ಮಂಗಳೂರು, ಆ.8: ನಗರದ ಪಚ್ಚನಾಡಿಯಲ್ಲಿ ಕಳೆದ ಶನಿವಾರ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿ, ರಥಪುಷ್ಪ ಹೂವನ್ನು ಕೈಯಲ್ಲಿ ಹಿಡಿದು ರೈಲನ್ನು ನಿಲ್ಲಿಸಿ ಸಂಭಾವ್ಯ ಅಪಘಾತವನ್ನು ತಪ್ಪಿಸಿದ ಫ್ರಾಂಕ್ಲಿನ್ ಫೆರ್ನಾಂಡಿಸ್ ಅವರ ಮನೆಗೆ ಸಂಸದ ನಳಿನ್ ಕುಮಾರ್ ಅವರು ಶುಕ್ರವಾರ ಖುದ್ದಾಗಿ ಭೇಟಿ ನೀಡಿ, ಫ್ರಾಂಕ್ಲಿನ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಬಳಿಕ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ನಡೆಯಲಿದ್ದ ಬಹುದೊಡ್ಡ ರೈಲ್ವೆ ಅವಘಡವನ್ನು ತಡೆಯುವ ಮೂಲಕ ಸಾಹಸ ಮೆರೆದ ಪಚ್ಚನಾಡಿಯ ಕೃಷಿಕ ಫ್ರಾಂಕ್ಲಿನ್ ಫೆರ್ನಾಂಡಿಸ್‌ರಿಗೆ ಕೇಂದ್ರ ರೈಲ್ವೆ ಇಲಾಖೆಯಿಂದ ವಿಶೇಷ ಪ್ರಶಸ್ತಿ ನೀಡುವ ಬಗ್ಗೆ ಇಲಾಖೆಯ ಜತೆಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ರೈಲ್ವೆ ಇಲಾಖೆ ವತಿಯಿಂದ ಈಗಾಗಲೇ ಪ್ರಮಾಣ ಪತ್ರ ಹಾಗೂ 2,500 ರೂ. ನಗದು ಬಹುಮಾನವನ್ನು ಪ್ರಾಥಮಿಕ ಹಂತದಲ್ಲಿ ನೀಡಲಾಗಿದೆ. ಮುಂದೆ ರೈಲ್ವೆ ಇಲಾಖೆಯು ಪ್ರಶಸ್ತಿಯ ಮೂಲಕ ಗೌರವಿಸುವ ಕಾರ್ಯವನ್ನು ನಡೆಸಲಿದೆ ಎಂದರು.
ಮನಪಾ ಪ್ರತಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು, ವಿಹಿಂಪ ಪ್ರಮುಖ ಜಿತೇಂದ್ರ ಕೊಟ್ಟಾರಿ, ಸ್ಥಳೀಯ ಪ್ರಮುಖರಾದ ಸಂದೀಪ್ ಪಚ್ಚನಾಡಿ, ಪೂಜಾ ಪೈ, ಪ್ರಶಾಂತ್ ಪೈ, ವಿಲ್ಫ್ರೆಡ್ ಸಲ್ದಾನ, ರಾಮ ಅಮೀನ್, ಲಿಂಗಪ್ಪ ಪಚ್ಚನಾಡಿ, ಉದಯ್ ಕುಮಾರ್, ಪ್ರಾಣೇಶ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




