ಕನ್ನಡ ವಾರ್ತೆಗಳು

ಖಾಸಗಿ ಚಾನೆಲ್ ಹೆಸರಿನಲ್ಲಿ ಸೋದರ ಮಾವನಿಗೆ ಬ್ಲ್ಯಾಕ್‌ಮೇಲ್: ಆರೋಪಿ ಅಳಿಯ ಪೊಲೀಸ್ ವಶಕ್ಕೆ

Pinterest LinkedIn Tumblr

ಕುಂದಾಪುರ: ಖಾಸಗಿ ಸುದ್ದಿ ವಾಹಿನಿಯೊಂದರ ಹೆಸರಿನಲ್ಲಿ ಸ್ವಂತ ಸೋದರ ಮಾವನನ್ನೇ ದೂರವಾಣಿ ಕರೆ ಮಾಡಿ 1.5 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್‌ಮೇಲ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ಸಮೀಪದ ಉಪ್ಪುಂದ ನಿವಾಸಿ ಪ್ರದೀಪ್ ಖಾರ್ವಿ (24) ಎಂಬಾತನೇ ಸೋದರಮಾವನಿಗೆ ಬ್ಲ್ಯಾಕ್‌ಮೇಲ್ ಮಾಡಿ ಸಿಕ್ಕಿಬಿದ್ದಾತ.

Byndoor_Blackmail_Case (1) Byndoor_Blackmail_Case Byndoor_Blackmail_Case (5) Byndoor_Blackmail_Case (3) Byndoor_Blackmail_Case (6) Byndoor_Blackmail_Case (4) Byndoor_Blackmail_Case (2)

ಘಟನೆ ಹಿನ್ನೆಲೆ: ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಅಣ್ಣಪ್ಪ ಖಾರ್ವಿ ಎನ್ನುವವರ ಸೋದರ ಅಳಿಯನೇ ಈ ಪ್ರದೀಪ. ಓರಿಸ್ಸಾ ಮೂಲದಿಂದ ಬೋಟಿನ ಕೆಲಸಕ್ಕೆ ಜನರನ್ನು ಕರೆಸುವ ಕೆಲಸ ಮಾಡಿಕೊಂಡಿದ್ದ ಈತ ಕಮಿಷನ್ ಆಧಾರದಲ್ಲಿ ಹಣ ಪಡೆಯುತ್ತಿದ್ದ. ಅಣ್ಣಪ್ಪ ಖಾರ್ವಿ ಕುಟುಂಬದೊಂದಿಗೆ ವ್ಯಾವಹಾರಿಕವಾಗಿ ಹಾಗೂ ಹಣಕಾಸು ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದು ಇದ್ದಿತ್ತು ಎನ್ನಲಾಗಿದೆ. ವಾರಗಳ ಹಿಂದೆ ಅಣ್ಣಪ್ಪ ಖಾರ್ವಿಯವರಿಗೆ ಅಪರಿಚಿತ ದೂರವಾಣಿ ಕರೆಯೊಂದು ಬಂದಿದ್ದು, ಆ ಕಡೆಯಿಂದ ಮಾತನಾಡಿದ ವ್ಯಕ್ತಿ, ತಾನೂ ಸುದ್ದಿವಾಹಿನಿಯೊಂದರ ವರದಿಗಾರನಾಗಿದ್ದು, ನಿಮ್ಮ ವಿಚಾರ ನನಗೆ ತಿಳಿದಿದೆ, ನಿಮ್ಮ ವ್ಯಯಕ್ತಿಕ ವಿಡೀಯೋ ಸಿ.ಡಿ. ನಮಗೆ ದೊರೆತಿದ್ದು ಅದನ್ನು ಪ್ರಸಾರ ಮಾಡದಿರಲು ಒಂದೂವರೆ ಲಕ್ಷ ಹಣವನ್ನು ನೀಡಬೇಕು ಎಂದು ಬೆದರಿಕೆ ಹಾಕಿದ್ದಾನೆ. ಆ ಬಳಿಕ ಅಣ್ಣಪ್ಪ ಖಾರ್ವಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಸೋಮವಾರವೂ ಇದೇ ವ್ಯಕ್ತಿ ಕರೆ ಮಾಡಿ ನಮ್ಮ ಬಳಿಯಿರುವ ಸಿ.ಡಿ.ಯನ್ನು ಒಬ್ಬರ ಬಳಿ ಕೊಟ್ಟು ಕಳುಹಿಸುತ್ತೇನೆ, ನೀವು ಒಂದೂವರೆ ಲಕ್ಷ ಹಣವನ್ನು ಹೊಂದಿಸಿ ಕುಂದಾಪುರದಲ್ಲಿ ಆತನ ಬಳಿ ಕೊಡಿ ಎಂದು ಹೇಳುತ್ತಾನೆ.

ಕೂಡಲೇ ಅಣ್ಣಪ್ಪ ಖಾರ್ವಿ ಪೊಲಿಸರಿಗೆ ಈ ವಿಚಾರವನ್ನು ತಿಳಿಸಿದ್ದು ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ಪೊಲೀಸರು ಆ ಯುವಕನನ್ನು ಕುಂದಾಪುರದಲ್ಲಿ ಬಂಧಿಸಿ ಬಾಯ್ಬಿಡಿಸಿದಾಗ ಪ್ರದೀಪ್ ಖಾರ್ವಿ ಈ ಬ್ಲ್ಯಾಕ್‌ಮೇಲ್ ಪ್ರಕರಣ ರುವಾರಿಯೆಂಬುದು ತಿಳಿಯುತ್ತದೆ. ಪೊಲಿಸರು ಪ್ರದೀಪ್ ಖಾರ್ವಿಯನ್ನು ಮಣಿಪಾಲದಲ್ಲಿ ಬಂಧಿಸುತ್ತಾರೆ.

ಸದ್ಯ ಆರೋಪಿಯಿಂದ ಕಾರೊಂದನ್ನು ವಶಪಡಿಸಿಕೊಂಡಿರುವ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Write A Comment