ಮಂಗಳೂರು, ಜುಲೈ.18 : ಬೈಕ್ ನಲ್ಲಿ ಬಂದಿದ್ದ ಅಪರಿಚಿತ ದುಷ್ಕರ್ಮಿಗಳು ಸ್ಕೂಟರ್ ಸವಾರನನ್ನು ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿರುವ ಕಳವಳಕಾರಿ ಘಟನೆ ಶುಕ್ರವಾರ ರಾತ್ರಿ ಮಂಗಳೂರು ತಾಲೂಕಿನ ಕೊಣಾಜೆ ನಡುಪದವು ಎಂಬಲ್ಲಿ ಸಂಭವಿಸಿದೆ.
ನಡುಪದವು ನಿವಾಸಿ ಸಿರಾಜುದ್ದೀನ್ (24) ಗಾಯಾಳು ಯುವಕ. ಮಂಗಳೂರಿನ ಕರ್ನಾಟಕ ಏಜನ್ಸಿಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಅವರು ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ತನ್ನ ಸ್ಕೂಟರ್ ನಲ್ಲಿ ಮನೆಗೆ ಮರಳುತ್ತಿದ್ದರು. ನಡುಪದವು ಇಂಜಿನಿಯರಿಂಗ್ ಕಾಲೇಜು ಕ್ರಾಸ್ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ಬಂದ ಪಲ್ಸರ್ ಬೈಕೊಂದು ಅವರ ಸ್ಕೂಟರ್ ಗೆ ಅಡ್ಡವಾಗಿ ನಿಂತಿದ್ದು, ಅದರಲ್ಲಿದ್ದ ಅಪರಿಚಿತ ವ್ಯಕ್ತಿಗಳಿಬ್ಬರು ಚೂರಿಯಿಂದ ಸಿರಾಜುದ್ದೀನ್ ರ ಹೊಟ್ಟೆಗೆ ತಿವಿದು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸಿರಾಜುದ್ದೀನ್ ಅದೇ ಸ್ಥಿತಿಯಲ್ಲಿ ಸ್ಕೂಟರ್ ನ್ನು ಸ್ವಲ್ಪ ಮುಂದಕ್ಕೆ ಚಲಾಯಿಸಿ ಎದುರಾದ ಸ್ಥಳೀಯರಿಗೆ ಮಾಹಿತಿ ನೀಡಿ, ಅವರ ನೆರವಿನಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.




