ಮಂಗಳೂರು,ಆಗಸ್ಟ್.13 : ‘ತುಳುನಾಡಿನ ಪ್ರಕೃತಿ ನೆಲ ಜಲ ಹಾಗೂ ಜನಜೀವನ ಕವಿ ಸಾಹಿತಿಗೆ ಸ್ಫೂರ್ತಿದಾಯಕ. ಇದು ಕವಿಗಳ ಸ್ವರ್ಗ. ಜನಪದ ಕಾವ್ಯಗಳ ಅಗಾಧ ಸೃಷ್ಟಿಗೆ ತುಳುನಾಡು ವಿಶ್ವದಲ್ಲೇ ಹೆಸರಾಗಿದೆ ‘ ಎಂದು ಸ್ವೀಕಾರ್ ಸಾಹಿತ್ಯ ಸಾಂಸ್ಕೃತಿಕ ಕೂಟದ ಅಧ್ಯಕ್ಷ, ಕವಿ ಅತ್ತಾವರ ಶಿವಾನಂದ ಕರ್ಕೇರ ಹೇಳಿದ್ದಾರೆ.
ಅವರು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಹಾಗೂ ‘ಸಿಂಗಾರ ‘ ತುಳುಸಂಘದ ಆಶ್ರಯದಲ್ಲಿ ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ‘ಆಷಾಢದಲ್ಲೊಂದು ಕವಿಕೂಟ ‘ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿಗಳಾದ ಭಾಸ್ಕರ ರೈ ಕುಕ್ಕುವಳ್ಳಿ, ಜೋಕಿಮ್ ಎಫ್. ಡಿ.ಸೋಜ, ಮಹೇಂದ್ರನಾಥ ಸಾಲೆತ್ತೂರು, ಎಂ.ಜೆ.ರಾವ್, ಎಡ್ವರ್ಡ್ ಡಿ.ಸೋಜ, ಕೃಷ್ಣ ಬಪ್ಪಾಲ್,ಮಾಲತಿ ಶೆಟ್ಟಿ ಮಾಣೂರು, ರೂಪಾ ಡಿ.ಎನ್. ಹಾಗೂ ವಿದ್ಯಾರ್ಥಿಗಳಾದ ಪ್ರಜ್ವಲ್ ಮತ್ತು ಮಂಗಳಾ ಸ್ವರಚಿತ ತುಳು ಕವನಗಳನ್ನು ಪ್ರಸ್ತುತ ಪಡಿಸಿದರು.
ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಾಸುದೇವ ಕಾಮತ್ ಕೆ. ಸ್ವಾಗತಿಸಿದರು. ಉಪನ್ಯಾಸಕ ಕೇಶವ ಪೂಜಾರಿ ವಂದಿಸಿದರು.