ಕನ್ನಡ ವಾರ್ತೆಗಳು

ತೆಂಗು ಬೆಳೆಗಾರರ ಹಾಗೂ ಉದ್ಯಮಿಗಳ ಸಮಾವೇಶ

Pinterest LinkedIn Tumblr

Coconut_fishers_photo_1

ಮಂಗಳೂರು, ಜು. 11: ದ.ಕ. ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯ (ಎಸ್‌ಎಝೆಡ್)ನ ಸ್ಥಾಪನೆಯ ಜತೆಯಲ್ಲೇ ತೆಂಗು ಉತ್ಪನ್ನಗಳ ಪಾರ್ಕ್ ರಚನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು.

ನಗರದ ಮೀನುಗಾರಿಕಾ ಕಾಲೇಜಿನಲ್ಲಿ ಶನಿವಾರ ತೆಂಗು ಬೆಳೆಗಾರರ ಮತ್ತು ಉದ್ಯಮಿಗಳ ಸಮಾ ವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತೆಂಗು ಬೆಳೆಗೆ ಉತ್ತಮ ಭವಿಷ್ಯವಿರುವ ಹಿನ್ನೆಲೆ ಯಲ್ಲಿ 50ರಿಂದ 100 ಎಕರೆ ಪ್ರದೇಶದಲ್ಲಿ ತೆಂಗಿನ ವಿವಿಧ ವೌಲ್ಯಾಧಾರಿತ ಉತ್ಪನ್ನಗಳನ್ನು ತಯಾ ರಿಸುವ ಪಾರ್ಕೊಂದನ್ನು ರಚಿಸುವ ಬಗ್ಗೆ ಆಸಕ್ತ ರೈತರು ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಜತೆ ಸಮಾಲೋಚನೆ ನಡೆಸಲಾಗಿದೆ. ತೆಂಗಿನ ಕೃಷಿ, ವೌಲ್ಯಾ ಧಾರಿತ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರುಕಟ್ಟೆಗೆ ಪೂರಕವಾಗಿ ಪಾರ್ಕ್ ರಚಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದರು.

Coconut_fishers_photo_2 Coconut_fishers_photo_3 Coconut_fishers_photo_4 Coconut_fishers_photo_5Coconut_fishers_photo_7 Coconut_fishers_photo_6

ನೀರಾ ಉತ್ಪಾದನೆಯಿಂದ ಮಂಗನ ಕಾಟ ತಪ್ಪಿಸಲು ಸಾಧ್ಯ:

ನೀರಾ ಔಷಧೀಯ ಗುಣಗಳಿಂದ ಕೂಡಿದ ಪೇಯವಾಗಿ ಗುರುತಿಸಲ್ಪಟ್ಟಿದ್ದು, ತೆಂಗು ಬೆಳೆಗಾರರು ನೀರಾ ಉತ್ಪಾದನೆಗೆ ಒತ್ತು ನೀಡುವ ಮೂಲಕ ತೆಂಗಿನ ತೋಟವನ್ನು ಕಾಡುವ ಮಂಗಗಳ ಕಾಟವನ್ನು ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ ನೀರಾ ಉತ್ಪಾದನೆಗೆ ರಾಜ್ಯ ಸರಕಾರ ಅನುಮತಿ ನೀಡಿರುವಂತೆಯೇ ಇದೀಗ ನೀರಾ ಯಾವುದೇ ರೀತಿಯಲ್ಲಿ ಅಮಲು ಪೇಯವಲ್ಲದ ಕಾರಣ ಅದನ್ನು ಅಬಕಾರಿ ಕಾಯ್ದೆಯಿಂದ ಹೊರ ತಂದು ನೀರಾ ಉತ್ಪಾದನೆಗೆ ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಲು ಪ್ರೋತ್ಸಾಹಿಸಬೇಕು ಎಂದರು.

ಅಧಿವೇಶನದಲ್ಲಿ ನೀರಾ ಕಾನೂನು ತಿದ್ದುಪಡಿಗೆ ಒತ್ತಾಯ: ಜೆ.ಆರ್. ಲೋಬೊ

ದ್ರಾಕ್ಷಿ ರಸವನ್ನು ಸಂಸ್ಕರಣೆ ಮಾಡಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗಿರುವಂತೆ ನೀರಾವನ್ನೂ ಉಪಯೋಗಿಸಲು ಪ್ರೋತ್ಸಾಹಿಸಬೇಕಾಗಿದೆ. ನೀರಾ ಉತ್ಪಾದನೆಗೆ ರಾಜ್ಯ ಸರಕಾರ ಒತ್ತು ನೀಡಿದ್ದು, ಇದೀಗ ತೆಂಗು ಬೆಳೆಗಾರರು ನಿರಾತಂಕವಾಗಿ ನೀರಾ ಇಳಿಸಲು ಮತ್ತು ಮಾರಾಟಕ್ಕೆ ಅನುಕೂಲವಾಗುವಂತೆ ಅಬಕಾರಿ ಕಾಯ್ದೆಯಲ್ಲಿ ತಿದ್ದುಪಡಿಗೆ ಅಧಿವೇಶನದಲ್ಲಿ ಸರಕಾರವನ್ನು ಒತ್ತಾಯಿಸಲಾಗುವುದು. ನೀರಾ ಮತ್ತು ಶೇಂದಿಯ ವ್ಯತ್ಯಾಸದ ಕುರಿತು ಸರಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತೆಂಗು ಬೆಳೆಗಾರರಿಗೆ ಆಶ್ವಾಸನೆ ನೀಡಿದರು.

ತೆಂಗಿನ ವೌಲ್ಯಾಧಾರಿತ ಉತ್ಪನ್ನಗಳಲ್ಲಿ ಭಾರತ ವಿಫಲ:ಟಿ.ಕೆ. ಜೋಸ್

ಜಾಗತಿಕವಾಗಿ ತೆಂಗು ಬೆಳೆಯುವ ಪ್ರಮುಖ ದೇಶಗಳಲ್ಲಿ ಭಾರತ ಒಂದಾಗಿದ್ದರೂ ತೆಂಗಿನ ವೌಲ್ಯಾ ಧಾರಿತ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ನಮ್ಮ ನೆರೆಯ ರಾಷ್ಟ್ರವಾದ ಶ್ರೀಲಂಕಾಕ್ಕಿಂತಲೂ ಭಾರತ ಹಿಂದುಳಿದಿದೆ ಎಂದು ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಟಿ.ಕೆ. ಜೋಸ್ ಅಭಿಪ್ರಾಯಿಸಿದರು.

ರಾಜ್ಯದ ತುಮಕೂರು, ಹಾಸನ ಹಾಗೂ ಚಿತ್ರದುರ್ಗ ಈ ಮೂರು ಜಿಲ್ಲೆಗಳಲ್ಲೇ ಶ್ರೀಲಂಕಾ ರಾಷ್ಟ್ರವೊಂದರಲ್ಲಿ ಬೆಳೆಯುವುದಕ್ಕಿಂತಲೂ ಹೆಚ್ಚು ತೆಂಗನ್ನು ಬೆಳೆಸಲಾಗುತ್ತಿದೆ. ಹಾಗಿದ್ದರೂ ವೌಲ್ಯಾಧಾರಿತ ಉತ್ಪನ್ನಗಳ ಉತ್ಪಾದನೆಯಲ್ಲಿ ಭಾರತಕ್ಕಿಂತ ಶ್ರೀಲಂಕಾ ದಲ್ಲಿ ನಾಲ್ಕು ಪಟ್ಟು ಅಧಿಕವಾಗಿ ಉತ್ಪಾದಿಸಲಾಗುತ್ತಿದೆ. ತೆಂಗು ಬೆಳೆಯಲ್ಲಿ ಭಾರತದಲ್ಲೇ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ಆದರೆ ನಮ್ಮ ರಾಜ್ಯದಲ್ಲಿ ತೆಂಗು ಬೆಳೆಯಿಂದ ಉತ್ಪಾದನೆಯಾಗುತ್ತಿರುವ ವೌಲ್ಯಾಧಾರಿತ ಉತ್ಪನ್ನಗಳು ಕೇವಲ ಶೇ. 10ರಷ್ಟು ಮಾತ್ರ. ಈ ನಿಟ್ಟಿನಲ್ಲಿ ತೆಂಗು ಅಭಿವೃದ್ಧಿ ಮಂಡಳಿಯು ತೆಂಗು ಉತ್ಪಾದಕರ ಕಂಪೆನಿಗಳನ್ನು ರಚಿಸುತ್ತಿದೆ.

ಮಂಡಳಿಯಿಂದ ಈಗಾಗಲೇ ಒಟ್ಟು 35 ಕಂಪೆನಿಗಳನ್ನು ರಚಿಸಲಾಗಿದ್ದು, ಅದರಲ್ಲಿ 6 ತಮಿಳುನಾಡು, 3 ಆಂಧ್ರಪ್ರದೇಶ, 20 ಕೇರಳ ಹಾಗೂ ಕರ್ನಾಟಕದಲ್ಲಿ ಆರು ಕಂಪೆನಿಗಳನ್ನು ರಚಿಸಲಾಗಿದೆ. ಕರ್ನಾಟಕದಲ್ಲಿ ಒಟ್ಟು 15ರಿಂದ 20 ಕಂಪೆನಿಗಳನ್ನು ರಚಿಸುವ ಗುರಿ ಹೊಂದಲಾಗಿದ್ದು, ಈ ಮೂಲಕ ತೆಂಗು ಬೆಳೆ ಹಾಗೂ ವೌಲ್ಯಾಧಾರಿತ ಉತ್ಪನ್ನಗಳಿಗೆ ಉತ್ತೇಜನ ನೀಡಲು ಚಿಂತಿಸಲಾಗಿದೆ. ಆ ದಿಸೆಯಲ್ಲಿ ಕರ್ನಾಟಕದಲ್ಲಿ ಪ್ರಥಮ ತೆಂಗು ಬೆಳೆಗಾರರ ಸಮಾವೇಶವನ್ನು ಮಂಗಳೂರಿನಲ್ಲಿ ನಡೆಸುತ್ತಿರುವುದಾಗಿ ಅವರು ಹೇಳಿದರು.

ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ಭಾಗವಹಿಸಿ ಸಮಾವೇಶಕ್ಕೆ ಶುಭಹಾರೈಸಿ ಮಾತನಾಡಿದರು. ಸಿಪಿಸಿಆರ್‌ಐ ಕಾಸರಗೋಡು ನಿರ್ದೇಶಕ ಡಾ. ಚೌಡಪ್ಪ ಪಿ. ಉಪಸ್ಥಿತರಿದ್ದರು. ಹೇಮಚಂದ್ರ ಸ್ವಾಗತಿಸಿದರು. ಜಿ.ಎಂ. ಸಿದ್ದರಾಮೇಶ್ವರ ಸ್ವಾಮಿ ವಂದಿಸಿದರು. ಪ್ರವೀಣ್ ಕುಂಪಲ ಮತ್ತು ಹರೀಶ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Write A Comment