ಸೋಮವಾರ ಸಂಜೆ ನಡೆದಿದ್ದ ಪಲ್ಸರ್ ಹಾಗೂ 407 ಗೂಡ್ಸ್ ವಾಹನ ನಡುವೆ ಭೀಕರ ಅಪಘಾತ
ಸ್ಥಳದಲ್ಲೇ ಬಲಿಯಾಗಿದ್ದ ಬೈಕ್ ಸಹಸವಾರ
ಕುಂದಾಪುರ: ಸೋಮವಾರ ಸಂಜೆ ಕೊಲ್ಲೂರು-ಹೆಮ್ಮಾಡಿ ರಾಜ್ಯ ಹೆದ್ದಾರಿಯ ಕಟ್-ಬೆಲ್ತೂರು ರೈಲ್ವೇ ಬ್ರಿಡ್ಜ್ ಸಮೀಪ ಬೈಕ್ ಹಾಗೂ 407 ಗೂಡ್ಸ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸಹಸವಾರ ದಾರುಣವಾಗಿ ಮೃತಪಟ್ಟಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ
ಹೆಮ್ಮಾಡಿ ನಿವಾಸಿ ಸಂಪತ್ ಪೂಜಾರಿ (26) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
(ಸಂಪತ್ ಪೂಜಾರಿ)
(ಸುರೇಂದ್ರ ಗಾಣಿಗ)
ಘಟನೆ ಹಿನ್ನೆಲೆ: ಹೆಮ್ಮಾಡಿಯಲ್ಲಿ ದಿನಸಿ ಅಂಗಡಿಯಿಟ್ಟುಕೊಂಡಿದ್ದ ಸಂಪತ್ ಪೂಜಾರಿ ಹಾಗೂ ಶಾಮಿಯಾನ ವೃತ್ತಿ ಮಾಡುತ್ತಿದ್ದ ಸುರೇಂದ್ರ ಗಾಣಿಗ ಸ್ನೇಹಿತರಾಗಿದ್ದು ಸಂಪತ್ ಪೂಜಾರಿ ಮೂರು ದಿನಗಳ ಹಿಂದಷ್ಟೇ ಖರೀದಿಸಿದ ನೂತನ ಪಲ್ಸರ್ ಬೈಕಿನಲ್ಲಿ ಹೆಮ್ಮಾಡಿಯಿಂದ ವಂಡ್ಸೆಯತ್ತ ಸಾಗುತ್ತಿರುವಾಗ ರಾಜ್ಯ ಹೆದ್ದಾರಿಯ ಕಟ್-ಬೆಲ್ತೂರು ಸಮೀಪದ ರೈಲ್ವೇ ಬ್ರಿಡ್ಜಿನಲ್ಲಿ ಹೆಮ್ಮಾಡಿಯತ್ತ ಸಾಗುತ್ತಿದ್ದ ೪೦೭ ಗೂಡ್ಸ್ ವಾಹನ ಮುಖಾಮುಖಿಯಾಗಿ ಡಿಕ್ಕಿಹೊಡೇದಿದೆ. ಡಿಕ್ಕಿಯ ರಭಸಕ್ಕೆ ಸಂಪತ್ ಹಾಗೂ ಸುರೇಂದ್ರ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡ ಸುರೇಂದ್ರ ಗಾಣಿಗ ಅವರು ಸ್ಥಳದಲ್ಲಿಯೇ ಮ್ರತಪಟ್ಟಿದ್ದರು. ಸಂಪತ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಖಾಸಗಿ ಆಸ್ಪೆತ್ರೆಗೆ ದಾಖಲಿಸಲಾಗಿತ್ತಾದರೂ ಮಂಗಳವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.
ಆಸೆಪಟ್ಟು ಖರೀದಿಸಿದ್ದ ಫಲ್ಸರ್ ಬೈಕ್: ಬೈಕುಗಳ ಬಗ್ಗೆ ಕ್ರೇಜ್ ಇಟ್ಟುಕೊಂಡಿದ್ದ ಸಂಪತ್ ಪೂಜಾರಿ ಮೂರು ದಿನಗಳ ಹಿಂದಷ್ಟೇ ಪಲ್ಸರ್೨೦೦ ಸಿ.ಸಿ. ಬೈಕ್ ಖರೀದಿಸಿದ್ದರು. ತಮ್ಮ ಹೊಸ ಪಲ್ಸರ್ ಬೈಕ್‌ನಲ್ಲಿ ಗೆಳೆಯ ಸುರೇಂದ್ರ ಗಾಣಿಗರನ್ನು ಕುಳ್ಳಿರಿಸಿಕೊಂಡು ಕೊಲ್ಲೂರು ಕಡೆಯತ್ತ ಪ್ರಯಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ: ಅಪಘಾತ ನಡೆದ ಸ್ಥಳಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಕಟ್‌ಬೆಲ್ತೂರು ಪಂಚಾಯತ್ ಉಪಾಧ್ಯಕ್ಷ ಶರತ್ ಶೆಟ್ಟಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪಾಯಕಾರಿ ಸೇತುವೆ: ಕೊಲ್ಲೂರು-ಹೆಮ್ಮಾಡಿ ರಾಜ್ಯ ಹೆದ್ದಾರಿಯ ಕಟ್-ಬೆಲ್ತೂರು ರೈಲ್ವೇ ಬ್ರಿಡ್ಜ್ ಕಿರಿದಾಗಿದ್ದು ಬ್ರಿಡ್ಜ್ ಸಮೀಪ ರಸ್ತೆ ತಗ್ಗು ಪ್ರದೇಶದಲ್ಲಿದ್ದು ಸುತ್ತಮುತ್ತಲೂ ದಟ್ಟ ಪೊದೆಗಳು ಆವರಿಸಿದೆ. ಹೆಮ್ಮಾಡಿಯಿಂದ ಕೊಲ್ಲೂರಿನತ್ತ ಸಾಗುವ ವಾಹನಗಳಿಗೆ ಕೊಲ್ಲೂರಿನಿಂದ ಹೆಮ್ಮಾಡಿಗೆ ಬರುವ ವಾನಗಳು ಗೋಚರವಾಗದ ಕಾರಣ ಇಲ್ಲಿ ಹಲವು ಅವಘಡಗಳು ಸಂಭವಿಸಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ. ಗೋಪಾಲ ಪೂಜಾರಿ ಕೂಡಲೇ ಪಿ.ಡಬ್ಲಯೂ.ಡಿ. ಇಂಜಿನಿಯರ್‌ಗೆ ಫೋನಾಯಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ.
ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.