ಕನ್ನಡ ವಾರ್ತೆಗಳು

ಗಂಗೊಳ್ಳಿ: ಅವೈಜ್ಞಾನಿಕ ರಸ್ತೆ ಚರಂಡಿ ಕಾಮಗಾರಿಗೆ ಸಾರ್ವಜನಿಕರ ಆಕ್ಷೇಪ

Pinterest LinkedIn Tumblr

ಕುಂದಾಪುರ: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ತೆಗೆಯುವ ಕೆಲಸ ಆರಂಭವಾಗುವುದು, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವ ಕೆಲಸ ನಡೆಯುವುದು ಸರ್ವೆ ಸಾಮಾನ್ಯ. ಆದರೆ ಗಂಗೊಳ್ಳಿಯಲ್ಲಿ ಜೆಸಿಬಿ ಯಂತ್ರ ಬಳಸಿ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Gangolli_Road_Problem

ಕಳೆದ ಕೆಲವು ವರ್ಷಗಳಿಂದ ಲೋಕೋಪಯೋಗಿ ಇಲಾಖೆ ಜೆಸಿಬಿ ಯಂತ್ರದ ಮೂಲಕ ಗಂಗೊಳ್ಳಿಯ ಮುಖ್ಯರಸ್ತೆಯ ಕೆಲ ಭಾಗಗಳಲ್ಲಿ ಚರಂಡಿ ತೆಗೆಯಲಾಗುತ್ತಿದೆ. ಆದರೆ ಈ ಚರಂಡಿಯ ಮೂಲಕ ಮಳೆ ನೀರು ಹರಿದು ಹೋಗವ ವ್ಯವಸ್ಥೆ ಮಾಡದಿರುವುದರಿಂದ ಚರಂಡಿಯ ಉಪಯೋಗ ಇಲ್ಲದಂತಾಗಿದೆ. ಮಳೆ ನೀರು ಚರಂಡಿಯಲ್ಲಿ ನಿಲ್ಲುತ್ತಿರುವುದರಿಂದ ಚರಂಡಿಗಳು ಇಂಗು ಗುಂಡಿಗಳಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೇವಲ ಹೆಸರಿಗಷ್ಟೇ ಚರಂಡಿ ತೋಡಿ ಲಕ್ಷಾಂತರ ರೂ. ಹಣವನ್ನು ಕೊಳ್ಳೆ ಹೊಡುವುದು ಇದರ ಹಿಂದಿರುವ ಉದ್ದೇಶ ಎಂಬುದು ಸಾರ್ವಜನಿಕರ ಆಕ್ಷೇಪ. ಪ್ರತಿವರ್ಷ ಚರಂಡಿ ನಿರ್ಮಾಣಕ್ಕೆ ವ್ಯಯಿಸಲಾಗುತ್ತಿರುವ ಹಣವನ್ನು ಶಾಶ್ವತ ಚರಂಡಿ ನಿರ್ಮಾಣಕ್ಕೆ ಖರ್ಚು ಮಾಡಬಹುದಿತ್ತು ಎಂದು ಸಾರ್ವಜನಿಕರು ಇಲಾಖೆ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಚರಂಡಿ ಕಾರ್ಯ ನಡೆದ ಕೆಲವೇ ದಿನಗಳಲ್ಲಿ ಸಾರ್ವಜನಿಕರು ಚರಂಡಿಗಳನ್ನು ಮುಚ್ಚಿಕೊಳ್ಳುತ್ತಿದ್ದಾರೆ ಅಲ್ಲದೆ ಚರಂಡಿ ತೋಡುವ ಮುನ್ನ ಮಳೆ ನೀರು ಯಾವ ದಿಕ್ಕಿನಲ್ಲಿ ಹರಿದು ಹೋಗುವಂತೆ ಮಾಡಬೇಕೆಂಬ ಸರಿಯಾದ ಪ್ಲಾನ್ ಇಲ್ಲದಿರುವುದು ಚರಂಡಿ ತೋಡಿಯೂ ಉಪಯೋಗ ಇಲ್ಲದಂತಾಗಿದೆ. ಮಳೆಗಾಲದ ಸಂದರ್ಭ ಚರಂಡಿಗಳಲ್ಲಿ ನೀರು ನಿಲ್ಲವುದರಿಂದ ಅನೇಕ ಮಂದಿ ವಿದ್ಯಾರ್ಥಿಗಳು, ಪಾದಚಾರಿಗಳು ಚರಂಡಿಯಲ್ಲಿ ಬಿದ್ದು ಗಾಯ ಮಾಡಿಕೊಂಡ ಮತ್ತು ಅನೇಕ ದ್ವಿಚಕ್ರ ಹಾಗೂ ಲಘು ವಾಹನಗಳು ಉರುಳಿ ಬಿದ್ದ ಘಟನೆ ಕೂಡ ನಡೆದಿದೆ. ಅನೇಕರು ತಮ್ಮ ಮನೆ ಮುಂದೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರೂ ಅದನ್ನೆಲ್ಲವನ್ನು ಜೆಸಿಬಿ ಮೂಲಕ ಕೆಡವಿ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇಷ್ಟಾಗಿಯೂ ಈ ವರ್ಷ ಮತ್ತೆ ಪುನ: ಜೆಸಿಬಿ ಮೂಲಕ ಚರಂಡಿ ತೋಡುತ್ತಿರುವುದಕ್ಕೆ ಸಾರ್ವಜನಿಕರು ಮತ್ತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನಗತ್ಯವಾಗಿ ಪ್ರತಿವರ್ಷ ಚರಂಡಿ ತೋಡುವ ನೆವದಲ್ಲಿ ಲಕ್ಷಾಂತರ ರೂ. ಖರ್ಚು ಮಾಡುವ ಬದಲು ಶಾಶ್ವತ ಚರಂಡಿ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲಾಖೆ ಇದೇ ಚಾಳಿ ಮುಂದುವರಿಸಿದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Write A Comment