ಕನ್ನಡ ವಾರ್ತೆಗಳು

ಜುಲೈ.22,26 : ಪಿಲಿಕುಳ ನಿಸರ್ಗಧಾಮದಲ್ಲಿ ‘ಸಂಗಮ ಸಂಭ್ರಮ-2015’

Pinterest LinkedIn Tumblr

sugama_sambrama_1

ಮಂಗಳೂರು,ಜುಲೈ.16 : ಕರ್ನಾಟಕ ಕೊಂಕಣಿ, ತುಳು, ಬ್ಯಾರಿ ಸಾಹಿತ್ಯ ಅಕಾಡಮಿಗಳ ಜಂಟಿ ಸಂಯೋಜಕತ್ವದಲ್ಲಿ ಜು.22, 23 ಮತ್ತು 24ರಂದು ಪೂರ್ವಭಾವಿ ಕಾರ್ಯ ಕ್ರಮಗಳೊಂದಿಗೆ ರಾಜ್ಯ ಸಮ್ಮೇಳನ ‘ಸಂಗಮ ಸಂಭ್ರಮ-2015’ ಕಾರ್ಯಕ್ರಮವು ಜು.25, 26ರಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯಲಿದೆ ಎಂದು ಕರ್ನಾಟಕ ಬ್ಯಾರಿ, ತುಳು ಮತ್ತು ಕೊಂಕಣಿ ಅಕಾಡಮಿ ಅಧ್ಯಕ್ಷರಾದ ಬಿ.ಎ.ಮುಹಮ್ಮದ್ ಹನೀಫ್, ಎಂ.ಜಾನಕಿ ಬ್ರಹ್ಮಾವರ, ರೊಯ್ ಕ್ಯಾಸ್ತಲಿನೊ ಬುಧವಾರ ಮಂಗಳೂರಿನಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ವರ್ತಮಾನದ ತಲ್ಲಣಗಳು- ಸಾಂಸ್ಕೃತಿಕ ಪ್ರತಿಕ್ರಿಯೆ’ ಶೀರ್ಷಿಕೆಯಡಿ ಪಿಲಿಕುಳ ನಿಸರ್ಗಧಾಮದ ಚಾ. ಫ್ರಾ.ದೆಕೊಸ್ತಾ ಸಂಗಮ ಕ್ಷೇತ್ರದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಎಲ್ಲಾ ಅಕಾಡಮಿಗಳ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಭಾಗಿತ್ವ ಹಾಗೂ ದ.ಕ.ಜಿಲ್ಲಾಡಳಿತದ ಸಹಕಾರದೊಂದಿಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

sugama_sambrama_2 sugama_sambrama_3

ಈ ಸಂಗಮದಲ್ಲಿ ಕನ್ನಡ, ತುಳು, ಕೊಂಕಣಿ, ಬ್ಯಾರಿ, ಕೊಡವ, ಉರ್ದು, ಅರೆಭಾಷೆಗಳು ಸಮ್ಮಿಲಿತಗೊಳ್ಳಲಿದೆ.ಜು.25ರಂದು ಬೆಳಗ್ಗೆ 10:30ಕ್ಕೆ ಸಮ್ಮೇಳನ ಸಚಿವೆ ಉಮಾಶ್ರೀಯಿಂದ ಉದ್ಘಾಟನೆಗೊಳ್ಳಲಿದ್ದು, ಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸುವರು. ಅದಕ್ಕೂ ಮುನ್ನ ಬೆಳಗ್ಗೆ 9 ಗಂಟೆಗೆ ವಾಮಂಜೂರು ಪೇಟೆ ಮೂಲಕ ಭವ್ಯ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಯು ಪಿಲಿಕುಳ ನಿಸರ್ಗಧಾಮ ತಲುಪಲಿದೆ.

ಅಂದು 65 ಆಹ್ವಾನಿತ ವಿದ್ವಾಂಸರು ಎಲ್ಲಾ ಅಕಾಡಮಿಗಳ ಅಧ್ಯಕ್ಷರೊಡನೆ ಸಂವಾದ ನಡೆಸಲಿದ್ದಾರೆ. ಸಂಸ್ಕೃತಿ ಮತ್ತು ಕಲಾ ಕ್ಷೇತ್ರದ ಅಭಿವೃದ್ಧಿ ವಿಚಾರಗಳಲ್ಲಿ ಸಂವಾದ ನಡೆಯಲಿದೆ. ಬಳಿಕ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಶಾಸ್ತ್ರೀಯ ಗಾಯನ, ನೃತ್ಯ ರೂಪಕ, ಕರ್ನಾಟಕ ಜಾನಪದ ಅಕಾಡಮಿಯಿಂದ ಡೊಳ್ಳಿನ ಪದ, ಮೊಹರಂ ಪದಂ,ತತ್ವಪದ, ಕರ್ನಾಟಕ ನಾಟಕ ಅಕಾಡಮಿ ಯಿಂದ ನಾಟಕ ಪ್ರದರ್ಶನಗಳು ನಡೆಯಲಿವೆ.

ಜು.26ರಂದು ಬೆಳಗ್ಗೆ 9:30ರಿಂದ ಉರ್ದು ಅಕಾಡಮಿಯಿಂದ ಗಝಲ್, ಕನ್ನಡ ಸಾಹಿತ್ಯ ಅಕಾಡಮಿಯಿಂದ ಕಥಾರಂಗ, ಯಕ್ಷಗಾನ ಅಕಾಡಮಿ ಯಿಂದ ತೊಗಲು ಗೊಂಬೆಯಾಟ ಮತ್ತು ಯಕ್ಷಗಾನ ಪ್ರಸಂಗ ಪ್ರದರ್ಶ ನಗಳಿರುತ್ತದೆ. ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ದ.ಕ. ಜಿಲ್ಲಾಡಳಿತದ ವತಿಯಿಂದ ಪಿಲಿಕುಳ ನಿಸರ್ಗಧಾಮದಲ್ಲಿ ತುಳುನಾಡ ಸಂಸ್ಕೃತಿ ವೈಭವ ನಡೆಯಲಿದೆ.

sugama_sambrama_4

ಸಂಗಮ ಸಂಭ್ರಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಜು. 22ರಿಂದ 24ರವರೆಗೆ ಚಿತ್ರಕಲೆ ಮತ್ತು ಶಿಲ್ಪ ಕಲೆಗಳ ಶಿಬಿರ ನಡೆಯಲಿದೆ. ಈ ವೇಳೆ ತುಳು ಐಸಿರಿ, ಕೊಂಕ್ಣಿ ಸಂಭ್ರಮ್ ಹಾಗೂ ಪೆರ್ನಾಲ್ ಸಂದೋಲ ನಡೆಯಲಿವೆ. ಜು.24ರಂದು ಸಂಜೆ 5:30ಕ್ಕೆ ಸಂತ ಕವಿ ಕನಕದಾಸರ ಜೀವನ ಪರಿಚಯ ನೀಡುವ ತುಳು, ಕೊಂಕಣಿ, ಬ್ಯಾರಿ ಭಾಷೆಗಳಲ್ಲಿ ಅನುವಾದಿತ ಕೃತಿಗಳಾಗಿ ಪ್ರಕಟಗೊಂಡಿರುವ ಮೂರು ಕೃತಿಗಳು ಬಿಡುಗಡೆಗೊಳ್ಳಲಿದೆ.

ಎರಡು ವೇದಿಕೆಗಳಲ್ಲಿ ನಿರಂತರ ವಾಗಿ ಹತ್ತಾರು ಮನೋರಂಜನ ಕಾರ್ಯಕ್ರಮಗಳು ನಡೆಯಲಿದೆ.

ವಿಷೇಶವಾದ ಅರ್ಕಷಣೆ.
ಸಂಗಮ ಸಂಭ್ರಮ ನಡೆಯುವ ಪಿಲಿಕುಳ ನಿಸರ್ಗಧಾಮದಲ್ಲಿ ವಿವಿಧ ಮಳಿಗೆದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಸಾಂಪ್ರದಾಯಿಕ ತಿಂಡಿತಿನಿಸುಗಳು, ಊಟೋಪಚಾರ, ಉಡುಗೆ -ತೊಡುಗೆ-ಆಲಂಕಾರಿಕ ವಸ್ತುಗಳು, ಕೃಷಿ,ಸಾವಯವ, ಮನೆಮದ್ದು, ಆಯುರ್ವೇದ, ಖಾದಿ-ಗ್ರಾಮೋದ್ಯೋಗ, ನರ್ಸರಿ ಗಿಡ ಗಳು,ನರ್ಸರಿ ಇತ್ಯಾದಿಗಳಿಗೆ ಅವಕಾಶವಿದೆ. ಆಸಕ್ತರು ಡಾ.ನಿತಿನ್ (9686673237), ಲಾರೆನ್ಸ್ ಡಿಸೋಜ (9739789770)ರನ್ನು ಸಂಪರ್ಕಿಸಬಹುದು ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತುಳು ಅಕಾಡಮಿಯ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ, ಬ್ಯಾರಿ ಅಕಾಡಮಿ ರಿಜಿಸ್ಟ್ರಾರ್ ಉಮರಬ್ಬ, ಕೊಂಕಣಿ ಅಕಾಡಮಿ ರಿಜಿಸ್ಟ್ರಾರ್ ಡಾ.ಬಿ.ದೇವದಾಸ ಪೈ ಉಪಸ್ಥಿತರಿದ್ದರು.

Write A Comment