ಕನ್ನಡ ವಾರ್ತೆಗಳು

ಡೆಂಗ್ ನಿಯಂತ್ರಣಕ್ಕೆ ತ್ವರಿತಗತಿಯ ಸ್ಪಂದನಾ ತಂಡ ರಚನೆ : ಸಚಿವ ಯು.ಟಿ. ಖಾದರ್

Pinterest LinkedIn Tumblr

Dc_Utkadr_meet_1

ಮಂಗಳೂರು, ಜುಲೈ.06 : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗ್ ರೋಗವನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲಾ ಮತ್ತು ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದ ರ್ಯಾಪಿಡ್ ರೆಸ್ಪಾನ್ಸ್ ಟೀಮ್ (ತ್ವರಿತಗತಿಯ ಸ್ಪಂದನಾ ತಂಡ) ರಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲಾ ಮಟ್ಟದ ತಂಡದಲ್ಲಿ ಡಿಎಸ್‌ಒ, ಡಿವಿಬಿಡಿಸಿಒ, ಎಪಿಡೆಮಿಯಾಲಜಿಸ್ಟ್ ಮತ್ತು ಎಂಟೋಮೊಜಿಸ್ಟ್‌ಗಳು ಮತ್ತು ತಾಲೂಕು ಮಟ್ಟದ ತಂಡದಲ್ಲಿ ತಾಲೂಕು ಆರೋಗ್ಯಾಧಿಕಾರಿ, ಹಿರಿಯ ಆರೋಗ್ಯ ಸಹಾಯಕ ಪುರುಷ ಮತ್ತು ಮಹಿಳೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ವೈದ್ಯಾಧಿಕಾರಿ, ಆಯಾ ಉಪ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರು ಇರುತ್ತಾರೆ. ಇವರು ಜ್ವರ ಪ್ರಕರಣಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೋಗ ನಿಯಂತ್ರಣಕ್ಕೆ ಕ್ರಮ ಜರಗಿಸಲು ಸಿಬ್ಬಂದಿಗೆ ನಿರ್ದೇಶನ ನೀಡಲಿದ್ದಾರೆ ಎಂದರು.

ಜನರ ನಿರ್ಲಕ್ಷ: ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಡೆಂಗ್, ಮಲೇರಿಯಾ, ಎಚ್1ಎನ್1, ಇಲಿಜ್ವರ ಇತ್ಯಾದಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮ ವಹಿಸಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮೊದಲು ಕಾಣಿಸಿಕೊಂಡ ಡೆಂಗ್ ಆ ಬಳಿಕ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಮತ್ತು ಉಜಿರೆ ಪ್ರದೇಶಕ್ಕೂ ಹಬ್ಬಿತ್ತು. ತಕ್ಷಣ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮನೆಮನೆ ಭೇಟಿ ನೀಡಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದೆ. ಆದರೆ ಜನರು ನಿರೀಕ್ಷಿತ ರೀತಿಯಲ್ಲಿ ಆರೋಗ್ಯ ಇಲಾಖೆಯ ಜತೆ ಕೈ ಜೋಡಿಸಿಲ್ಲ. ಜ್ವರ ಬಂದರೂ ನಿರ್ಲಕ್ಷಿಸಿದ್ದಾರೆ. ಇದು ರೋಗ ವ್ಯಾಪಕವಾಗಿ ಹಬ್ಬಲು ಕಾರಣವಾಯಿತು. ಸರಕಾರಿ ವೆನ್ಲಾಕ್ ಆಸ್ಪತ್ರೆಯ ಬದಲು ಖಾಸಗಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡರು. ಅಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಜಿಲ್ಲೆಯಲ್ಲಿ ನಾಲ್ವರು ಡೆಂಗ್‌ನಿಂದ ಮೃತಪಟ್ಟಿದ್ದರೆ, ಡೆಂಗ್ ಶಂಕಿತ ಪ್ರಕರಣದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಖಾದರ್ ತಿಳಿಸಿದರು.

Dc_Utkadr_meet_2

ಜ್ವರ ಸಮೀಕ್ಷೆ/ಫಾಗಿಂಗ್: ಡೆಂಗ್ ಬಾಧಿತ ವ್ಯಕ್ತಿಯ ಮನೆಯ ಸುತ್ತಮುತ್ತ ಸುಮಾರು 500 ಮೀಟರ್ ಅಥವಾ 50 ಮನೆ ವ್ಯಾಪ್ತಿಯಲ್ಲಿ ಜ್ವರ ಸಮೀಕ್ಷೆ ನಡೆಸಿ ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಕಿರಿಯ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತ ಸಂಸ್ಥೆಗಳ ಸಹಾಯದಲ್ಲಿ ಶೇ.2 ಪೈರಿಥ್ರಂ ಉಪಯೋಗಿಸಿ ಒಳಾಂಗಣ ಫಾಗಿಂಗ್ ಮಾಡಲಾಗುತ್ತದೆ. ಮಂಗಳೂರು ತಾಲೂಕಿನಲ್ಲಿ 2 ತಂಡದ 7 ಯಂತ್ರಗಳು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಯಲ್ಲಿ ತಲಾ 2 ತಂಡದ ತಲಾ 4 ಯಂತ್ರಗಳು, ಸುಳ್ಯದಲ್ಲಿ 2 ತಂಡದ 2 ಯಂತ್ರಗಳು ಫಾಗಿಂಗ್‌ಮಾಡಲಾಗಿದೆ ಎಂದವರು ತಿಳಿಸಿದರು.

ಪರಿಹಾರವಿಲ್ಲ: ಡೆಂಗ್‌ನಿಂದ ಮೃತರಾದವರ ಕುಟುಂಬಕ್ಕೆ ಸರಕಾರ ದಿಂದ ಯಾವುದೇ ಪರಿಹಾರವಿಲ್ಲ. ಆದರೆ, ಅವರ ಆಸ್ಪತ್ರೆಯ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲು ಅವಕಾಶವಿದೆ. ಡೆಂಗ್‌ನಿಂದ ಮೃತಪಟ್ಟ ಕುಟುಂಬದ ಸದಸ್ಯರು ಆಸ್ಪತ್ರೆಯ ವೆಚ್ಚದ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಿದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1/3ರಷ್ಟು ಪರಿಹಾರ ದೊರಕಿಸಿಕೊಡಬಲ್ಲೆ ಎಂದು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಿ.ಪಂ.ಸಿಇಒ ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಮನಪಾ ಪ್ರಭಾರ ಆಯುಕ್ತ ಗೋಕುಲದಾಸ ನಾಯಕ್, ಡಿಎಚ್‌ಒ ಡಾ.ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.

Write A Comment