ಕನ್ನಡ ವಾರ್ತೆಗಳು

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ.

Pinterest LinkedIn Tumblr

Dc_meet_photo_1

ಮಂಗಳೂರು, ಜು.04 : ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಪತ್ತೆ ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಶುಕ್ರವಾರ ತನ್ನ ಕಚೇರಿ ಸಭಾಂಗಣದಲ್ಲಿ ನಡೆದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಿ ಎಂದು ಸೂಚಿಸಿದ್ದಾರೆ.

ಎನ್‌ಜಿಒ, ಸ್ಥಳೀಯ ಸಂಘಸಂಸ್ಥೆಗಳನ್ನು ಬಳಸಿ ಕೊಂಡು ಆರೋಗ್ಯ ಇಲಾಖೆ ಶೀಘ್ರ ಶುಚಿತ್ವ ಅಭಿಯಾನ ಕೈಗೊಳ್ಳಬೇಕು. ತಾಲೂಕು ಮಟ್ಟದಲ್ಲಿ ವೈದ್ಯರು, ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಎ.ಬಿ.ಇಬ್ರಾಹೀಂ ಅಧಿಕಾರಿಗಳಿಗೆ ಸೂಚಿಸಿದರು.

ಸಾಂಕ್ರಾಮಿಕ ರೋಗಗಳ ಬಗ್ಗೆ ಜಿಲ್ಲೆಯ ಜನತೆಯಲ್ಲಿ ಭಯದ ವಾತಾವರಣವಿದೆ. ಸಾಮಾನ್ಯ ಜ್ವರ ಬಂದರೂ ರಕ್ತ ಪರೀಕ್ಷೆಗೆ ತೆರಳುತ್ತಿದ್ದಾರೆ. ವೈದ್ಯರೂ ಕೂಡಾ 3 ದಿನಗಳವರೆಗೆ ನಿರಂತರ ರಕ್ತ ಪರೀಕ್ಷೆಗೆ ಸೂಚಿಸುತ್ತಿದ್ದಾರೆ. ಪ್ರತಿಯೊಂದು ರಕ್ತ ಪರೀಕ್ಷೆಗೂ ಕನಿಷ್ಠ 1,200 ರೂ.ಗಳಂತೆ ಸಾರ್ವಜನಿಕರು ಖರ್ಚು ಮಾಡುತ್ತಿದ್ದು, ಇದರಿಂದ ರೋಗಿಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಡಾ.ಶ್ರೀನಿವಾಸ ಕಕ್ಕಿಲಾಯ ಹೇಳಿದರು.

Dc_meet_photo_2 Dc_meet_photo_3 Dc_meet_photo_4

ಡೆಂಗ್ ಜ್ವರ ಬಂದರೂ ಮೂರು ದಿನದಲ್ಲಿ ಜ್ವರ ಕಡಿಮೆಯಾಗಲಿದೆ. ಬಳಿಕ ಮತ್ತೆ ಜ್ವರ ಬಂದು ತೀವ್ರ ರಕ್ತಸ್ರಾವವಾದರೆ ಮಾತ್ರ ರಕ್ತಪರೀಕ್ಷೆಯ ಅಗತ್ಯವಿರುವ ಕುರಿತು ಆರೋಗ್ಯ ಇಲಾಖೆಯ ನಿರ್ದೇಶನವಿದ್ದರೂ ಜಾಗೃತಿ ಮೂಡಿಸಲಾಗುತ್ತಿಲ್ಲ. ಡೆಂಗ್‌ಗೆ ನೋವು ಕಡಿಮೆಯಾಗುವ ಮಾತ್ರೆಯ ಅಗತ್ಯವಿಲ್ಲ. ವಿಶ್ರಾಂತಿ ಮುಖ್ಯ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ತಿಳಿಸಿದರು.  2007 ರಿಂದ 2014 ರವರೆಗೆ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 65 ಮಂದಿ ಮಲೇರಿಯಾದಿಂದ ಮೃತಪಟ್ಟಿದ್ದಾರೆ ಎಂಬುದಾಗಿ ಆಸ್ಪತ್ರೆಯವರು ದೃಢಪಡಿಸಿದ್ದರೂ ಆರೋಗ್ಯ ಇಲಾಖೆ ಕೇವಲ 12ನ್ನು ಮಾತ್ರ ಅಧಿಕೃತಗೊಳಿಸಿದೆ.

ತ್ಯಾಜ್ಯ ವಿಲೇವಾರಿ ಮತ್ತು ಪರಿಸರ ಶುಚಿಯಾಗಿಡುವ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಜಾಸ್ತಿಯಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಬ್ಬರ್ ಪ್ಲಾಂಟೇಶನ್‌ಗಳಲ್ಲಿ ಸೊಳ್ಳೆ ಉತ್ಪತ್ತಿ ಜಾಸ್ತಿಯಾಗುತ್ತಿದೆ. ಸಾಂಕ್ರಾಮಿಕ ರೋಗ ನಿರ್ಮೂಲನೆಗೆ ಐದು ವರ್ಷದ ಯೋಜನೆ ರೂಪಿಸಿ ಎಂದು ಡಾ.ಶಾಂತಾರಾಮ ಬಾಳಿಗ ಎಂದು ಹೇಳಿದರು.

ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಎಪ್ರಿಲ್‌ನಲ್ಲಿ ಜಿಲ್ಲಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಮತ್ತು ಆಶಾ ಕಾರ್ಯಕರ್ತರ ಸಹಿತ ತಾಲೂಕು ಮಟ್ಟದ ಅಧಿಕಾರಿಗಳ ತಂಡ ರಚಿಸಲಾಗಿದೆ. ಜೂನ್‌ನಲ್ಲಿ ಮಲೇರಿಯಾ ಮತ್ತು ಡೆಂಗ್ ನಿರ್ಮೂಲನೆ ಮಾಸಾಚರಣೆ ನಡೆಸಲಾಗಿದ್ದು, ಪ್ರತಿವಾರ ಜಿ.ಪಂ. ಸಿಇಒ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿ ಡಾ.ಅರುಣ್ ಕುಮಾರ್ ಹೇಳಿದರು.

ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಜಿ.ಪಂ. ಸಿಇಒ ಶ್ರೀವಿದ್ಯಾ, ಮನಪಾ ಪ್ರಭಾರ ಆಯುಕ್ತ ಗೋಕುಲ್‌ದಾಸ್ ನಾಯಕ್, ಡಿಎಚ್‌ಒ ಡಾ.ರಾಮಕೃಷ್ಣ ರಾವ್, ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿದೇವಿ ಉಪಸ್ಥಿತರಿದ್ದರು.

Write A Comment