ಕನ್ನಡ ವಾರ್ತೆಗಳು

ಗಂಗೊಳ್ಳಿ ಎಸ್.ವಿ. ಕಾಲೇಜಿನ ಕ್ರೀಡಾಂಗಣದಲ್ಲಿ ಗಮನ ಸೆಳೆದ `ವುಜರೆ’

Pinterest LinkedIn Tumblr

ಕುಂದಾಪುರ : ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣ ಇಂದು ಎಲ್ಲರ ಗಮನ ಸೆಳೆದಿದೆ.

ಕಾಲೇಜಿನ ಕ್ರೀಡಾಂಗಣದಲ್ಲಿ ನಿಂತಿದ್ದ ಮಳೆಯ ನೀರಿನ ಮಧ್ಯದಿಂದ ನೀರು ಚಿಮ್ಮುತ್ತಿರುವ ದೃಶ್ಯ ಕಂಡು ಬಂದಿತು. ಕ್ರೀಡಾಂಗಣದ ಎಲ್ಲ ಕಡೆಗಳಲ್ಲಿ ನೀರಿನ ಮಧ್ಯದಿಂದ ನೀರಿನ ಗುಳ್ಳೆಗಳ ರೀತಿಯಲ್ಲಿ ನೀರು ಮೇಲಕ್ಕೆ ಚಿಮ್ಮುತ್ತಿರುವುದನ್ನು ನೋಡಿದ ಹಲವರು ಆಶ್ಚರ್ಯಚಕಿತರಾದರು.ದಿ ನೀರು ಚಿಮ್ಮುತ್ತಿರುವ ಕಡೆ ಕೈ ಅಥವಾ ಕಾಲನ್ನು ಇಟ್ಟಾಗ ದೂಡಿದ ಅನುಭವವಾಗುತ್ತಿತ್ತು. ಅಷ್ಟೊಂದು ರಭಸವಾಗಿ ನೀರು ಮೇಲಕ್ಕೆ ಚಿಮ್ಮುತ್ತಿತ್ತು. ಇದನ್ನು ಕೆಲವರು ಭೂಮಿಯಿಂದ ನೀರು ಚಿಮ್ಮುತ್ತಿದೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ನೀರು ಭೂಮಿಯಲ್ಲಿ ಇಂಗುತ್ತಿದ್ದು, ಇದರಿಂದ ಈ ರೀತಿಯ ನೀರಿನ ಗುಳ್ಳೆಗಳು ಎಳುತ್ತಿದೆ ಎಂದು ಆಡಿಕೊಳ್ಳುತ್ತಿದ್ದರು.

Heavy_Rain Problem_Kundapur (9)

Heavy_Rain Problem_Kundapur (8)

Heavy_Rain Problem_Kundapur (7)

ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಪ್ರಾಂಶುಪಾಲ ಆರ್.ಎನ್.ರೇವಣಕರ್ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ಅಧ್ಯಾಪಕರು ಸ್ಥಳಕ್ಕೆ ಭೇಟಿ ಕ್ರೀಡಾಂಗಣದಲ್ಲಿನ ಕೌತುಕವನ್ನು ವೀಕ್ಷಿಸಿದರು. ಕಾಲೇಜಿನ ಕ್ರೀಡಾಂಗಣವು ಮರಳು ಮಿಶ್ರಿತವಾಗಿದೆ. ಮಳೆಯ ನೀರು ಶೇಖರಣೆಗೊಂಡು ಭೂಮಿಯಲ್ಲಿ ಇಂಗುವಾಗ ಭೂಮಿಯ ಅಡಿಯಲ್ಲಿರುವ ಗಾಳಿಯು ಹೊರಗೆ ಬರುವ ಸಂದರ್ಭ ಈ ರೀತಿಯ ವಾತಾವರಣ ಸೃಷ್ಟಿಯಾಗಿರಬಹುದು ಎಂದು ಶಾಲೆಯ ಪ್ರಾಂಶುಪಾಲ ಆರ್.ಎನ್.ರೇವಣಕರ್ ಅಭಿಪ್ರಾಯಪಟ್ಟಿದ್ದಾರೆ. ಇದೇ ರೀತಿಯ ಅಭಿಪ್ರಾಯವನ್ನು ನಿವೃತ್ತ ಡಿ‌ಎಫ್‌ಓ ಕೆ.ಎನ್.ರಾವ್ ಕೂಡ ವ್ಯಕ್ತಪಡಿಸಿದ್ದಾರೆ.

ಇದು ವುಜರೆ ಎಳುವುದು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿರುವ ಸ್ಥಳೀಯ ಕೆಲವರು, ಮಳೆ ಹೆಚ್ಚಾದಾಗ ಮೆದು ನೆಲದಲ್ಲಿ ಕೆಲವೊಂದು ಬಾರಿ ಈ ರೀತಿಯಾಗಿ ನೀರಿನ ಚಿಮ್ಮುವುದು ಕಂಡು ಬರುತ್ತದೆ. ಇದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಹೊಲಗದ್ದೆ ಮತ್ತು ಮೆದು ನೆಲದಲ್ಲಿ ಮಳೆಗಾಲದಲ್ಲಿ ಕಂಡು ಬರುತ್ತದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕಾಲೇಜಿನ ಕ್ರೀಡಾಂಗಣದಲ್ಲಿ ಕಂಡು ಬಂದಿರುವ ಈ ಕೌತುಕ ವಿಸ್ಮಯವನ್ನು ನೋಡಲು ಜನರು ಆಗಮಿಸುತ್ತಿದ್ದಾರೆ. ಕ್ರೀಡಾಂಗಣದಲ್ಲಿ ನಿಂತ ನೀರಿನ ಮಧ್ಯದಲ್ಲಿ ಕಂಡು ಬಂದಿರುವ ಇಂತಹ ಅಪರೂಪದ ಸನ್ನಿವೇಶಗಳು ಜನರ ಆಕರ್ಷಣೆಗೆ ಕಾರಣವಾಗಿದೆ.

Write A Comment