ಕನ್ನಡ ವಾರ್ತೆಗಳು

ನಕಲಿ ಬೀಡಿಗಳ ಅಕ್ರಮ ಮಾರಾಟ : 65 ಸಾವಿರ ರೂ. ಮೌಲ್ಯದ ಬೀಡಿ ಸಹಿತಾ ಆರೋಪಿ ಸೆರೆ

Pinterest LinkedIn Tumblr

Duplicate_Beedi_Arest_1

ಮಂಗಳೂರು : ಕಳಪೆ ಬೀಡಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಪಿೃಥ್ವಿ ಬೀಡಿಗಳು ಎಂದು ಮುದ್ರಿಸಿರುವ 190 ಬಂಡಲ್‌ಗ‌ಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಸುಮಾರು 65 ಸಾವಿರ ರೂ. ಮೌಲ್ಯದ ಬೀಡಿಗಳಿವೆಯೆನ್ನಲಾಗಿದೆ. ಬಂಧಿತ ಆರೋಪಿಯನ್ನು ಮಾಳಗಾನದ ಮೆಹಬೂಬ (44) ಎನ್ನಲಾಗಿದೆ. ಪ್ರಮುಖ ಆರೋಪಿ ಶಿರಾ ಮೂಲದ ಅಬ್ದುಲ್‌ರೆಹಮಾನ್‌ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿಗಳು ಮಂಗಳೂರು ಪ್ರೀತಿ ಬೀಡಿ ಕಂಪೆನಿಯ ಬೀಡಿಗಳನ್ನು, ಬೆಂಗಳೂರಿನಲ್ಲಿ ಪಿೃಥ್ವಿ ಬೀಡಿಗಳು ಎಂಬ ನಕಲಿ ಕಂಪೆನಿಯ ಹೆಸರಿನಲ್ಲಿ ತಯಾರಿಸಿ, ಈ ಕಳಪೆ ಬೀಡಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಕಾಪಿರೈಟ್‌ ಕಾಯ್ದೆ ಉಲ್ಲಂಘಿಸಿ, ಬೆಂಗಳೂರಿನಲ್ಲಿ ಈ ನಕಲಿ ಬೀಡಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿ, ಚಾಮರಾಜ ಪೇಟೆ ವ್ಯಾಪ್ತಿಯ ರಂಗನಾಥ ಹೊಟೇಲ್‌ ಮುಂಭಾಗದ ಫ್ಲೈಓವರ್‌ ಜಂಕ್ಷನ್‌ ಬಳಿ ಆರೋಪಿಯನ್ನು ಹಿಡಿದು, ಚಾಮರಾಜಪೇಟೆ ಪೊಲೀಸ್‌ ಠಾಣೆಗೆ ಒಪ್ಪಿಸಿ, ಪ್ರಕರಣ ದಾಖಲಿಸಿದ್ದಾರೆ.

ಶಿರಾ ಮೂಲದ ಅಬ್ದುಲ್‌ರೆಹಮಾನ್‌ ಈ ನಕಲಿ ಬೀಡಿಗಳನ್ನು ತಯಾರಿಸುತ್ತಿದ್ದ. ಇದನ್ನು ಮೆಹಬೂಬ ಮಾರಾಟ ಮಾಡುತ್ತಿದ್ದ. ವಿವಿಧ ಅಂಗಡಿಗಳಿಗೆ ಈ ಬೀಡಿಗಳನ್ನು ಸಪ್ಲೈ ಮಾಡಿ, ಇವು ಮಂಗಳೂರು ಪ್ರೀತಿ ಬೀಡಿಗಳೆಂದೇ ನಂಬಿಸುತ್ತಿದ್ದರು. ಆದರೆ ಬೀಡಿಯ ಕಟ್ಟುಗಳಲ್ಲಿ ದರ ನಮೂದಿಸುತ್ತಿರಲಿಲ್ಲ. ಕಳಪೆ ಗುಣಮಟ್ಟದ ಬೀಡಿಗಳಿರುತ್ತಿದ್ದವು. ಅಮಾಯಕ, ಅನಕ್ಷರಸ್ಥ ಗ್ರಾಹಕರು ಇದನ್ನೇ ಪ್ರೀತಿ ಬೀಡಿಯೆಂದು ನಂಬಿ ಖರೀದಿಸಿ, ಮೋಸ ಹೋಗುತ್ತಿದ್ದರು. ಈ ಕಟ್ಟುಗಳಿಗೆ 14 ರೂ.ಗಳನ್ನು ನೈಜ ಕಂಪೆನಿ ನಿಗದಿಪಡಿಸಿದ್ದು ಅದೇ ದರವನ್ನು ಕಳಪೆ ಬೀಡಿಗಳಿಗೂ ಅನ್ವಯವಾಗುವಂತೆ ಈ ಆರೋಪಿಗಳು ಚಾಣಾಕ್ಷತನ ತೋರಿದ್ದರು.

ಪ್ರಮುಖ ಆರೋಪಿ ಅಬ್ದುಲ್‌ ರೆಹಮಾನ್‌ ಕಳೆದ ಡಿಸೆಂಬರ್‌ ತಿಂಗಳಲ್ಲಿ ಸಿಸಿಬಿ ವಂಚನೆ ಮತ್ತು ದುರುಪಯೋಗ ದಳದ ಅಧಿಕಾರಿಗಳು ನಡೆಸಿದ ರಕ್ತಚಂದನ ಕಾರ್ಯಾಚರಣೆಯಲ್ಲಿ ಮಾಲು ಸಮೇತ ಸಿಕ್ಕಿಬಿದ್ದಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಬಳಿಕ ನಕಲಿ ಬೀಡಿ ತಯಾರಿಕೆ ದಂಧೆಯನ್ನು ಆರಂಭಿಸಿದ್ದ. ಇದೀಗ ಈತ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಈ ನಕಲಿ ಜಾಲವನ್ನು ಪತ್ತೆ ಹಚ್ಚಲು ಯೋಜನೆ ರಚಿಸಿದ್ದಾರೆ.

Write A Comment