ಮಂಗಳೂರು, ಜು.21: ನಗರದ ಜೈಲು ರಸ್ತೆ ಬಳಿಯಿರುವ ಸತ್ವಂ ಆರ್ಗಾನಿಕ್ ಹೆಸರಿನ ನೈಸರ್ಗಿಕ ಸಿದ್ಧ ವಸ್ತುಗಳ ಆಹಾರ ಮಳಿಗೆಗೆ ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ ನೇತೃತ್ವದ ತಂಡ ಸೋಮವಾರ ದಾಳಿ ನಡೆಸಿ ಮಳಿಗೆಗೆ ಬೀಗ ಜಡಿದಿದೆ.
ಆಹಾರ ವಸ್ತುಗಳಿರುವ ಮಳಿಗೆಯಲ್ಲಿ ಜಿರಳೆಗಳಿಗಾಗಿ ಔಷಧಿ ಸಿಂಪಡಿಸಿದ ಕಾರಣ ರಾಶಿ ರಾಶಿ ಜಿರಳೆಗಳು ಸತ್ತು ಮಳಿಗೆಯ ಅಕ್ಕ ಪಕ್ಕದಲ್ಲಿ ಬಿದ್ದಿದ್ದವು. ಆ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಮಳಿಗೆಯ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಲು ಬಂದ ಆರೋಗ್ಯ ಅಧಿಕಾರಿಗಳೇ ರಾಶಿ ರಾಶಿ ಜಿರಳೆಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಮಾಲಕರಿಗೆ ಮಳಿಗೆಯನ್ನು ಮುಚ್ಚುವಂತೆ ಸೂಚಿಸಿರುವ ಅಧಿಕಾರಿಗಳು ಇಷ್ಟೊಂದು ಪ್ರಮಾಣದಲ್ಲಿ ಜಿರಳೆಗಳಿದ್ದರೂ ಆಹಾರ ಮಳಿಗೆಯಲ್ಲಿ ಸ್ವಚ್ಛತೆ ಬಗ್ಗೆ ನಿಗಾಹರಿಸದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.
ಆದರೆ ಸಂಜೆಯ ವೇಳೆ ಮತ್ತೆ ಅಂಗಡಿಯನ್ನು ಇನ್ನೊಂದು ಕೀ ಮೂಲಕ ತೆರೆದು ಸಾರ್ವಜನಿಕರಿಗೆ ಆಹಾರ ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತೆ ದಾಳಿ ನಡೆಸಿ ಮಳಿಗೆಗೆ ಬೀಗ ಜಡಿದು ಕ್ರಮ ತೆಗೆದುಕೊಂಡಿದ್ದಾರೆ.
