ಕಾರ್ಕಳ, ಜುಲೈ.18: ತಾಲೂಕಿನ ತೆಳ್ಳಾರು ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಯ ಮೇಲೆ ನಿನ್ನೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಾದ ಅಜ್ಜ ಮತ್ತು ಮೊಮ್ಮಗನನ್ನು ಬಂಧಿಸಿ, 24 ದನಗಳ ಚರ್ಮಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ತೆಳ್ಳಾರು ಮಸೀದಿ ರಸ್ತೆಯ ಕೆ.ಎಂ. ಮಂಜಿಲ್ ನಿವಾಸಿಗಳಾದ ಶೇಖ್ ಮಹಮ್ಮದ್ (72) ಮತ್ತು ಆತನ ಮೊಮ್ಮಗ ಸೌದತ್ ಯಾನೆ ಶಹದತ್ (18) ಎಂದು ಹೆಸರಿಸಲಾಗಿದೆ. ಶೇಖ್ ಮಹಮ್ಮದ್ ಜಾನುವಾರು ಗಳನ್ನು ಕದ್ದು, ಅವುಗಳನ್ನು ರಾತ್ರೋರಾತ್ರಿ ತನ್ನ ಮನೆಯ ಅಂಗಳದಲ್ಲಿ ಕೊಂದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದು, ಸೌದತ್ ಸಹಕರಿಸುತ್ತಿದ್ದನೆನ್ನಲಾಗಿದೆ.
ಕೆಲ ವರ್ಷಗಳ ಹಿಂದೆಯೂ ಈ ಮನೆಯ ಮೇಲೆ ದಾಳಿ ನಡೆಸಿದ್ದ ಪೊಲೀಸರು ಅಕ್ರಮ ಗೋಮಾಂಸವನ್ನು ವಶಪಡಿಸಿಕೊಂಡಿದ್ದರು. ಶೇಖ್ ಮಹಮ್ಮದ್ ತನ್ನ ಮನೆಯಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಹಿಂದು ಸಂಘಟನೆಯ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ನಿನ್ನೆ ಈ ದಾಳಿ ನಡೆಸಿದ್ದಾರೆ.
ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.