ಕನ್ನಡ ವಾರ್ತೆಗಳು

ಆನ್‌ಲೈನ್ ಮೂಲಕ ಡಬ್ಬಲ್ ಹಣದ ಆಮಿಷ; ಲಕ್ಷಾಂತರ ಹಣ ವಂಚಿಸಿದ ಮೂವರು ಖದೀಮರ ಬಂಧನ

Pinterest LinkedIn Tumblr

ಉಡುಪಿ/ಕುಂದಾಪುರ : ಹಾಕಿದ ಹಣಕ್ಕೆ ದುಪ್ಪಟ್ಟು ಹಣ ನೀಡುವುದಾಗಿ ವೆಬ್ ಸೈಟ್ ಮೂಲಕ ಆನ್ ಲೈನ್‌ನಲ್ಲಿ ಜಾಹಿರಾತು ನೀಡಿ ಮುಗ್ದ ಗ್ರಾಹಕರನ್ನು ವಂಚಿಸಿ ಲಕ್ಷಾಂತರ ರೂಪಾಯಿಗಳನ್ನು ದೋಚಿದ್ದ ಉತ್ತರ ಪ್ರದೇಶದ ಅಲಹಾಬಾದ್‌ನ ವಂಚಕರ ತಂಡವನ್ನು ಅಲ್ಲಿನ ಪೊಲೀಸರ ಸಹಾಯದಿಂದ ಹೆಡೆಮುರಿ ಕಟ್ಟಿ ಕುಂದಾಪುರಕ್ಕೆ ತರುವ ಮೂಲಕ ಇಲ್ಲಿನ ಪೊಲೀಸರು ಸೈಬರ್ ಅಪರಾಧದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಪ್ರಕರಣದ ವಿವರ : ಕಳೆದ ಜನವರಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದ ವಂಡಾರಿನ ನವೀನ್ ಅಡಿಗ ಎನ್ನುವವರು ಆನ್‌ಲೈನ್‌ನಲ್ಲಿ ಪರಿಚಯವಾದ ವಿದೇಶಿ ಮೂಲದ ಸತ್ನಮ್ ಹಾಗೂ ಇಂಡೆಕ್ಸ್ ಟ್ರೇಡರ್‍ಸ್ ಎನ್ನುವ ಹೆಸರಿನಲ್ಲಿ ನೊಂದಾವಣೆಯಾಗಿದ್ದ ಹಣಕಾಸು ವಹಿವಾಟು ಸಂಸ್ಥೆಯೊಂದರ ಜಾಹಿರಾತು ಹಾಗೂ ಮಾಹಿತಿಯಿಂದ ವಿಶ್ವಾಸ ಹೊಂದಿದ್ದ ತಾನು ಕುಂದಾಪುರದ ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ಮೂಲಕ ಹಣ ಹೂಡಿದ್ದು. ತಾನು ಹೂಡಿಕೆ ಮಾಡಿರುವ ಹಣಕ್ಕೆ ಪ್ರತಿಫಲವನ್ನು ನೀಡದೆ ಈ ಸಂಸ್ಥೆ ವಂಚನೆ ಮಾಡಿದೆ ಎಂದು ದೂರು ನೀಡಿದ್ದರು.

Kndpr_Anline Fraud_Case Kndpr_Anline Fraud_Case (8) Kndpr_Anline Fraud_Case (6) Kndpr_Anline Fraud_Case (4) Kndpr_Anline Fraud_Case (2) Kndpr_Anline Fraud_Case (5) Kndpr_Anline Fraud_Case (7) Kndpr_Anline Fraud_Case (3) Kndpr_Anline Fraud_Case (1)

ಪ್ರತಿ ಬಾರಿ ಹಣ ಹೂಡಿಕೆ ಮಾಡಿದ ಸಂದರ್ಭದಲ್ಲಿಯೂ ಹೂಡಿಕೆ ಮಾಡಿದ ಹಣದ ದುಪ್ಪಟ್ಟು ಮೊತ್ತವನ್ನು ನಮೂದಿಸಿರುವ ರಾಷ್ಟೀಕೃತ ಬ್ಯಾಂಕಿನ ಚೆಕ್‌ಗಳ ಪ್ರತಿಯನ್ನು ಇ ಮೇಲ್ ಮೂಲಕ ಕಳುಹಿಸಿ ತನ್ನನ್ನು ನಂಬಿಸುವ ಪ್ರಯತ್ನವನ್ನು ಮಾಡಿದ್ದರು. ಹೂಡಿಕೆ ಹಣ ಹಾಗೂ ಪ್ರತಿಫಲಗಳ ಕುರಿತಾದ ಲೆಕ್ಕಾಚಾರಗಳನ್ನು ಆನ್‌ಲೈನ್‌ನಲ್ಲಿ ನಮೂದಿಸುವ ಮೂಲಕ ಗ್ರಾಹಕರನ್ನು ನಂಬಿಸುವ ಪ್ರಯತ್ನಗಳನ್ನು ಈ ಕಂಪೆನಿ ಮಾಡುತ್ತಿತ್ತು ಎನ್ನುವ ಆರೋಪಗಳನ್ನು ದೂರುದಾರರ ಮಾಡಿದ್ದರು.

ಸೈಬರ್ ಅಪರಾಧ ಪ್ರಕರಣದ ಅಡಿಯಲ್ಲಿ ದೂರನ್ನು ದಾಖಲಿಸಿಕೊಂಡಿದ್ದ ಕುಂದಾಪುರ ಪೊಲೀಸರು ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ ಅವರ ನೇತ್ರತ್ವದಲ್ಲಿ ಪ್ರಕರಣದ ವಿಸ್ತ್ರತ ತನಿಖೆಗೆ ಮುಂದಾಗಿದ್ದರು. ಸಂಸ್ಥೆಯ ನೊಂದಾವಣೆ ಹಾಗೂ ದಾಖಲೆಗಳ ಕುರಿತು ಸಮಗ್ರ ಅಧ್ಯಯನಕ್ಕೆ ಮುಂದಾಗಿದ್ದ ಪೊಲೀಸರಿಗೆ ಆನ್‌ಲೈನ್‌ನಲ್ಲಿಯೇ ಮೋಸಗಾರರ ಅಸಲಿ ಭಂಡವಾಳ ಬಯಲಾಗಿತ್ತು. ವಿದೇಶಿ ಮೂಲದ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ಮೋಸಗಾರರ ತಂಡ ನೆಲೆಯಾಗಿರುವುದು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಎನ್ನುವ ಸತ್ಯ ಗೊತ್ತಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಹೆಚ್ಚುವರಿ ಅಧೀಕ್ಷಕ ಸಂತೋಷ್‌ಕುಮಾರ ಹಾಗೂ ಡಿವೈ‌ಎಸ್‌ಪಿ ಮಂಜುನಾಥ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಆರೋಪಿಗಳ ಜಾಡು ಪತ್ತೆಗಾಗಿ ಬಲೆ ಬೀಸಿದ್ದ ಕುಂದಾಪುರದ ಪೊಲೀಸರ ತಂಡ ಉತ್ತರ ಪ್ರದೇಶದ ಸೈಬರ್ ಅಪರಾಧ ವಿಭಾಗದ ಹಿರಿಯ ಅಧಿಕಾರಿಗಳ ಸಹಕಾರದಿಂದ ಆರೋಪಿಗಳ ನೆಲೆ ಪತ್ತೆ ಮಾಡಿದ್ದಾರೆ.

ಈ ಪ್ರಕರಣದ ಆರೋಪಿಗಳ ವಿರುದ್ದ ಉತ್ತರ ಪ್ರದೇಶದ ಪೊಲೀಸರು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಂಗ ಬಂಧನದಲ್ಲಿ ಇದ್ದ ಆರೋಪಿಗಳಾದ ಸಂದೀಪ್, ಅರ್ಜಿತ್ ಹಾಗೂ ಶಿವಂ ಕುಂದಾಪುರದ ಪ್ರಕರಣದ ವಿಚಾರಣೆಗಾಗಿ ಕರೆ ತರಲು ಅನುಮತಿ ನೀಡುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯ ನೀಡಿದ್ದ ಆದೇಶದನ್ವಯ ಸುಮಾರು 2000 ಕಿ.ಮೀ ದೂರದ ಉತ್ತರ ಪ್ರದೇಶದಿಂದ 15 ಮಂದಿ ಶಸ್ತ್ರಧಾರಿ ಪೊಲೀಸರ ಬಿಗಿ ಭದ್ರತೆಯಲ್ಲಿ ಕರೆ ತಂದಿದ್ದ ಮೂವರು ಆರೋಪಿಗಳನ್ನು ಮಂಗಳವಾರ ಕುಂದಾಪುರದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ತಾವು ತಮ್ಮ ವಕೀಲರೊಂದಿಗೆ ಹಾಜರಾಗಲು ಅವಕಾಶ ನೀಡಬೇಕು ಎನ್ನುವ ಆರೋಪಿಗಳ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಲಯ ಜೂನ್ 3 ರ ಒಳಗೆ ವಕೀಲರನ್ನು ನಿಯೋಜನೆಯನ್ನು ಮಾಡಿಕೊಳ್ಳಲು ಕಾಲಾವಕಾಶ ನೀಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Write A Comment