ಮಂಗಳೂರು,ಆ.13 : ‘ತುಳುನಾಡಿನ ದೈವಾರಾಧನೆ ಮತ್ತಿತರ ಆಚರಣೆಗಳನ್ನು ಮೂಢನಂಬಿಕೆಗಳೆಂದು ಹಳಿಯುವ ಮಂದಿ ನಮ್ಮ ಸಂಪ್ರದಾಯ ವಿಧಿವಿಧಾನಗಳನ್ನು ಹತ್ತಿರದಿಂದ ನೋಡುವ ಅಗತ್ಯವಿದೆ. ಆಷಾಢ ಮಾಸದಲ್ಲಿ ವೈಜ್ಞಾನಿಕ ಹಿನ್ನೆಲೆಯೊಂದಿಗೆ ಹಿಂದಿನವರು ನಡೆಸಿಕೊಂಡು ಬರುತ್ತಿದ್ದ ನಾನಾ ಚಟುವಟಿಕೆಗಳನ್ನು ತುಳುನಾಡಿನಲ್ಲಿ ಆಟಿ ಆಚರಣೆಯ ಮೂಲಕ ಈಗಿನ ತಲೆಮಾರಿಗೆ ಪರಿಚಯಿಸುತ್ತಿರುವುದು ಸ್ತುತ್ಯ. ಇದರಿಂದ ಅವೆಲ್ಲ ತುಳುವರ ಮೂಲನಂಬಿಕೆಯೆಂಬುದು ದೃಢವಾಗಿ ಪ್ರಕಟಗೊಳ್ಳವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದ್ದಾರೆ.
ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಮತ್ತು ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ‘ಸಿಂಗಾರ’ತುಳುಸಂಘದ ಆಶ್ರಯದಲ್ಲಿ ಇತ್ತೀಚೆಗೆ ಗುರುಪುರದಲ್ಲಿ ಜರಗಿದ ‘ಆಟಿದ ಕೂಟ’ ಕಾರ್ಯಕ್ರಮವನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ‘ಭಾಷಾವಾರು ಪ್ರಾಂತ್ಯ ರಚನೆಯ ಕಾಲದಲ್ಲಿ ರಾಜಕೀಯವಾಗಿ ತುಳುವರಿಗಾದ ಅನ್ಯಾಯವನ್ನು ಪ್ರತ್ಯೇಕ ತುಳುರಾಜ್ಯ ಬೇಡಿಕೆಯನ್ನು ಅನುಮೋದಿಸುವ ಮೂಲಕ ಸರಕಾರ ಸರಿಪಡಿಸಬೇಕಾಗಿದೆ ‘ ಎಂದವರು ನುಡಿದರು. ಗುರುಪುರದ ನಿವೃತ್ತ ಶಿಕ್ಷಕ ಕೂಸಪ್ಪ ಮಾಸ್ತರ್ ದೀಪ ಬೆಳಗಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶವಂತ ಆಳ್ವ ಕೆ. ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಕಿಶೋರ್ ಕುಮಾರ್ ರೈ ಶೇಣಿ ‘ಆಟಿ ವಿಶೇಷತೆ ‘ ಬಗ್ಗೆ ಮಾತನಾಡಿದರು. ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯೆ, ರಂಗ ನಟಿ ಜಯಶೀಲ, ಸಾಹಿತಿ ಅತ್ತಾವರ ಶಿವಾನಂದ ಕರ್ಕೇರ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯ ಕಿಟ್ಟಣ್ಣ ರೈ ಕಾರಮೊಗರು ಅತಿಥಿಗಳಾಗಿದ್ದರು. ಸ್ಥಳೀಯ ದಾನಿ ಶಂಕರ್ ರೈ ಯವರನ್ನು ಸಭೆಯಲ್ಲಿ ಗೌರವಿಸಲಾಯ್ತು.
ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಾಸುದೇವ ಕಾಮತ್ ಕೆ. ಸ್ವಾಗತಿಸಿದರು. ‘ಸಿಂಗಾರ ‘ತುಳುಸಂಘದ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ಪ್ರಸ್ತಾವನೆಗೈದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ರೂಪಾ ಡಿ.ಎನ್. ವಂದಿಸಿದರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಕಲಾ ತಂಡಗಳಿಂದ ಆಟಿ ಕಳೆಂಜ, ಪದ ಪಾಡ್ದನ ಮತ್ತು ವಣಸ್ ತೆನಸ್ ತೂಪರಿಕೆ ಜರಗಿತು.