ಕನ್ನಡ ವಾರ್ತೆಗಳು

ಅಂತರ್ಜಾಲ ಮೂಲಕ ಲಕ್ಷಾಂತರ ರೂಪಾಯಿ ಕೊಳ್ಳೆ : ಮತ್ತೋಂದು ಪ್ರಕರಣ ಬೆಳಕಿಗೆ.

Pinterest LinkedIn Tumblr

Online_froud_photo

ಬೆಳ್ತಂಗಡಿ, ಜುಲೈ.10 : ಅಂತರ್ಜಾಲದ ಮೂಲಕ ಬ್ಯಾಂಕ್‍ಖಾತೆಯನ್ನು ಹ್ಯಾಕ್ ಮಾಡಿ ಸಾವಿರಾರು ರೂ.ಗಳನ್ನು ವಂಚಿಸಿರುವ ಘಟನೆ ಉಜಿರೆಯಲ್ಲಿ ನಡೆದಿದೆ.

ಚಾರ್ಮಾಡಿ ಪಾಂಡಿಕಟ್ಟೆ ಮನೆಯ ಉಜಿರೆ ಹಸನಬ್ಬ ಅಬ್ದುಲ್ಲ ಅವರು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ರಂಜಾನ್ ರಜೆಯ ನಿಮಿತ್ತ ಊರಿಗೆ ಬಂದಿದ್ದರು. ಜು. 3ರಂದು ನೆರೆಮನೆಯಲ್ಲಿರುವ ಇವರ ಸಂಬಂಧಿಕರಿಗೆ `ಆರ್‍ಬಿಐ ಕಾಲ್‍ಸೆಂಟರ್’ನಿಂದ ಎಂದು ಹೇಳಿಕೊಂಡು ಫೋನ್ ಕರೆ ಬಂದಿತ್ತು. ಸಂಬಂಧಿಕರು ಹಿಂದಿ ಭಾಷೆ ಅರ್ಥವಾಗದ ಹಿನ್ನಲೆಯಲ್ಲಿ ವಿಚಾರ ಏನೆಂದು ತಿಳಿಯಲು ಫೋನನ್ನು ಅಬ್ದುಲ್ ಅವರಿಗೆ ನೀಡಿದ್ದರು.

ಕರೆ ಮಾಡಿದ ವ್ಯಕ್ತಿ ನಿಮ್ಮ ಸಂಬಂಧಿಕರ ಬ್ಯಾಂಕ್ ಎಟಿಎಂ ಹಾಗೂ ಖಾತೆಯಲ್ಲಿ ಸಮಸ್ಯೆಯಾಗಿದೆ. ಅದನ್ನು ಸರಿಪಡಿಸಲು ಸಾಕ್ಷಿಯಾಗಿ ಇನ್ನೊಬ್ಬರ ವಿವರಗಳು ಬೇಕು ಎಂದು ತಿಳಿಸಿದಾಗ ಅಬ್ದುಲ್ ಅವರು ತಮ್ಮ ಮೊಬೈಲ್ ಹಾಗೂ ಖಾತೆ ಸಂಖ್ಯೆಯನ್ನು ನೀಡಿದ್ದರು. ಬಳಿಕ ಕರೆ ಮಾಡಿದ ವ್ಯಕ್ತಿ ನಿಮ್ಮ ಸಂಬಂಧಿಕರ ಸಮಸ್ಯೆಯನ್ನು ಪರಿಹರಿಸಿ ಹೊಸ ಎಟಿಎಂ ಕಾರ್ಡನ್ನು ಕಳುಹಿಸುತ್ತೇವೆ ಎಂದು ಹೇಳಿ ಕರೆಯನ್ನು ಸ್ಥಗಿತಗೊಳಿಸಿದ್ದರು.ಈ ಕರೆ ಬಂದ ಬಳಿಕ ಜು. 7 ರಂದು ಅಬ್ದುಲ್ ಅವರು ಬ್ಯಾಂಕಿಗೆ ಹೋಗಿ ತಮ್ಮ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲಿದ್ದ 77,851 ರೂ.ಗಳ ಬದಲಾಗಿ ಕೇವಲ 3,141 ರೂ. ಮಾತ್ರ ಉಳಿದಿರುವುದ ಗಮನಕ್ಕೆ ಬಂದಿದೆ. ಬ್ಯಾಂಕಿನ ಸ್ಟೇಟ್‍ಮೆಂಟ್ ಪರಿಶೀಲಿಸಿದಾಗ ರೂ. 74,710 ರೂ. ಹ್ಯಾಕ್ ಮಾಡಿ ಬೇರೆ ಬೇರೆ ಆನ್‍ಲೈನ್ ಪಾವತಿ ಮಾಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಇದೀಗ ಅಂತರ್ಜಾಲವನ್ನು ವ್ಯವಸ್ಥಿತವಾಗಿ ದುರುಪಯೋಗ ಪಡಿಸಿಕೊಂಡು ಅಮಾಯಕರನ್ನು ದೋಚುವ ವ್ಯವಸ್ಥಿತ ತಂಡವೊಂದು ಕಾರ್ಯಾಚರಣೆಗಿಳಿದಿದೆ. ದುಡಿಯದೆ ಹಣ ಸಂಪಾದನೆ ಮಾಡುವ ನಿಟ್ಟಿನಲ್ಲಿ ಅಮಾಯಕರನ್ನು ವಿವಿಧ ಆಮೀಷಗಳನ್ನೊಡ್ಡಿ ಸಂಪಾದನೆ ಮಾಡಿದ ಹಣವನ್ನು ದೋಚುವಲ್ಲಿ ಈ ತಂಡ ನಿರತವಾಗಿದೆ. ಸಾಮಾನ್ಯ ಜನ ಕೂಡಾ ಈ ದುರುಳರ ಮಾತಿಗೆ ಬಲಿಬಿದ್ದು ಇದ್ದದ್ದನ್ನು ಕಳೆದುಕೊಂಡು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗಷ್ಟೇ ವಿವಿಧ ಕಂಪೆನಿಯ ಮೊಬೈಲ್ ಟವರ್ ನಿರ್ಮಾಣದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದಿರುವ ಘಟನೆಗಳು ಬೆಳಕಿಗೆ ಬಂದರೂ ಕೂಡಾ ಇದೀಗ ಮತ್ತೆ ಮತ್ತೆ ಇದೇ ಜಾಲಕ್ಕೆ ಜನ ಬಲಿಬಿದ್ದು, ತನ್ನ ಜೇಬಿನಲ್ಲಿದ್ದ ಹಣದೋಚಲು ತಾವೇ ಕತ್ತರಿಕೊಟ್ಟು ಹಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

Write A Comment