ಮಂಗಳೂರು,ಆ.13 : ಬ್ಯಾರಿ ಭಾಷೆಯಲ್ಲಿ ಪ್ರಕಟಗೊಂಡ ಕೃತಿಗಳಿಗೆ ಮಾರುಕಟ್ಟೆ ಒದಗಿಸುವ ಮತ್ತು ಪ್ರಕಟಿತ ಎಲ್ಲ ಬ್ಯಾರಿ ಕೃತಿಗಳು, ಸಿ.ಡಿ.ಗಳು ಪ್ರತಿಯೊಬ್ಬ ಬ್ಯಾರಿ ಸಾಹಿತ್ಯಾಸಕ್ತರ ಮನೆ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಶೀಘ್ರ ಬ್ಯಾರಿ ಸಂಚಾರಿ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಹೇಳಿದ್ದಾರೆ.
ಅಕಾಡಮಿಯ ಪ್ರಸಕ್ತ ತಂಡ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಹಮ್ಮಿಕೊಂಡ “ವಾರ್ಷಿಕ ಅವಲೋಕನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಕಾಡಮಿಯ ಪ್ರಸಕ್ತ ಅವಧಿ ಪೂರ್ತಿಗೊಳಿಸುವ ಮುನ್ನ ಮಂಗಳೂರಿನಲ್ಲಿ ವಿಶ್ವ ಬ್ಯಾರಿ ಪ್ರತಿನಿಧಿ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ.2015 ರ ಅ.3ರಿಂದ 31 ರವರೆಗೆ ಮಂಗಳೂರು, ಉಡುಪಿ, ಬೆಂಗಳೂರು ಸಹಿತ ದೇಶ, ವಿದೇಶದಲ್ಲಿ ಬ್ಯಾರಿ ಭಾಷಾ ಮಾಸಾಚರಣೆ ಪ್ರಯುಕ್ತ ಕಾರ್ಯಕ್ರಮ ನಡೆಸಲಾಗುವುದು, ವಿವಿಧ ಬ್ಯಾರಿ ಕಲೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಬ್ಯಾರಿ ಕಲಾ ಸಂಭ್ರಮ ಆಚರಿಸಲಾಗುವುದು, ಬ್ಯಾರಿ ಅದ್ಯಯನಕಾರರಿಗೆ ಡಾ. ವಹಾಬ್ ದೊಡ್ಡಮನೆ ಸ್ಮಾರಕ ಮತ್ತು ಡಾ. ಸುಶೀಲಾ ಉಪಾಧ್ಯಾಯ ಸ್ಮಾರಕ ಬ್ಯಾರಿ ಮಹಿಳಾ ಸಾಹಿತಿಗೆ ಪ್ರಶಸ್ತಿಗಳನ್ನು ನೀಡಲಾಗುವುದು, ಸಮಗ್ರ ಬ್ಯಾರಿ ಕಥಾ ಸಂಕಲನ, ಸಮಗ್ರ ಬ್ಯಾರಿ ಕವನ ಸಂಕಲನ, ಬ್ಯಾರಿ ಸಾಹಿತ್ಯ ಚರಿತ್ರೆ ಕೃತಿಗಳನ್ನು ಹೊರತರಲು ನಿರ್ಧರಿಸಲಾಗಿದೆ ಎಂದು ಬಿ.ಎ.ಮುಹಮ್ಮದ್ ಹನೀಫ್ ಹೇಳಿದರು.
ದ.ಕ.ಜಿಲ್ಲಾ ಯೋಜನಾ ಸಮಿತಿಯ ಸದಸ್ಯ ಮುಸ್ತಫಾ ಸುಳ್ಯ, ಚಿಕ್ಕಮಗಳೂರು ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಕೆ.ಮುಹಮ್ಮದ್, ಬ್ಯಾಂಕ್ ಅಧಿಕಾರಿ ಅತ್ತೂರು ಚೈಯ್ಯಬ್ಬ, ಲೇಖಕ ಯಾಕೂಬ್ ಖಾದರ್ ಗುಲ್ವಾಡಿ, ಲೇಖಕಿ ಮರಿಯಂ ಇಸ್ಮಾಯೀಲ್ ಮಾತನಾಡಿದರು.
ವೈ,ಮುಹಮ್ಮದ್ ಬ್ಯಾರಿ, ಅಝೀಝ್ ಬೈಕಂಪಾಡಿ, ಅಝೀಝ್ ಹಕ್, ಹಂಝ ಮಲಾರ್, ಬಶೀರ್ ಅಹ್ಮದ್ ಕಿನ್ಯ, ಅಶ್ರಫ್ ಅಪೋಲೋ, ಅಬ್ದುರ್ರಹ್ಮಾನ್ ಕುತ್ತೆತ್ತೂರು, ಶರೀಫ್ ನಿರ್ಮುಂಜೆ, ಬಿ.ಎ.ಅಬೂಬಕರ್ ಕಲ್ಲಾಡಿ, ಶೌಕತ್ ಪಡುಬಿದ್ರಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯ ಅಬ್ಬಾಸ್ ಕಿರುಗುಂದ ಪ್ರಾಸ್ತಾವಿಸಿದರು. ಸದಸ್ಯ ಇದಿನಬ್ಬ ಬ್ಯಾರಿ ವಂದಿಸಿದರು. ಸದಸ್ಯ ಹಮೀದ್ ಗೋಳ್ತಮಜಲು ನಿರೂಪಿಸಿದರು.
ಸದಸ್ಯರಾದ ಯೂಸುಫ್ ವಕ್ತಾರ್, ಟಿ.ಎ.ಆಲಿಯಬ್ಬ ಜೋಕಟ್ಟೆ, ಹಮೀದ್ ಪಡುಬಿದ್ರಿ, ಆಯಿಶಾ ಪೆರ್ಲ ಉಪಸ್ಥಿತರಿದ್ದರು.