ಮಂಗಳೂರು, ಆ.20:ಕರಾವಳಿ ಜಿಲ್ಲೆಗಳು ಸೇರಿದಂತೆ ನಾಡಿನಾದ್ಯಂತ ಬುಧವಾರ ಸಡಗರ ಸಂಭ್ರಮದಿಂದ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು. ನಾಗಕ್ಷೇತ್ರಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ: ಅಭಿಷೇಕ, ಅರ್ಚನೆಗೈದು ಭಕ್ತರು ಪುನೀತರಾದರು.
ದ.ಕ. ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರಗಳಾದ ಸುಬ್ರಹ್ಮಣ್ಯ, ಕುಡುಪು ಸೇರಿದಂತೆ ವಿವಿಧ ಕಡೆಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ಆರಂಭಗೊಂಡಿತು. ಶ್ರಾವಣ ಮಾಸದ ಮೊದಲ ಹಬ್ಬ ಇದಾಗಿದ್ದು, ವಿವಿಧೆಡೆ ನಾಗನ ಕಲ್ಲಿಗೆ ಹಾಲೆರೆಯುವ ಮೂಲಕ ಹಬ್ಬ ಆಚರಿಸಲಾಯಿತು.
ನಾಗರಪಂಚಮಿಯ ಅಂಗವಾಗಿ ವಿವಿಧೆಡೆ ನಾಗನ ಕಲ್ಲುಗಳಿಗೆ ಹಾಲೆರೆದು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುವ ದೃಶ್ಯ ಹೆಚ್ಚಾಗಿ ಕಂಡು ಬಂತು. ಬಿ.ಸಿ.ರೋಡಿನ ಶ್ರೀ ಚಂಡಿಕೇಶ್ವರೀ ದೇವಸ್ಥಾನ, ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನ ಹಾಗೂ ಶ್ರೀ ಅನ್ನಪೂರ್ಣೇಶ್ವರೀ ದೇವಿ ದೇವಸ್ಥಾನಗಳಲ್ಲಿ ಭಾರೀ ಸಂಖ್ಯೆಯ ಭಕ್ತಾದಿಗಳು ನಾಗನಿಗೆ ಹಾಲೆರೆದು ಪುನೀತರಾದರು.
ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆ, ರಸ್ತೆಬದಿಗಳಲ್ಲಿ ಹೂವು, ತರಕಾರಿ, ಹಣ್ಣು-ಹಂಪಲು ಸೇರಿದಂತೆ, ಹಿಂಗಾರ, ಅರಶಿನ ಎಲೆ ಮೊದಲಾದ ಪೂಜಾ ಸಾಮಾಗ್ರಿಗಳ ಖರೀದಿಯಲ್ಲಿ ಜನ ನಿರತರಾಗಿದ್ದು, ಎಲ್ಲಿ ನೋಡಿದರಲ್ಲಿ ಜನ ಜಾತ್ರೆಯೇ ಕಾಣಸಿಗುತ್ತಿತ್ತು.
ಪ್ರಸಿದ್ಧ ನಾಗಕ್ಷೇತ್ರಗಳಾದ ಶ್ರೀಕ್ಷೇತ್ರ ಸುಬ್ರಹ್ಮಣ್ಯ ಹಾಗೂ ಕುಡುಪು ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಸೇರುತ್ತಿದ್ದು, ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಶ್ರೀದೇವರ ಕೃಪೆಗೆ ಪಾತ್ರರಾದರು. ಸುಬ್ರಹ್ಮಣ್ಯ ದೇವಸ್ಥಾನದ ಆದಿ ಹಾಗೂ ಕುಡುಪಿನ ನಾಗಸನ್ನಿದಾನದಲ್ಲಿ ನಾಗನಿಗೆ ಹಾಲೆರೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.