ಕನ್ನಡ ವಾರ್ತೆಗಳು

ಉಳ್ಳಾಲ : ಕಾರನ್ನು ಅಡ್ಡಗಟ್ಟಿ ಗುಂಪಿನಿಂದ ಇಬ್ಬರ ಮೇಲೆ ಹಲ್ಲೆ : ಗಾಯಾಳುಗಳು ಆಸ್ಪತ್ರೆಗೆ ದಾಖಲು

Pinterest LinkedIn Tumblr

kallapu_attack_1

ಮಂಗಳೂರು, ಅ.20: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ಸುಮಾರು 100ಕ್ಕೂ ಹೆಚ್ಚು ಜನರ ಗುಂಪೊಂದು ಕಾರನ್ನು ಅಡ್ಡಗಟ್ಟಿ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದ್ದು, ಘಟನೆಯಿಂದ ಕೆಲಕಾಲ ಪರಿಸರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು, ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಲ್ಲೆಯಿಂದ ಗಾಯಗೊಂಡಿರುವ ತೊಕ್ಕೊಟ್ಟು ಕೃಷ್ಣ ನಗರದ ಪ್ರೀತೇಶ್ ಮತ್ತು ಉಳ್ಳಾಲ ಬೈಲು ನಿವಾಸಿ ಕವಿತ್ ಪೂಜಾರಿ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

kallapu_attack_2

ಪ್ರೀತೇಶ್ ಮತ್ತು ಕವಿತ್ ಅವರು ನಿನ್ನೆ ತಡರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆದಂ ಕುದ್ರು ಬಳಿ ಓವರ್ ಟೇಕ್ ವಿಷಯದಲ್ಲಿ ಅವರಿಗೂ ಮೀನು ಸಾಗಾಟದ ಟೆಂಪೋದಲ್ಲಿದ್ದವರಿಗೂ ಮಾತಿನ ಚಕಮಕಿ ನಡೆದಿತ್ತು. ಬಳಿಕ ಎರಡೂ ವಾಹನಗಳು ಅಲ್ಲಿಂದ ತೆರಳಿದ್ದವು.

ಆದರೆ ಪ್ರೀತೇಶ್ ಮತ್ತು ಕವಿತ್ ಅವರು ಕಲ್ಲಾಪು ಬಳಿ ತಲುಪಿದಾಗ ಅಲ್ಲಿ ಕಾದು ನಿಂತಿದ್ದ ಅನ್ಯಕೋಮಿಗೆ ಸೇರಿದ ಸುಮಾರು ನೂರರಷ್ಟಿದ್ದ ಜನರ ಗುಂಪು ಕಾರನ್ನು ತಡೆದು ನಿಲ್ಲಿಸಿದ್ದು, ಈ ಪೈಕಿ ಸುಮಾರು 10 ಜನರು ಕೈಗೆ ಸಿಕ್ಕ ವಸ್ತುಗಳಿಂದ ಅವರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಜನರನ್ನು ಚದುರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Write A Comment