ಬಂಟ್ವಾಳ, ಆ.10: ಸಜಿಪ ಮೂಡ ಗ್ರಾಮದ ಕಂದೂರು ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದ್ದ ನಾಸಿರ್ ಹತ್ಯೆ ಹಾಗೂ ರಿಕ್ಷಾ ಚಾಲಕ ಮುಸ್ತಫಾ ಎಂಬವರಿಗೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪನೇತೃತ್ವದ ಬಂಟ್ವಾಳ ಗ್ರಾಮಾಂತರ ಪೊಲೀಸರ ತಂಡ ಇಬ್ಬರು ಆರೋಪಿಗಳ ಸಹಿತ ಕೃತ್ಯಕ್ಕೆ ಬಳಸಲಾದ ಮಾರಕಾಯುಧವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿದಿದ್ದು, ತನಿಖಾ ಹಿತದೃಷ್ಟಿಯಿಂದ ಬಂಧಿತರ ಹೆಸರು ಬಹಿರಂಗ ಪಡಿಸಿಲ್ಲ. ಎಲ್ಲಾ ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪೊಲೀಸರ ನಿರೀಕ್ಷೆಯಂತೆ ಪೂರ್ವದ್ವೇಷದಿಂದ ಈ ಕೃತ್ಯ ನಡೆದಿರುವುದು ಬಯಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮಂಚಿ ಸಮೀಪದ ಕೋಕಳ ಎಂಬಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ, ದ್ವೇಷದಿಂದ ಆರೋಪಿಗಳು ಈ ಕೃತ್ಯವೆಸಗಿರುವುದು ಬಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.