ಕನ್ನಡ ವಾರ್ತೆಗಳು

ಆಕಾಶದಲ್ಲಿ ಗುರು-ಶುಕ್ರ ಸಮಾಗಮ : ವೀಕ್ಷಿಸಿ ಇಂದು-ನಾಳೆ ವರ್ಷಕ್ಕೊಮ್ಮೆ ಗೋಚರಿಸುವ ಈ ಸಮಾಗಮ.

Pinterest LinkedIn Tumblr

jupitor_venus_meet

ಉಡುಪಿ, ಜೂ.30 : ಈ ವಾರ ಪಶ್ಚಿಮ ದಿಗಂತದಲ್ಲಿ ಗುರುಗ್ರಹ ಹೊಳೆಯುವ ಶುಕ್ರಗ್ರಹದ ಸಮೀಪದಲ್ಲಿ ಕಾಣಿಸಿಕೊಳ್ಳುತ್ತದೆ. ಜೂ.30 ಮತ್ತು ಜುಲೈ 1ರಂದು ಈ ಎರಡು ಗ್ರಹಗಳು ಅತೀ ಸಮೀಪದಲ್ಲಿ ಗೋಚರಿಸಲಿವೆ. ವರ್ಷಕ್ಕೊಮ್ಮೆ ಗೋಚರಿಸುವ ಈ ಸಮಾಗಮ ಮಳೆ ಇಲ್ಲದಿದ್ದಲ್ಲಿ ಶುಭ್ರ ಆಕಾಶದಲ್ಲಿ ಅತಿ ಸುಂದರವಾಗಿ ವಾರವಿಡೀ ಕಾಣಿಸಲಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಸೂರ್ಯನಿಂದ ಸುಮಾರು 11 ಕೋಟಿ ಕಿ.ಮೀ. ದೂರದಲ್ಲಿರುವ ಶುಕ್ರಗ್ರಹ ಭೂಮಿಗೆ ಕೆಲವೊಮ್ಮೆ 4.5 ಕೋಟಿ ಕಿ.ಮೀ. ಹಾಗೂ ಇನ್ನು ಕೆಲವೊಮ್ಮೆ 22.5 ಕೋಟಿ ಕಿ.ಮೀ. ದೂರದಲ್ಲಿರುತ್ತದೆ. ಹೀಗೆ ಎರಡರ ಚಲನೆಯಲ್ಲಿ ಸಮೀಪಿಸುವ ಕಾಲಕ್ಕೆ ಒಮ್ಮೆ ಉಜ್ವಲವಾಗಿ ಕಾಣಿಸಿಕೊಳ್ಳುತ್ತದೆ.

ಜು.6ರಂದು ದೂರದರ್ಶಕದಲ್ಲಿ ಶುಕ್ರಗ್ರಹ ಚೌತಿಯ ಚಂದ್ರನಂತೆ ಹೊಳೆಯುತ್ತಿರುತ್ತದೆ. ಈ ಒಂದು ತಿಂಗಳು ಶುಕ್ರಗ್ರಹವನ್ನು ದೂರದರ್ಶಕದಲ್ಲಿ ನೋಡಲು ಬಲು ಚೆಂದ. ಭೂಮಿಯಿಂದ ಸುಮಾರು 78 ಕೋಟಿ ಕಿ.ಮೀ. ದೂರದಲ್ಲಿರುವ ಗುರು ಗ್ರಹ, ಶುಕ್ರ ಗ್ರಹಕ್ಕಿಂತ 1,400 ಪಟ್ಟು ದೊಡ್ಡದು. ಈಗ ಶುಕ್ರ ಭೂಮಿಯಿಂದ ಏಳೂವರೆ ಕೋಟಿ ಕಿ.ಮೀ. ದೂರದಲ್ಲಿದೆ. ಅಂತೆಯೇ ಗುರುಗ್ರಹ 90 ಕೋಟಿ ಕಿ.ಮೀ. ದೂರದಲ್ಲಿದೆ. ಆದರೆ ಭೂಮಿಯಿಂದ ನೋಡುವಾಗ ಅಕ್ಕಪಕ್ಕದಲ್ಲಿದ್ದಂತೆ ಭಾಸವಾಗುತ್ತದೆ. ಈಗ ಪೂರ್ವ ಆಕಾಶದಲ್ಲಿ ಚಂದ್ರನ ಪಕ್ಕ ಹೊಳೆಯುವ ಶನಿ ಸುಂದರವಾಗಿ ಕಾಣಿಸುತ್ತಿದೆ.

ದೂರದರ್ಶಕದಲ್ಲಿ ಶುಕ್ರ, ಗುರು ಹಾಗೂ ಶನಿ ಗ್ರಹಗಳನ್ನು ಒಟ್ಟಿಗೆ ನೋಡುವ ಅವಕಾಶ. ಶುಕ್ರಗ್ರಹ, ಅದೊಂದು ಗ್ರಹವೆಂದು ತಿಳಿಯುವುದು ದೂರದರ್ಶಕದಲ್ಲಿ ಈ ಸಮಯದಲ್ಲಿ ಮಾತ್ರ. ಮಳೆಯು ಅವಕಾಶ ನೀಡಿದರೆ, ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಪೂರ್ಣ ಪ್ರಜ್ಞ ಕಾಲೇಜು ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವತಿಯಿಂದ ಜೂ.30 ಮತ್ತು ಜುಲೈ 1ರಂದು ಸಾರ್ವಜನಿಕರಿಗೆ ಆಕಾಶ ವೀಕ್ಷಣೆಗೆ ಅವಕಾಶವಿದೆ ಎಂದು ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

Write A Comment