ಮಂಗಳೂರು, ಜು.16: ನಗರದ ಜಂಕ್ಷನ್ (ಕಂಕನಾಡಿ) ರೈಲು ನಿಲ್ದಾಣದಲ್ಲಿ ಆಟೊರಿಕ್ಷಾ ಪ್ರೀಪೇಯ್ಡಾ ಕೇಂದ್ರ ಬುಧವಾರ ಆರಂಭಗೊಂಡಿದೆ. ದಕ್ಷಿಣ ರೈಲ್ವೆ ಪಾಲ್ಘಾಟ್ ವಿಭಾಗದ ವಲಯ ಅಧಿಕಾರಿ ಭೂಪತಿ ರಾಜ್ ಪ್ರೀಪೇಯ್ಡಾ ಕೇಂದ್ರವನ್ನು ಉದ್ಘಾಟಿಸಿದರು. ಇಲ್ಲಿ ಆಟೊರಿಕ್ಷಾ ಪ್ರೀಪೇಯ್ಡಾ ಕೇಂದ್ರ ಬಹುಕಾಲದ ಬೇಡಿಕೆಯಾಗಿತ್ತು. ಆಟೊ ಚಾಲಕರು ಹಾಗೂ ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು ನುಡಿದರು.
ಜನತಾ ಆಟೊರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶೋಕ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಟೋ ರಿಕ್ಷಾ ಚಾಲಕರು ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಾರೆ ಎನ್ನುವ ಆರೋಪವಿದೆ. ಪ್ರೀಪೇಯ್ಡಾ ಕೇಂದ್ರದ ಮೂಲಕ ಕಾರ್ಯಾಚರಿಸಿದಾಗ ಇಂತಹ ಆರೋಪಗಳಿಗೆ ಅವಕಾಶವಿರುವುದಿಲ್ಲ ಎಂದರು.
ಮಂಗಳೂರು ರೈಲ್ವೆ ಪೊಲೀಸ್ ಅಧಿಕಾರಿ ತಾರಾನಾಥ್, ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನ ಅಧಿಕಾರಿ ಎ.ಪಿ.ವೇಣು ಅತಿಥಿಯಾಗಿದ್ದರು.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಸೈ ಮಲ್ಲಪ್ಪ ಡಿ. ಮಡ್ಡಿ ಮಾತನಾಡಿ, ಕಂಕನಾಡಿ ರೈಲ್ವೇ ನಿಲ್ದಾಣದ ಆಟೊ ರಿಕ್ಷಾ ಚಾಲಕರ ವಿರುದ್ಧ ಬಹಳಷ್ಟು ದೂರುಗಳು ಬರುತ್ತಿವೆ. ಪ್ರೀಪೇಯ್ಡಿ ವ್ಯವಸ್ಥೆಯ ನಿಯಮಾವಳಿ ಉಲ್ಲಂಘಿಸಿ ದೂರುಗಳು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಂಕನಾಡಿ ರೈಲ್ವೆ ನಿಲ್ದಾಣ ಕಾರು ಪಾರ್ಕಿಂಗ್ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಬೊಲ್ಲ, ಸ್ಟೇಷನ್ ಮ್ಯಾನೇಜರ್ ಕೆ.ರಾಮಯ್ಯ ಉಪಸ್ಥಿತರಿದ್ದರು. ಅಶೋಕ್ ಕೊಂಚಾಡಿ ಸ್ವಾಗತಿಸಿ, ವಂದಿಸಿದರು.


