ಕನ್ನಡ ವಾರ್ತೆಗಳು

ವನ್ಯಜೀವಿಗಳ ಬೇಟೆ: ಮೂವರು ಆರೋಪಿಗಳ ಸೆರೆ

Pinterest LinkedIn Tumblr

punug_cat_ride

ಪುತ್ತೂರು, ಜೂನ್.26 : ವಿನಾಶದಂಚಿನಲ್ಲಿರುವ ವನ್ಯಜೀವಿಯಾದ ಪುನುಗುಬೆಕ್ಕು ಮತ್ತು ಕಾಡುಬೆಕ್ಕು ಬೇಟೆಯಾಡಿ ಜೀಪೊಂದರಲ್ಲಿ ಸಾಗಾಟ ನಡೆಸುತ್ತಿರುವುದನ್ನು ಗುರುವಾರ ಪತ್ತೆ ಹಚ್ಚಿರುವ ಪುತ್ತೂರು ವಲಯ ಅರಣ್ಯ ಅಧಿಕಾರಿಗಳ ತಂಡ ಸೊತ್ತುಗಳ ಸಹಿತ ಮೂವರನ್ನು ವಶಕ್ಕೆ ಪಡೆದುಕೊಂಡಿದೆ. ಬಂಧಿತ ಆರೋಪಿಗಳನ್ನು ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಪಿ.ಬಿ.ಸುರೇಶ್(29), ಪುರುಷೋತ್ತಮ(30), ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ರದೀಶ್(32) ಎಂದು ಗುರುತಿಸಲಾಗಿದೆ.

ಕಾರ್ಯಾಚರಣೆಯ ವೇಳೆ ಇನ್ನೋರ್ವ ಆರೋಪಿ ಪೆರಾಜೆ ನಿವಾಸಿ ದಿನೇಶ್ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪುತ್ತೂರು ವಲಯ ಅರಣ್ಯ ವ್ಯಾಪ್ತಿಗೊಳಪಟ್ಟ ಜಾಲ್ಸೂರು ಪಶ್ಚಿಮ ಮೀಸಲು ಅರಣ್ಯದ ಕೆಮ್ಮನಬಳ್ಳಿ ಎಂಬಲ್ಲಿ ಅಕ್ರಮವಾಗಿ ಅರಣ್ಯದೊಳಗೆ ಪ್ರವೇಶಿಸಿ ಬಂದೂಕಿನಿಂದ ಒಂದು ಪುನುಗುಬೆಕ್ಕು ಮತ್ತು ಒಂದು ಕಾಡುಬೆಕ್ಕುಗಳನ್ನು ಬೇಟೆಯಾಡಿ ಜೀಪ್‌ನಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಸೊತ್ತು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ. ಪುತ್ತೂರು ಎ.ಸಿ.ಎಫ್. ಬಿ.ಎನ್.ಹರೀಶ್ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿ ಪಿ.ಶ್ರೀಧರ್, ಉಪವಲಯ ಅರಣ್ಯಾಧಿಕಾರಿಗಳಾದ ವೆಂಕಪ್ಪನಾಯ್ಕಾ, ಶಿವಾನಂದ ಆಚಾರ್ಯ, ಅರಣ್ಯ ರಕ್ಷಕರಾದ ವೆಂಕಟೇಶ್, ಸಂಗಮೇಶ್, ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Write A Comment