ.ಗಳ ಈ ಯೋಜನೆ ಮುಂದಿನ ದಿನಗಳಲ್ಲಿ ಪರಮಶಿವಯ್ಯ ವರದಿಯಂತೆ ನೇತ್ರಾವತಿ ನದಿ ತಿರುವಿನ ಹುನ್ನಾರ. ಮುಂದಿನ ದಿನಗಳಲ್ಲಿ ಕುಮಾರಧಾರಾ, ಕೆಂಪುಹೊಳೆಯೂ ಆಪೋಶನವಾಗಲಿವೆೆ ಎಂಬ ಪರಿಸರ ಹೋರಾಟಗಾರರ ವಾದವನ್ನು ಸಮರ್ಥಿಸುವಂತಿದೆ.
ಎತ್ತಿನಹಳ್ಳದಲ್ಲಿ ನಿರ್ಮಾಣವಾಗುತ್ತಿರುವ ಅಣೆಕಟ್ಟು ಶಿರಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇದೆ. ಸುಮಾರು 50 ಮೀಟರ್ ಸಮೀಪದಲ್ಲೇ ಅಣೆಕಟ್ಟು ನಿರ್ಮಾಣ ಹಂತದಲ್ಲಿದ್ದು, ಹೆದ್ದಾರಿಗೂ ಭೂಕುಸಿತದ ಅಪಾಯವನ್ನು ಆಹ್ವಾನಿಸುವಂತಿದೆ. ಇನ್ನು ಈ ಯೋಜನಾ ವ್ಯಾಪ್ತಿಯಲ್ಲೇ ಆನೆ ಕಾರಿಡಾರ್, ರೈಲ್ವೆ ಹಳಿಗಳಲ್ಲಿ ಇವೆ ಎಂಬುದು ಗಮನಾರ್ಹ ಸಂಗತಿ. ಮರಗಳನ್ನು ಕಡಿದಾಗಿದೆ… ಕೇಸೂ ಆಗಿದೆ!
ಎತ್ತಿನ ಹೊಳೆ ಯೋಜನೆಗಾಗಿ ಒಂದೇ ಒಂದು ಮರವನ್ನು ಕಡಿಯಲಾಗುವುದಿಲ್ಲ ಎಂದು ಅರಣ್ಯ ಸಚಿವ ರಮಾನಾಥ ರೈ ಈಗಾಗಲೇ ಸ್ಪಷ್ಟನೆ ನೀಡಿದ್ದರು. ಆದರೆ, ಯೋಜನೆಗಾಗಿ ಸಕಲೇಶಪುರ ತಾಲೂಕಿನ ಕುಂಬರಡಿ ಸರ್ವೆ ನಂ. 1 ಮತ್ತು ಕೆಸಗಾನಹಳ್ಳಿ ಸರ್ವೆ ನಂ. 16ರಲ್ಲಿ ಅರಣ್ಯ ಇಲಾಖೆ ಅನುಮತಿ ಇಲ್ಲದೆ ಮರಗಳನ್ನು ಕಡಿದು ಕಾಮಗಾರಿ ನಡೆಸಿರುವ ಆರೋಪದ ಮೇಲೆ ತೋಟಗಳ ಮಾಲಕರು ಹಾಗೂ ಗುತ್ತಿಗೆದಾರ ಕಂಪೆನಿಯ ಮುಖ್ಯಸ್ಥರ ಮೇಲೆ ವಲಯ ಅರಣ್ಯ ಇಲಾಖೆ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಾಗಿದೆ. ಯೋಜನೆಗಾಗಿ ಈಗಾಗಲೇ ಸುಮಾರು 500ರಷ್ಟು ಮರಗಳನ್ನು ಈಗಾಗಲೇ ಕಡಿಯಲಾಗಿದೆ ಎಂಬ ಆರೋಪವಿದೆ. ರೈತರ ಗದ್ದೆಗಳಲ್ಲಿ ರಾಶಿ ರಾಶಿ ಪೈಪುಗಳು!
ಸಕಲೇಶಪುರದ ಸತ್ತಿಗಾಲ, ಹೆಬ್ಬಸಾಲೆ ಗ್ರಾಮಗಳ ರೈತರ ಖಾಸಗಿ ಜಮೀನುಗಳಲ್ಲಿ ಯೋಜನೆಗಾಗಿನ 10.5 ಅಡಿ ಹಾಗೂ 12 ಅಡಿ ವ್ಯಾಸವುಳ್ಳ ಬೃಹದಾಕಾರದ ಪೈಪುಗಳು ಸಿದ್ಧಗೊಂಡು ರಾಶಿ ರಾಶಿಯಾಗಿ ಬಿದ್ದಿರುವುದನ್ನು ನೋಡಿದಾಗ ಯೋಜನೆಯ ವ್ಯಾಪ್ತಿ ಹಾಗೂ ಅಪಾಯವನ್ನು ಊಹಿಸಲಾಗದು. ಹಣದ ಆಮಿಷ ತೋರಿ ಇಲ್ಲಿನ ಕೆಲ ರೈತರ ಕೃಷಿ ಭೂಮಿಯನ್ನು ಎಕರೆಗೆ ಸುಮಾರು ವಾರ್ಷಿಕ 70,000 ರೂ.ಗಳಲ್ಲಿ ಭೋಗ್ಯಕ್ಕೆ ಪಡೆಯಲಾಗಿದೆ ಎನ್ನಲಾಗುತ್ತದೆ. ಆದರೆ, ಈ ಬಗ್ಗೆ ಅಧಿಕೃತ ದಾಖಲೆಗಳೇನೂ ಇಲ್ಲ. ಇನ್ನು ಕೆಲವು ಕಡೆ ಯೋಜನೆಯ ಗುತ್ತಿಗೆದಾರ ಕಂಪೆನಿಯು ಕೋಟಿಗಟ್ಟಲೆ ಹಣದ ಆಮಿಷವೊಡ್ಡಿ ರೈತರಿಂದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಆರೋಪವೂ ಇದೆ.
‘‘ಶೀಟುಗಳ ರೂಪದಲ್ಲಿ ಬಂದ ಕಬ್ಬಿಣದ ಹಾಳೆಗಳನ್ನು ಪೈಪುಗಳನ್ನಾಗಿಸುವ ಕಾರ್ಯ ಹೆಬ್ಬಸಾಲೆ ಹಾಗೂ ಸತ್ತಿಗಾಲದ ರೈತರ ಖಾಸಗಿ ಗದ್ದೆಗಳಲ್ಲಿ ನಡೆದಿದ್ದು, ಇದರಿಂದ ಕಬ್ಬಿಣದ ಚೂರುಗಳು ಈಗಾಗಲೇ ಭೂಮಿಯನ್ನು ಸೇರಿಕೊಂಡಿವೆ. ಈ ಭೂಮಿಯಲ್ಲಿ ಮುಂದೆ ಕೃಷಿ ಮಾಡಲು ಸಾಧ್ಯವಿಲ್ಲ’’ ಎನ್ನುವುದು ಸ್ಥಳೀಯ ರೈತರ ಆತಂಕ. ಮಳೆಗಾಲದಲ್ಲೇ ಹಳ್ಳ, ಹೊಳೆಗಳಲ್ಲಿ ಒಂದಡಿಯೂ ಇಲ್ಲದ ನೀರನ್ನು ಸಂಗ್ರಹಿಸಿ ಈ ಬೃಹದಾಕಾರದ ಪೈಪುಗಳಲ್ಲಿ ಹರಿಸುವುದೆಂದರೆ ಅದು ನಿಜಕ್ಕೂ ಹಾಸ್ಯಾಸ್ಪದ. ಹಾಗಿರುವಾಗ ಈ ಯೋಜನೆಯ ಮುಂದಿನ ದಿಕ್ಕು, ಪೋಲಾಗುವ ಜನರ ಹಣದ ಬಗ್ಗೆ ಯಾಕೆ ಸರಕಾರ ಜನರಿಗೆ ವಾಸ್ತವಾಂಶವನ್ನು ಬಹಿರಂಗಪಡಿಸುತ್ತಿಲ್ಲ? ಇದು ಬಯಲು ಸೀಮೆಯ ಜನರನ್ನು ಮರಳು ಮಾಡುವ ಜನಪ್ರತಿನಿಧಿಗಳ ತಂತ್ರ ಮಾತ್ರವೇ? ಈಗಾಗಲೇ ಯೋಜನೆ ಹೆಸರಿನಲ್ಲಿ ಕೋಟಿಗಟ್ಟಲೆ ಖರ್ಚಾಗಿರುವ ಹಣ ನೀರಲ್ಲಿ ಮಾಡಿದ ಹೋಮದಂತೆ ವ್ಯರ್ಥವೇ? ಒಂದು ಭಾಗದ ಜನರ ಕಣ್ಣೊರೆಸಲು ಹೋಗಿ ಮತ್ತೊಂದು ಭಾಗದ ಜನರ ಕಣ್ಣಿನಿಂದ ರಕ್ತ ಹರಿಸಲು ಸರಕಾರ ಹೊಂಚು ಹಾಕುತ್ತಿದೆಯೇ? ಎಂಬ ಹಲವಾರು ಪ್ರಶ್ನೆಗಳಿಗೆ ರಾಜ್ಯ ಸರಕಾರ ಸ್ಪಷ್ಟವಾಗಿ ಉತ್ತರಿಸಲೇ ಬೇಕಾಗಿದೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ‘‘ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ’’ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ರಾಜ್ಯದ ಆರೋಗ್ಯ ಸಚಿವರು ಹಾಗೂ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಯು.ಟಿ.ಖಾದರ್, ಎತ್ತಿನಹೊಳೆ ಯೋಜನೆಯಿಂದ ಜನರಿಗೆ ಅನ್ಯಾಯವಾಗದು. ಮಳೆಗಾಲದಲ್ಲಿ ಸಮುದ್ರ ಸೇರುವ ನೀರನ್ನು ಬಯಲು ಸೀಮೆಯ ಜನರಿಗೆ ಕುಡಿಯಲು ಒದಗಿಸುವ ಯೋಜನೆಯಿದು ಎಂದು ಹೇಳುತ್ತಾರೆ.
ಸಂಸದ ನಳಿನ್ ಕುಮಾರ್, ಜನತೆಯನ್ನು ಕತ್ತಲಲ್ಲಿಟ್ಟು ಯೋಜನೆಯನ್ನು ಮಾಡಬಾರದು. ಈ ಬಗ್ಗೆ ಸಮೀಕ್ಷೆ ಮಾಡಬೇಕು. ಜನ ಎಚ್ಚೆತ್ತುಕೊಳ್ಳುವ ಮೊದಲು ದ.ಕ.ಜಿಲ್ಲೆಯಲ್ಲಿ ಸಭೆ ನಡೆಸಿ ತಜ್ಞರ ಮೂಲಕ ಹೋರಾಟಗಾರರು ಹಾಗೂ ಜನರಿಗೆ ಮನವರಿಕೆ ಮಾಡುವ ಕೆಲಸ ಸರಕಾರದಿಂದ ಆಗಬೇಕೆಂದು ಹೇಳುತ್ತಾರೆಯೇ ಹೊರತು ಯೋಜನೆಯನ್ನು ವಿರೋಧಿಸುವುದಾಗಿ ಹೇಳುವುದಿಲ್ಲ. ಈ ನಡುವೆ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಈ ಯೋಜನೆ ಸರಕಾರದ ತಪ್ಪು ನಡೆಯಾಗಿದೆ ಎನ್ನುತ್ತಾರೆ.
ತೀವ್ರ ಸ್ವರೂಪ ಪಡೆಯಬೇಕಿದೆ ಹೋರಾಟದ ಕಿಚ್ಚು
ಸಕಲೇಶಪುರದಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿಸಿ ಸಾಕಷ್ಟು ಹೋರಾಟಗಳು ನಡೆದಿವೆ. ಇದೀಗ ಯೋಜನೆಯಿಂದ ಸಂತ್ರಸ್ತರಾಗಲಿರುವ ದ.ಕ. ಜಿಲ್ಲೆಯ ಹೋರಾಟಗಾರರ ಜತೆಯಲ್ಲಿ ತಮ್ಮ ಹೋರಾಟವನ್ನು ಪ್ರಬಲಗೊಳಿಸಲಿದ್ದೇವೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ತಿಳಿಸಿದೆ.
ಯೋಜನೆಯಿಂದ ಅತ್ಯಧಿಕ ಸಂತ್ರಸ್ತರಾಗಲಿರುವವರು ದ.ಕ. ಜಿಲ್ಲೆಯ ಜನರು. ಇದೀಗ ಒಗ್ಗಟ್ಟಿನ ಪ್ರದರ್ಶನಕ್ಕೆ ಕರೆ ನೀಡಿರುವ, ಯೋಜನೆಯ ಕುರಿತಂತೆ ಆರಂಭದಿಂದಲೂ ಧ್ವನಿ ಎತ್ತಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಸಹ್ಯಾದ್ರಿ ಸಂರಕ್ಷಣಾ ಸಂಚಯ ವೇದಿಕೆಯೂ ಮತ್ತಷ್ಟು ಪರಿಣಾಮಕಾರಿ ಹೋರಾಟಕ್ಕೆ ಸಿದ್ಧತೆ ನಡೆಸಿದೆ. ಕುಡಿಯಲು ನೀರು ನೀಡಲು ಯಾರಿಂದಲೂ ವಿರೋಧವಿಲ್ಲ. ಆದರೆ ಕರಾವಳಿ ಹಾಗೂ ಮಲೆನಾಡಿನ ನೀರಿನ ಮೂಲಗಳು ಬತ್ತಿರುವಾಗ ನೀರೇ ಇಲ್ಲದ ಯೋಜನೆಗಾಗಿ ಸಾರ್ವಜನಿಕರ ಹಣವನ್ನು ಪೋಲು ಮಾಡುವ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುವುದು ಅನಿವಾರ್ಯ.
ಮಳೆ ಇಲ್ಲದೆ ಭೂಮಿ ಪಾಳು ಬಿದ್ದಿದೆ: ರೈತನ ಆತಂಕವಿದು :
‘‘ಈ ವರ್ಷ ಮಳೆಯಿಲ್ಲದೆ ಇಲ್ಲಿನ ಹಲವಾರು ಗದ್ದೆಗಳು ಪಾಳು ಬಿದ್ದಿವೆ. ಪ್ರತಿ ವರ್ಷ ಇಲ್ಲಿನ ಗದ್ದೆಗಳಲ್ಲಿ ಭತ್ತ ಬೆಳೆಯಲಾಗುತ್ತದೆ. ಮಳೆಗಾಲದಲ್ಲಿ ಹೇಮಾವತಿ ಉಕ್ಕಿ ಹರಿಯುವುದರಿಂದ ಮಂಡಿವರೆಗೂ ಇಲ್ಲಿನ ಗದ್ದೆಗಳ ಸುತ್ತಮುತ್ತ ನೀರಿರುತ್ತದೆ. ಆದರೆ ಈ ವರ್ಷ ಗದ್ದೆಗಳೆಲ್ಲಾ ಒಣಗಿವೆ. ಕೆಲ ವಿದ್ಯಾವಂತ ರೈತರು ನಮ್ಮ ಗದ್ದೆಗಳನ್ನು ಪೈಪು ಹಾಕಲು ಕೊಟ್ಟಿದ್ದಾರೆ. ನಮ್ಮಲ್ಲಿ ಕೊಡಲು ಅಷ್ಟೊಂದು ಭೂಮಿಯೂ ಇಲ್ಲ. ಹಣದ ಆಸೆಯೂ ನಮಗಿಲ್ಲ’’ ಎನ್ನುವುದು ಹೆಬ್ಬಸಾಲೆ ಸಮೀಪದ ಗ್ರಾಮದ ಸಾಮಾನ್ಯ ರೈತ ದೊಡ್ಡಯ್ಯರ ಆತಂಕ ನುಡಿಗಳಿವು.
ನೀರೆತ್ತಲು ವಿದ್ಯುತ್ ಎಲ್ಲಿಂದ ತರುತ್ತಾರೆ?
ಶಿರಾಡಿ ಘಾಟಿ ದುರಸ್ತಿಯ ಸಮಯದಲ್ಲಿ ಬಂದ್ ಆಗಿದ್ದ ವೇಳೆ ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಇಲ್ಲಿ ಪೈಪ್‌ಗಳ ರಚನೆ, ಶಿರಾಡಿ ಹೆದ್ದಾರಿಯ ಪಕ್ಕ ಎತ್ತಿನಹಳ್ಳದಲ್ಲಿ ಅಣೆಕಟ್ಟು ನಿರ್ಮಾಣ ಕಾಮಗಾರಿ ತರಾತುರಿಯಲ್ಲಿ ಯಾರಿಗೂ ತಿಳಿಯದಂತೆ ನಡೆದಿದೆ. ಅಣೆಕಟ್ಟುಗಳಿಂದ ನೀರನ್ನು ಎತ್ತಿ ಪೈಪುಗಳ ಮೂಲಕ ಹರಿಸಲು ವಿದ್ಯುತ್‌ನ ಅಗತ್ಯವಿದೆ. ಯೋಜನೆಯ ಪ್ರಕಾರ ಸುಮಾರು 270 ಮೆಗಾವ್ಯಾಟ್‌ನಷ್ಟು ವಿದ್ಯುತ್ ಬೇಕಾಗಿದೆ. ಅದನ್ನು ಹರಿಯುವ ನೀರಿನಿಂದಲೇ ಉತ್ಪಾದಿಸುವ ಆಲೋಚನೆಯೂ ಈ ಯೋಜನೆಯೊಳಗಿದೆ.
ಆದರೆ ವಾಸ್ತವವಾಗಿ ನೀರೆತ್ತಲು 500 ಮೆಗಾವ್ಯಾಟ್‌ಗೂ ಅಧಿಕ ವಿದ್ಯುತ್‌ನ ಅಗತ್ಯವಿದೆ. ಇಷ್ಟೊಂದು ಪ್ರಮಾಣದ ವಿದ್ಯುತ್‌ಗಾಗಿ ಮುಂದೆ ನಿಡ್ಡೋಡಿ ಜಲವಿದ್ಯುತ್ ಯೋಜನೆಯನ್ನು ಕಾರ್ಯಗತಗೊಳಿಸಬಹುದೇನೋ ಎಂಬ ಆತಂಕ ದ.ಕ. ಜಿಲ್ಲಾ ಪರಿಸರ ಹೋರಾಟಗಾರದು.
ವಿಶೇಷ ವರದಿ: ಸತ್ಯಾ ಕೆ. / ಕೃಪೆ : ವಾರ್ತಾಭಾರತಿ