ಕನ್ನಡ ವಾರ್ತೆಗಳು

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ಮಂಗಳೂರು ಸೇರ್ಪಡೆ

Pinterest LinkedIn Tumblr

Smart_city_mangalor

ಮಂಗಳೂರು, ಆ. 28: ಕೇಂದ್ರ ಸರಕಾರದ ಐದು ವರ್ಷಗಳ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ 98 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಆರು ನಗರಗಳಲ್ಲಿ ಮಂಗಳೂರು ಸೇರಿದೆ. ಅತ್ಯಾಧುನಿಕ ಮೂಲಭೂತ ಸೌಲಭ್ಯ ಗಳೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ನಗರ ಗಳ ಜನರನ್ನು ಸ್ಮಾರ್ಟ್‌ಗೊಳಿಸುವ ಐದು ವರ್ಷ ಗಳ ಕೇಂದ್ರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯಾಗಿದ್ದು, ಇದೀಗ ಸ್ಮಾರ್ಟ್ ಸಿಟಿ ಪಟ್ಟಿ ಯಲ್ಲಿರುವ 98 ನಗರಗಳು ಭಾರತ ಸರಕಾರದ ನಗರಾಭಿವೃದ್ಧಿ ಸಚಿವಾಲಯ ಆಯ್ಕೆ ಮಾಡಿರುವ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಾರ್ಪೊರೇಶನ್ ಸಂಸ್ಥೆಯ ಸಮಗ್ರ ಯೋಜನಾ ವರದಿ(ಡಿಪಿಆರ್)ಯ ಆಧಾರದಲ್ಲಿ ಪ್ರಥಮ ಹಂತದ ಸ್ಮಾರ್ಟ್ ಸಿಟಿ ಯೋಜನೆಗೆ 20 ನಗರಗಳನ್ನು ಆಯ್ಕೆ ಮಾಡಲಾಗುತ್ತದೆ.

ನಿರಂತರ ಕುಡಿಯುವ ನೀರು, ವಿದ್ಯುತ್ ಸರಬರಾಜು, ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ, ವ್ಯವಸ್ಥಿತ ನಗರ ಸಾರಿಗೆ, ನಗರದ ಬಡಜನರಿಗೆ ಕಡಿಮೆ ದರದಲ್ಲಿ ವಸತಿ ಒದಗಿಸುವುದು, ಮಾಹಿತಿ ತಂತ್ರಜ್ಞಾನದ ಅನುಷ್ಠಾನ, ಇ ಗವರ್ನೆನ್ಸ್ ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಆರೋಗ್ಯ ಮತ್ತು ಶಿಕ್ಷಣ ಸ್ಮಾರ್ಟ್ ಸಿಟಿಯ ಪ್ರಮುಖ ಗುರಿ.

ಇದೀಗ ಕೇಂದ್ರ ಸರಕಾರದಿಂದ ಸ್ಮಾಟ್ ಸಿಟಿಗೆ ಪ್ರಥಮ ಹಂತದಲ್ಲಿ ಆಯ್ಕೆಯಾಗುವ 20 ನಗರಗಳಲ್ಲಿಯೂ ಮಂಗಳೂರು ಸ್ಥಾನ ಪಡೆಯುವ ನಿರೀಕ್ಷೆಯನ್ನು ಹೊಂದಲಾಗಿದೆ. ಡಿಪಿಆರ್ ವರದಿಯಲ್ಲಿ ನಗರದಲ್ಲಿ ಈಗಾಗಲೇ ಇರುವ ಮೂಲಭೂತ ಸೌಕರ್ಯಕ್ಕೆ 30 ಅಂಕಗಳು ಹಾಗೂ ಭವಿಷ್ಯದಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಗಳು, ಅಭಿವೃದ್ಧಿ ಹಾಗೂ ಜನರ ಸಹಭಾಗಿತ್ವ, ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿ 70 ಅಂಕಗಳನ್ನು ನೀಡಲಾಗುತ್ತದೆ. ಅದರ ಆಧಾರದಲ್ಲಿ ಕೇಂದ್ರವು ಪ್ರಥಮ ಹಂತದಲ್ಲಿ ಪ್ರಥಮ ವರ್ಷಕ್ಕೆ 20 ನಗರಗಳನ್ನು ಆಯ್ಕೆ ಮಾಡಲಿದೆ.

ಈಗಾಗಲೇ ಜಲ, ವಾಯು ಹಾಗೂ ನೆಲಮಾರ್ಗಗಳ ವಿಸ್ತೃತ ಸಂಪರ್ಕ ವ್ಯವಸ್ಥೆ, ಕ್ರೀಡಾ ನಗರ, ಆರೋಗ್ಯವಂತ ನಗರ, ಸೈಬರ್ ಸಿಟಿ, ನಾಲೆಡ್ಜ್ ಸಿಟಿಯಾಗಿ ಅಭಿವೃದ್ಧ್ದಿಯಾಗುತ್ತಿರುವುದರಿಂದ ಪ್ರಥಮ ಹಂತದಲ್ಲೇ ಮಂಗಳೂರು ನಗರ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ. ನವಮಂಗಳೂರು ಬಂದರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೈಸೂರು, ಪಾಲ್ಘಾಟ್, ಕೊಂಕಣ ರೈಲ್ವೆ ಹೀಗೆ ಮೂರು ರೈಲ್ವೆ ವಿಭಾಗಗಳ ಸಂಪರ್ಕ ಕೊಂಡಿ, ನಾಲ್ಕು ಹೆದ್ದಾರಿಗಳ ಸಂಪರ್ಕ ವ್ಯವಸ್ಥೆ, ಸುಂದರವಾದ ಸಮುದ್ರ ತೀರ ಇವುಗಳು ಮಂಗಳೂರಿನ ಪಾಲಿಗೆ ಧನಾತ್ಮಕ ಅಂಶಗಳಾಗಿವೆ.

ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಲು ಬೇಕಾದ 13 ಮಾನದಂಡಗಳಡಿ ಮಂಗಳೂರು ಸೇರಿದಂತೆ ರಾಜ್ಯದ ಆರು ನಗರಗಳನ್ನು ಆಯ್ಕೆ ಮಾಡಿ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಕಳುಹಿಸಿತ್ತು. ರಾಜ್ಯದಲ್ಲಿ ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿ, ನಗರವು 96.88 ಅಂಕದೊಂದಿಗೆ ಗರಿಷ್ಠ ಅಂಕ ವನ್ನು ಪಡೆದುಕೊಂಡಿತ್ತು ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ನಗರದ ವಾಹನ ದಟ್ಟನೆ ಕಡಿಮೆ ಮಾಡುವುದು, ಸುವ್ಯವಸ್ಥಿತ ನಗರ ಸಾರಿಗೆ ಅಭಿವೃದ್ದಿ, ಪಾರ್ಕ್ ಮತ್ತು ಆಟದ ಮೈದಾನಗಳ ಅಭಿವೃದ್ಧಿ, ಮಾಲಿನ್ಯ ನಿಯಂತ್ರಣಕ್ಕಾಗಿ ವಿವಿಧ ಕ್ರಮ ಸೇರಿ ದಂತೆ ಹಲವು ಮಾನದಂಡಗಳೊಂದಿಗೆ ರಾಜ್ಯ ಮಟ್ಟದಲ್ಲಿ ಮೊದಲ ಹಂತದ ಆಯ್ಕೆಗೆ ವಿವಿಧ ಅಂಶಗಳನ್ನು ಪರಿಗಣಿಸಿ ಅಂಕಗಳನ್ನು ನೀಡಲಾಗಿತ್ತು. ಇದೀಗ ಡಿಪಿಆರ್ ವರದಿ ಆಧಾರದಲ್ಲಿ ಸ್ಮಾರ್ಟ್ ಸಿಟಿಗೆ ಆಯ್ಕೆ ಗೊಳ್ಳಲಿರುವ ನಗರಗಳು ಸ್ಮಾರ್ಟ್ ಸಿಟಿಯಲ್ಲಿ ಪ್ರಸ್ತಾವಿಸಿದ ಅಭಿವೃದ್ಧಿ ಯೋಜನೆಗಳನ್ನು ಎಸ್‌ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಸಮಿತಿಯ ಮೇಲುಸ್ತುವಾರಿಯ ಮೂಲಕ ಕಾರ್ಯರೂಪಕ್ಕೆ ತರಬೇಕಾಗಿದೆ. ಇದಕ್ಕಾಗಿ ಪ್ರಥಮ ವರ್ಷದಲ್ಲಿ 200 ಕೋ. ರೂ., ನಂತರದ 3 ವರ್ಷಗಳಲ್ಲಿ ಪ್ರತೀ ವರ್ಷ 100 ಕೋ.ರೂ.ನಂತೆ 300 ಕೋ. ರೂ. ಸೇರಿ ಒಟ್ಟು 500 ಕೋ.ರೂ. ನಗರಕ್ಕೆ ಬಿಡುಗಡೆಯಾಗಲಿದೆ.

Write A Comment