ಕನ್ನಡ ವಾರ್ತೆಗಳು

ಜು.9: ಮರಳುಗಾರಿಕೆ ನಿಷೇಧ ವಿರುದ್ಧ ಸಿವಿಲ್ ಗುತ್ತಿಗೆದಾರರಿಂದ ಪ್ರತಿಭಟನೆ

Pinterest LinkedIn Tumblr

Cca_press_meet_4

ಮಂಗಳೂರು, ಜು.8: ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಳೆಗಾಲದಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿರುವುದರಿಂದ ಬಹುತೇಕ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿವೆ. ಜನ ಸಾಮಾನ್ಯರು ಮರಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಿವಿಲ್ ಗುತ್ತಿಗೆದಾರರಿಂದ ಜುಲೈ 9ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಜೂನ್ 15ರಿಂದ ಆಗಸ್ಟ್ 3ರವರೆಗೆ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ಮರಳು ತೆಗೆಯಬಾರದು ಎಂಬ ಕೇಂದ್ರ ಸರಕಾರದ ನಿಷೇಧವಿರುವುದರಿಂದ ಜಿಲ್ಲೆಯಲ್ಲಿ ಈ ಬಗ್ಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಒಂದು ವಾರದ ಒಳಗೆ ದಾಸ್ತಾನು ಇಟ್ಟಿರುವ ಮರಳನ್ನು ಒದಗಿಸುವ ಪರ್ಯಾಯ ವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿ ಭರವಸೆ ನೀಡಿದ್ದರೂ ಕಳೆದ 15 ದಿನಗಳಿಂದ ಯಾವುದೇ ಪರ್ಯಾಯ ವ್ಯವಸ್ಥೆಆಗದೆ ಇರುವ ಕಾರಣ ಸಮಸ್ಯೆ ಉಂಟಾಗಿದೆ.

Cca_press_meet_3 Cca_press_meet_2

ಈ ಹಿಂದೆ ಜಿಲ್ಲೆಯಿಂದ ಹೊರಗೆ ಮರಳು ಸಾಗಾಟ ಮಾಡುವುದನ್ನು ಸಂಘಟನೆಯಿಂದ ವಿರೊಧಿಸಲಾಗಿತ್ತು. ಜಿಲ್ಲಾಧಿಕಾರಿಯೂ ಈ ಬಗ್ಗೆ ಆದೇಶ ಹೊರಡಿಸಿದ್ದರೂ ಅಕ್ರಮವಾಗಿ ಹೊರಜಿಲ್ಲೆಗಳಿಗೆ ಇಲ್ಲಿಂದ ಮರಳು ಸಾಗಾಟ ನಡೆಯುತ್ತಿತ್ತು. ಮಳೆಗಾಲದಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿರುವ ಕಾರಣ ಈ ಹಿಂದೆ 200ಸಿಎಫ್‌ಟಿ ಮರಳಿಗೆ 3ಸಾವಿರ ರೂ. ಇದ್ದ ಮರಳಿನ ದರ 8ಸಾವಿರ ರೂ.ಗೆ ಹಾಗೂ 300ಸಿಎಫ್‌ಟಿಗೆ 8ಸಾವಿರ ರೂ. ಇದ್ದ ದರ ಈಗ 12ಸಾವಿರ ರೂ.ಗೆ ಏರಿಕೆ ಆಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು,ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪುರುಷೋತ್ತಮ ಕೊಟ್ಟಾರಿ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ದಿನಕರ ಸುವರ್ಣ, ಮಹಾಬಲ ಕೊಟ್ಟಾರಿ, ಕಾರ್ಯದರ್ಶಿ ದೇವಾನಂದ ಮತ್ತಿತರರು ಉಪಸ್ಥಿತರಿದ್ದರು.

Write A Comment