ಕುಂದಾಪುರ: ಉಪ್ಪುಂದ ಜನತಾ ಕಾಲೋನಿಯಲ್ಲಿ ಮನೆ ಮನೆಯಿಂದ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಅಕ್ರಮವಾಗಿ ಕೊಂಡೊಯ್ಯುತ್ತಿದ್ದ ವ್ಯಕ್ತಿ ಹಾಗೂ ಆತನ ಮಾರುತಿ ಒಮ್ನಿ ಕಾರನ್ನು ಆಹಾರ ನಿರೀಕ್ಷಕರು (ಫುಡ್ ಇನ್‌ಸ್ಪೆಕ್ಟರ್) ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ.
ಆರೋಪಿಯನ್ನು ಕುಂದಾಪುರ ಮೂಲದ ಮಹಮ್ಮದ್ ನಾಸೀರ್ ಎಂದು ಗುರುತಿಸಲಾಗಿದೆ.
ಈತ ಉಪ್ಪುಂದ ಜನತಾ ಕಾಲನಿಯಲ್ಲಿ ಪ್ರತಿ ಮನೆ-ಮನೆಗೂ ತೆರಳಿ ಪಡಿತರ ಅಕ್ಕಿಯನ್ನು ಕೆಜಿಗೆ ರೂ.11ರಂತೆ ಖರೀದಿಸುತ್ತಿದ್ದ. ಒಟ್ಟು 833 ಕೆಜಿ ಅಕ್ಕಿ ಕಾರಿನಲ್ಲಿದ್ದು, ಇದರ ಮೌಲ್ಯ ಸುಮಾರು ರೂ.24,416 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಹಮ್ಮದ್ ನಾಸೀರ್‌ನನ್ನು ವಿಚಾರಿಸಿದಾಗ ಅಕ್ಕಿಯನ್ನು ಖರೀದಿಸಿ ತಂದಿರುವುದಾಗಿಯೂ ತಿಳಿಸಿದ್ದು, ಯಾವುದೇ ದಾಖಲೆಯನ್ನು ಹಾಜರು ಪಡಿಸಲು ವಿಫಲನಾಗಿದ್ದಾನೆ. ಸದ್ರಿ ಅಕ್ಕಿಯನ್ನು ಅನ್ನಭಾಗ್ಯದ ಪಡಿತರ ಅಕ್ಕಿ ಎಂಬುದಾಗಿ ಮೇಲ್ನೋಟಕ್ಕೆ ಸಾಬೀತಾಗಿದೆ. 833 ಕೆಜಿ ಅಕ್ಕಿಯನ್ನು ಹಾಗೂ ಓಮ್ನಿ ಕಾರನ್ನು (KM04-B1030) ವಶಪಡಿಸಿಕೊಂಡು ಕಾರಿನ ಡ್ರೈವರ್ ಮಹಮ್ಮದ್ ನಾಸೀರ್‌ರವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಗುರುವಾರ ಈ ಘಟನೆಯ ಕುರಿತು ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಕುಂದಾಪುರ ಫುಡ್ ಇನ್‌ಸ್ಪೆಕ್ಟರ್ ವಿ. ಚಂದ್ರಶೇಖರ್ ಮತ್ತು ತಂಡದವರು ಕಾರ್ಯಾಚರಣೆ ನಡೆಸಿದ್ದರು. ಉಪ್ಪುಂದ ಪಿಡಿಓ ಹರೀಶ್, ಗ್ರಾಪಂ ಕಾರ್ಯದರ್ಶಿ ನಾಗರಾಜ ದೇವಾಡಿಗ, ಗ್ರಾಮಲೆಕ್ಕಿಗ ಮಂಜುನಾಥ ತಂಡದಲ್ಲಿದ್ದರು.




