ಅಮಾಸೆಬೈಲಿನಲ್ಲಿ ವಿವಿಧ ಶೈಕ್ಷಣಿಕ ವಲಯದ ಕಾರ್ಯಕ್ರಮಗಳಿಗೆ ಅನುದಾನ ವಿತರಣೆ
ಕುಂದಾಪುರ: ಸರಕರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆಯೆಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆ ಸರಕಾರ ಹಾಗೂ ಇಲಾಖೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಇಂತಹಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅವರಲ್ಲಿ ಶಿಕ್ಷಣದ ಬಗ್ಗೆ ಒಲವು ಮೂದಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ತಾಲೂಕು ಹಾಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಇಂತಹಾ ಕಾರ್ಯಕ್ರಮಗಳು ನಡೆಯಬೇಕದ ಅನಿವಾರ್ಯತೆ ಇದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸವಿತಾ ಕೋಟ್ಯಾನ್ ಅಭಿಪ್ರಾಯಪಟ್ಟರು.
ಅವರು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ (ರಿ.), ಅಮಾಸೆಬೈಲು ಗ್ರಾಮಪಂಚಾಯತ್, ಕರ್ಣಾಟಕ ಬ್ಯಾಂಕ್ (ಲಿ.) ಮಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳ ಇವರ ಜಂಟಿ ಆಶ್ರಯದಲ್ಲಿ ಅಮಾಸೆಬೈಲು ಪ್ರೌಢಶಾಲೆ ಆವರಣದಲ್ಲಿ ನಡೆದ ವಿವಿಧ ಶೈಕ್ಷಣಿಕ ವಲಯದ ಕಾರ್ಯಕ್ರಮಗಳಿಗೆ ಅನುದಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಚ್ಚಟ್ಟು ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಸರಕಾರ ಹಾಗೂ ಇಲಾಖೆ ಮಾಡಲಾಗದ ಕೆಲವು ಕಾರ್ಯಗಳನ್ನು ಸಂಘಸಂಸ್ಥೆಗಳು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಈ ನಿಟ್ಟಿನಲ್ಲಿ ಹಿರಿಯ ಮುತ್ಸದ್ಧಿ ಎ.ಜಿ. ಕೊಡ್ಗಿಯವರ ದೂರದೃಷ್ಟಿಯುಳ್ಳ ಚಿಂತನೆಗಳು ಹಾಗೂ ಇಚ್ಚಾಶಕ್ತಿಯಿಂದಲೇ ತೀರಾ ಹಿಂದುಳಿದ ನಕ್ಸಲ್ ಪೀಡಿತ ಗ್ರಾಮವೆಂದು ಹಣೆಪಟ್ಟಿ ಹೊತ್ತಿದ್ದ ಈ ಅಮಾಸೆಬೈಲು ಗ್ರಾಮ ಇಂದು ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭ ಸರಕಾರಿ ಪ್ರಾಥಮಿಕ ಶಾಲೆ ಅಮಾಸೆಬೈಲು ಇಲ್ಲಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಶ್ರೀ ಕ್ಷೇತ್ರ ಧ.ಗ್ರಾ. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ವಿತರಿಸಿದರು. ಅಮಾಸೆಬೈಲು ಪ್ರೌಢಶಾಲೆಗೆ ೭೦ ಸಾವಿರ ಮೌಲ್ಯದ ಪೀಠೋಪಕರಣ, ಜಿಲ್ಲಾ ಪಂಚಾಯತ್ ವತಿಯಿಂದ ನಿರ್ಮಾಣವಾದ ಕೃಷಿ ಮಾರುಕಟ್ಟೆ ಉದ್ಘಾಟನೆ, ಮಚ್ಚಟ್ಟು ಹಾಗೂ ರಟ್ಟಾಡಿ ಸರಕಾರಿ ಪ್ರಾಥಮಿಕ ಶಾಲೆಗಳ ಕಂಪ್ಯೂಟರ್ ಶಿಕ್ಷಕಿಯರಿಗೆ ವೇತನ ವಿತರಣೆ, ಸರಕಾರಿ ಪ್ರಾಥಮಿಕ ಶಾಲೆ ರಟ್ಟಾಡಿಗೆ ಶುದ್ಧ ಕುಡಿಯುವ ನೀರಿನ ಘಟಕ ವಿತರಣೆಯನ್ನು ಸಮಾರಂಭದಲ್ಲಿ ಉಪಸ್ಥಿತರಿದ್ದ ವಿವಿಧ ಗಣ್ಯರು ವಿತರಿಸಿದರು. ಅಲ್ಲದೇ ಇದೇ ಸಂದರ್ಭ ಎ.ಜಿ. ಕೊಡ್ಗಿಯವರ ತಂದೆ ದಿವಂಗತ ಕೃಷ್ಣಯ್ಯ ಕೊಡ್ಗಿಯವರ ಟ್ರಸ್ಟ್ ವತಿಯಿಂದ ಶಾಲೆಗಳಿಗೆ ಪೀಠೋಪಕರಣದ ಚೆಕ್ ವಿತರಿಸಲಾಯಿತು. ಸರಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯೋಪಧ್ಯಾಯ ಬಿ.ಎಸ್. ಶಂಕರನಾರಾಯಣ ಶಾಸ್ತ್ರೀ ಹಾಗೂ ಹಾಲಿ ಮುಖ್ಯೋಪಧ್ಯಾಯ ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು.
ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ. ಕೊಡ್ಗಿ ಅವರು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಟ್ರಸ್ಟ್ ಧ್ಯೇಯೋದ್ಧೇಶ ಹಾಗೂ ಕಾರ್ಯವೈಖರಿ ಬಗ್ಗೆ ತಿಳಿಸಿದರು. ಕರ್ನಾಟಕ ಬ್ಯಾಂಕ್ (ಲಿ) ಮಂಗಳೂರು ಇಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕ ಜಯರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು
ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಡಿಡಿಪಿಐ (ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಂಗ ಉಪನಿರ್ದೇಶಕ) ದಿವಾಕರ ಶೆಟ್ಟಿ, ಕುಂದಾಪುರ ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಡ್ತಿ, ಪ್ರೌಢಶಾಲೆ ಮುಖ್ಯೋಪಧ್ಯಾಯ ತಿಮ್ಮಪ್ಪ, ಭಾರತೀಯ ವಿಕಾಸ ಟ್ರಸ್ಟ್ ಅಧ್ಯಕ್ಷ ಕೆ.ಎಂ. ಉಡುಪ ಮೊದಲಾದವರಿದ್ದರು.
ಅಮಾಸೆಬೈಲು ಗ್ರಾ.ಪಂ. ಅಭಿವ್ರದ್ಧಿ ಅಧಿಕಾರಿ ಗೋಪಾಲ ದೇವಾಡಿಗ ವಂದಿಸಿ, ಸತ್ಯನಾರಾಯಣ ರಾವ್ ರಟ್ಟಾಡಿ ಕಾರ್ಯಕ್ರಮ ನಿರೂಪಿಸಿದರು.