ಕನ್ನಡ ವಾರ್ತೆಗಳು

ಸೆಪ್ಟಂಬರ್ ಅಂತ್ಯದೊಳಗೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಹಾಗೂ ಎಟಿಎಂಗಳ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಎಸ್ಪಿ ಸೂಚನೆ

Pinterest LinkedIn Tumblr

Sp_sndy_bank_1

ಮಂಗಳೂರು, ಆಗಸ್ಟ್ .20: ಬ್ಯಾಂಕ್ ಖಾತೆದಾರರನ್ನು ನಾನಾ ರೀತಿಯ ಮೋಸ, ವಂಚನೆಯಿಂದ ತಪ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್ ಶಾಖೆಗಳು ಹಾಗೂ ಎಟಿಎಂಗಳಲ್ಲಿ ಸಮಗ್ರ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳುವಂತೆ ದ.ಕ. ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಎಸ್.ಡಿ. ಸೆಪ್ಟಂಬರ್ 30ರ ಗಡುವು ನೀಡಿದ್ದಾರೆ.

ನಗರದ ಸಿಂಡಿಕೇಟ್ ಬ್ಯಾಂಕ್‌ನ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಭದ್ರತಾ ಸಮಿತಿ ಸಭೆಯಲ್ಲಿ ಅವರು ಬ್ಯಾಂಕ್‌ನಿಂದ ಕೈಗೊಳ್ಳಬೇಕಾದ ಭದ್ರತಾ ವ್ಯವಸ್ಥೆಗಳ ಬಗ್ಗೆ ವಿವರ ನೀಡಿ ಈ ಗಡುವು ವಿಧಿಸಿದ್ದು, ತಪ್ಪಿದ್ದಲ್ಲಿ ಈ ಬಗ್ಗೆ ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿಗೆ ಪತ್ರ ಬರೆಯುವುದಾಗಿ ಹೇಳಿದರು.

Sp_sndy_bank_2

ಜಿಲ್ಲೆಯಲ್ಲಿರುವ ವಿವಿಧ ಬ್ಯಾಂಕ್‌ಗಳ ಶಾಖೆಗಳು, ಎಟಿಎಂಗಳ ಸಂಖ್ಯೆ, ಶಾಖೆಗಳಲ್ಲಿರುವ ಭದ್ರತಾ ವ್ಯವಸ್ಥೆ ಬಗ್ಗೆ ಸಮಗ್ರ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ಒದಗಿಸಬೇಕು ಎಂದು ಅವರು ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳಿಗೆ ತಾಕೀತು ಮಾಡಿದರು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಸೈಬರ್ ಭದ್ರತೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಸೂಚಿಸಿದ ಅವರು, ಡಾಟಾ ಸೆಂಟರ್ ಹಾಗೂ ಸರ್ವರ್‌ಗೆ ಭದ್ರತೆ ಒದಗಿಸುವಂತೆ ಸಲಹೆ ನೀಡಿದರು.

Sp_sndy_bank_3

ಬ್ಯಾಂಕ್‌ನ ಎಲ್ಲ ಶಾಖೆಗಳು ಹಾಗೂ ಎಟಿಎಂಗಳ ಒಳಗೆ, ಹೊರಗೆ ಹಾಗೂ ಪ್ರವೇಶದ್ವಾರದಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಅಳಡಿಸುವುದು ಕಡ್ಡಾಯ. ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಪಾವತಿಯ ಸಂದರ್ಭ ಸಂಬಂಧಪಟ್ಟ ಆನ್‌ಲೈನ್ ವೆಬ್‌ಸೈಟ್‌ಗಳು ಗ್ರಾಹಕರಿಗೆ ಒಟಿಪಿ (ವನ್ ಟೈಮ್ ಪಾಸ್‌ವರ್ಡ್) ನೀಡುವುದನ್ನು ಕಡ್ಡಾಯಗೊಳಿಸಬೇಕು. ಖಾಸಗಿಯಾಗಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡುವ ಸಂದರ್ಭ ಆತನ ವಿಳಾಸ ಹಾಗೂ ಹಿನ್ನೆಲೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಂದ ಖಾತರಿಪಡಿಸಿಕೊಂಡಿರಬೇಕು. ಸೈಬರ್ ಭದ್ರತೆ, ಆನ್‌ಲೈನ್ ಬ್ಯಾಂಕಿಂಗ್ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು. ಭದ್ರತಾ ಸಿಬ್ಬಂದಿ ಹೊಂದಿರುವ ಬಂದೂಕು ಪರವಾನಿಗೆ ಹೊಂದಿರುವುದನ್ನು ಖಾತರಿಪಡಿಸಬೇಕು ಎಂದು ಎಸ್ಪಿ ಡಾ. ಶರಣಪ್ಪ ಬ್ಯಾಂಕ್‌ಗಳಿಗೆ ಸೂಚನೆ ನೀಡಿದರು.

ಖಾತೆ ತೆರೆದು ಅಲ್ಪಾವಧಿಯಲ್ಲಿ ಅದನ್ನು ಸ್ಥಗಿತಗೊಳಿಸುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರ ಗಮನಕ್ಕೆ ತಂದಲ್ಲಿ ಸಾಕಷ್ಟು ರೀತಿಯ ವಂಚನಾ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದು ಹೇಳಿದ ಅವರು, ಪದೇ ಪದೇ ಖಾತೆ ತೆರೆದು ಸ್ಥಗಿತಗೊಳಿಸುವವರನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಅಂತಹ ಖಾತೆಗಳ ೆುೀಲೆ ನಿಗಾ ಇರಿಸಲು ಸಾಧ್ಯವಾಗಲಿದೆ ಎಂದರು.

ಗುಣಮಟ್ಟದ್ದ ಸಿಸಿ ಕ್ಯಾಮರಾ ಆಳವಡಿಕೆ :
ಎಟಿಎಂ ಹಾಗೂ ಬ್ಯಾಂಕ್ ಶಾಖೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದರೂ ಅವುಗಳ ಗುಣಮಟ್ಟ ಅಥವಾ ಅಂಕಿ ಅಂಶ ಸಂಗ್ರಹದ ಸಮಯ ನಿಗದಿತವಾಗಿರುವುದರಿಂದ ಕಳ್ಳತನ, ದರೋಡೆ ಸಂದರ್ಭ ಆರೋಪಿಗಳ ಬಗ್ಗೆ ದಾಖಲಾಗಿರುತ್ತದೆ. ಆದರೆ, ಕ್ಯಾಮರಾಗಳ ಕಳಪೆ ಗುಣಮಟ್ಟದಿಂದ ಅವರ ಚಹರೆಯನ್ನು ಸರಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಹಾಗೂ ಎಟಿಎಂಗಳಿಗೆ ಪ್ರವೇಶ ಮಾಡುವ ಸಂದರ್ಭ ಬಾಗಿಲಿನ ಲಾಕ್ ತೆರೆಯಲು ಕಾರ್ಡ್ ಉಪಯೋಗಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಡಾ. ಶರಣಪ್ಪ ನಿರ್ದೇಶಿಸಿದರು.

ಆನ್‌ಲೈನ್ ವಂಚನೆ ಜಾಲದ ಬಗ್ಗೆ ಎಚ್ಚರ:
ಇತ್ತೀಚಿನ ದಿನಗಳಲ್ಲಿ ಅಪರಿಚಿತರು ದೂರವಾಣಿ ಕರೆ/ಇ-ಮೇಲ್/ಮೊಬೈಲ್ ಎಸ್ಸೆಮ್ಮೆಸ್ ಮೂಲಕ ಬ್ಯಾಂಕ್ ಖಾತೆಯ ವೈಯಕ್ತಿಕ ವಿವರಗಳನ್ನು, ಎ.ಟಿ.ಎಂ/ಡೆಬಿಟ್ ಕಾರ್ಡ್ ಸಂಖ್ಯೆ, ಎಟಿಎಂ ಪಾಸ್‌ವರ್ಡ್ ಸಿ.ವಿ.ಸಿ ಸಂಖ್ಯೆಗಳನ್ನು ಕೇಳುತ್ತಿದ್ದಾರೆ. ಸಾರ್ವಜನಿಕರು ಅವರಿಗೆ ಮಾಹಿತಿಗಳನ್ನು ನೀಡುವುದರಿಂದ ಅದನ್ನು ಉಪಯೋಗಿಸಿ ಬ್ಯಾಂಕ್ ಖಾತೆಯಿಂದ ಹಣ ಪಡೆಯುವುದು, ಆನ್‌ಲೈನ್ ಶಾಪಿಂಗ್ ಮಾಡಿರುವ ಪ್ರಕರಣಗಳು ದಾಖಲಾಗಿವೆ. ಇಂತಹ ಸಂದೇಶಗಳಿಗೆ, ಕರೆಗಳಿಗೆ ಸ್ಪಂದಿಸುವ ಮುಂಚಿತವಾಗಿ ಸರಿಯಾದ ಮಾಹಿತಿ ಖಚಿತಪಡಿಸಿದ ನಂತರವಷ್ಟೇ ವ್ಯವಹರಿಸಬೇಕು ಎಂದು ಎಸ್ಪಿ ಡಾ. ಶರಣಪ್ಪ ಸಾರ್ವಜನಿಕರಿಗೆ ಸಲಹೆ ನೀಡಿದರು.

ಲಾಕರ್ ಸೌಲಭ್ಯದ ಬಗ್ಗೆ ಮಾಹಿತಿ ಒದಗಿಸಿ:
ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಲ್ಲಿ ಹಣ ಅಥವಾ ಚಿನ್ನವನ್ನು ಇಡುವ ಪ್ರಕರಣಗಳಿದ್ದು, ಇದು ಕಳ್ಳತನ ಹಾಗೂ ದರೋಡೆಗಳಿಗೆ ಪ್ರೇರಣೆ ನೀಡಿದ ಹಲವು ಘಟನೆಗಳು ನಡೆದಿವೆ. ಹೆಚ್ಚಿನ ಗ್ರಾಹಕರಿಗೆ ಬ್ಯಾಂಕ್‌ಗಳಲ್ಲಿನ ಲಾಕರ್ ಸೌಲಭ್ಯದ ಬಗ್ಗೆ ಮಾಹಿತಿ ಇಲ್ಲವಾಗಿದ್ದು, ಈ ಬಗ್ಗೆ ಖಾತೆದಾರರಿಗೆ ಸ್ಥಳೀಯ ಭಾಷೆಯಲ್ಲಿ ಕರಪತ್ರಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವಂತೆ ಎಸ್ಪಿ ಡಾ.ಶರಣಪ್ಪ ಬ್ಯಾಂಕ್‌ಗಳಿಗೆ ಸಲಹೆ ನೀಡಿದರು. ಸಹಕಾರಿ ಬ್ಯಾಂಕ್‌ಗಳಲ್ಲಿ ಸಿಸಿ ಕ್ಯಾಮರಾ, ಬರ್ಗಲರ್ ಅಲರಾಂ, ಅಸಮರ್ಪಕ ಲಾಕರ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಹಲವಾರು ಪ್ರಕರಣಗಳ ಸಂದರ್ಭ ಗಮನಿಸಿದ್ದು, ಈ ಬಗ್ಗೆ ಸೂಕ್ತ ಗಮನ ಹರಿಸುವಂತೆ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ ಅವರಿಗೆ ಎಸ್ಪಿ ಸಲಹೆ ನೀಡಿದರು.

ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ಸುಳ್ಯ ಇನ್ಸ್‌ಪೆಕ್ಟರ್ ಸತೀಶ್ , ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭು ಅಳಗ, ಸಹಾಯಕ ಪೊಲೀಸ್ ಅಧೀಕ್ಷಕ ವಿ.ಶಾಂತ ಕುಮಾರ್, ಸಿಂಡಿಕೇಟ್ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ನಾರಾಯಣ ನಾಯ್ಡು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Write A Comment