ಕನ್ನಡ ವಾರ್ತೆಗಳು

ಕಡಿಮೆ ಖರ್ಚು,ಹೆಚ್ಚು ಲಾಭ : ಹಲಸು ಹಣ್ಣಿನ ಮಹಿಮೆ.

Pinterest LinkedIn Tumblr

jack_fruit_photo_1

ಮಂಗಳೂರು ಜೂನ್ 26: ಹಲಸು ಅನೇಕ ವಿಧದಲ್ಲಿ ಉಪಯುಕ್ತವಾದ ಬೆಳೆ. ಇದರ ಬೇಸಾಯ ಕಡಿಮೆ ಖರ್ಚಿನಿಂದ ಕೂಡಿದ್ದು ಹೆಚ್ಚು ಲಾಭ ತರುವ ಬೆಳೆಯಾಗಿದೆ.

ಉಪಯೋಗಗಳು: ತೊಳೆಗಳನ್ನು ನೇರವಾಗಿ ತಿನ್ನಲು ಬಳಸಲಾಗುತ್ತದೆ. ತೊಳೆಗಳಿಂದ ಹಪ್ಪಳ, ಚಿಪ್ಸ್, ಸಂಡಿಗೆ, ಜಾಮ್, ಜೆಲ್ಲಿ, ಪಾನಕ, ಉಪ್ಪಿನಕಾಯಿ ತಯಾರಿಸುತ್ತಾರೆ. ಅವುಗಳನ್ನು ಉಪ್ಪು ಖಾರಗಳಲ್ಲಿ ಅದ್ದಿ ಒಣಗಿಸಿಟ್ಟು ಎಣ್ಣೆಯಲ್ಲಿ ಕರಿದು ತಿಂದರೆ ಗರಿಗರಿಯಾಗಿರುತ್ತದೆ. ಸಕ್ಕರೆ ಪಾಕ ಇಲ್ಲವೇ ಜೇನುತುಪ್ಪದಲ್ಲಿ ಹಾಕಿಟ್ಟು ತಿಂದರೆ ರುಚಿಯಲ್ಲಿ ಸ್ವಾದಿಷ್ಟ. ಅವುಗಳಿಂದ ಕ್ಯಾಂಡಿ ತಯಾರಿಸಬಹುದು.ಬೀಜವನ್ನು ಬೇಯಿಸಿ ಇಲ್ಲವೇ ಹುರಿದಾಗ ಬಲು ರುಚಿಯಾಗಿರುತ್ತವೆ. ಸಾರಿಗೆ ಹಾಕಿದರೆ ಅದರ ರುಚಿ ಹೆಚ್ಚುತ್ತದೆ. ಹಿಟ್ಟು ಬೀಸಿ ರೊಟ್ಟಿ, ದೋಸೆ, ಚಪಾತಿ, ಉಪ್ಪಿಟ್ಟು ಮಾಡಬಹುದು. ಎಳೆಯ ಕಾಯಿಗಳನ್ನು ಪಲ್ಯ, ಸಾರು, ಸಾಗು ಮಾಡಿದಲ್ಲಿ ಬಲು ರುಚಿ.

jack_fruit_photo_2

ಔಷಧೀಯ ಗುಣಗಳು: ಪಕ್ವಗೊಂಡ ಹಣ್ಣು ಶೈತ್ಯಕಾರಕ. ಇದರ ಸೇವನೆ ಪಿತ್ತರಸ ತೊಂದರೆಗಳಲ್ಲಿ ಲಾಭದಾಯಕ. ಅವು ಶುದ್ಧರಕ್ತವನ್ನು ಹೆಚ್ಚಿಸುತ್ತವೆ. ಅವುಗಳಲ್ಲಿ ವಿರೇಚಕ ಗುಣಗಳಿವೆ. ಬೀಜಗಳು ಮೂತ್ರವರ್ಧಕ ಗುಣಗಳನ್ನು ಹೊಂದಿರುತ್ತವೆ. ಹಲಸಿನ ತೊಳೆಗಳನ್ನು ಹೆಚ್ಚಾಗಿ ತಿಂದಲ್ಲಿ ಬೇಗ ಜೀರ್ಣಗೊಳ್ಳುವುದಿಲ್ಲ. ಅದರಿಂದಾಗಿಯೇ ಹಸಿದು ಹಲಸಿನ ಹಣ್ಣು ತಿನ್ನು; ಉಂಡು ಮಾವಿನ ಹಣ್ಣು ತಿನ್ನು ಎಂಬ ಗಾದೆ ಪ್ರಚಲ್ತಿಯಲ್ಲಿದೆ. ಹಣ್ಣಿನ ಸಿಪ್ಪೆ ಮತ್ತು ಎಲೆಗಳು ದನ, ಕರು, ಎಮ್ಮೆ, ಆಡುಗಳ ಉತ್ಕೃಷ್ಟ ಮೇವಾಗುತ್ತವೆ. ಸಿಪ್ಪೆಯಲ್ಲಿ ಪೆಕ್ಟಿನ್ ಇರುತ್ತದೆ. ಎಲೆಗಳನ್ನು ಹೆಣೆದು ಊಟದ ಎಲೆಗಳನ್ನಾಗಿ ಬಳಸುತ್ತಾರೆ. ಒಣ ಎಲೆಗಳಿಂದ ಒಳ್ಳೆಯ ಗೊಬ್ಬರ ತಯಾರಿಸಬಹುದು. ಅವುಗಳನ್ನು ಪಾತಿಗಳ ಅಗಲಕ್ಕೆ ಹರಡಿದಲ್ಲಿ ಒಳ್ಳೆಯ ಹೊದಿಕೆಯಾಗ ಬಲ್ಲವು. ತೊಗಟೆಯಿಂದ ಒಸರುವ ಹಾಲಿನಲ್ಲಿ ರಾಳ ಮತ್ತು ಅಂಟು ಇರುತ್ತವೆ. ಇದನ್ನು ಮಡಕೆಗಳ ಬಿರುಕುಗಳನ್ನು ಮುಚ್ಚಲು ಬಳಸುತ್ತಾರೆ. ತೊಗಟೆಯ ಮೇಲಿನ ಸಿಪ್ಪೆಗಳನ್ನು ಸುಣ್ಣಕಲ್ಲು ಸುಡಲು ಉರುವಲಾಗಿ ಬಳಸುತ್ತಾರೆ. ಇದರ ಕಟ್ಟಿಗೆ ಬೆಲೆಬಾಳುವಂತದ್ದು. ಹಲಗೆ, ತರಾಯಿ, ಕಿಟಕಿ, ಬಾಗಿಲು, ಪೀಠೋಪಕರಣಗಳು ಮುಂತಾಗಿ ತಯಾರಿಸುತ್ತಾರೆ. ಇವೆಲ್ಲವುಗಳ ಜೊತೆಗೆ ಇದು ಅತ್ಯುತ್ತಮ ಸಾಲುಮರ. ನೆರಳನ್ನೊದಗಿಸುತ್ತದೆ. ತೋಟದ ಸುತ್ತ ಗಾಳಿಯ ತಡೆಯಾಗಿ ಎಬ್ಬಿಸಿದಲ್ಲಿ ಲಾಭದಾಯಕ. ಒಂದು ಕುಟುಂಬಕ್ಕೆ ಒಂದು ಮರವಿದ್ದರೆ ಸಾಕು.

ತಳಿಗಳು: ಹಳದಿ ಹಾಗೂ ಬಿಳಿ ಹಳದಿ ತೊಳೆಗಳ ಹಣ್ಣು, ಕಿತ್ತಳೆ ಬಣ್ಣದ ತೊಳೆಗಳ ಹಣ್ಣು, ಚಂದ್ರ ಹಲಸು, ರುದ್ರಾಕ್ಷಿ, ಸಿಂಗಾಪುರ ಹಲಸು, ಹಾಲಿನ ಅಂಟು ಇಲ್ಲದ ಹಲಸು. ನಮ್ಮಲ್ಲಿ ಹಲಸಿನ ಮರಗಳಲ್ಲಿ ಬಹಳಷ್ಟು ವೈವಿಧ್ಯತೆ ಇದ್ದು ಉತ್ತಮ ಬಗೆಗಳನ್ನು ಗುರುತಿಸಿ, ನಿರ್ಲಿಂಗ ವಿಧಾನಗಳಲ್ಲಿ ವೃದ್ಧಿಪಡಿಸಲು ವಿಫುಲ ಅವಕಾಶವಿದೆ.

1 Comment

Write A Comment