ಕನ್ನಡ ವಾರ್ತೆಗಳು

ಕಪ್ಪೆ ಚಿಪ್ಪು ಹೆಕ್ಕಲು ಮೂಡುಶೆಡ್ಡೆಯ ಫಲ್ಗುಣಿ ನದಿಗಿಳಿದ ಇಬ್ಬರು ಯುವಕರು ನೀರುಪಾಲು

Pinterest LinkedIn Tumblr

Vamanjoor_drown_1

ಮಂಗಳೂರು, ಜೂ. 24: ಮೂಡುಶೆಡ್ಡೆಯ ಫಲ್ಗುಣಿ ನದಿಯಲ್ಲಿ ಚಿಪ್ಪು ಹೆಕ್ಕಲೆಂದು ನೀರಿಗೆ ಇಳಿದಿದ್ದ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಮೂಡುಶೆಡ್ಡೆ ಸಮೀಪದ ತಾರಿಗುಡ್ಡೆ ನಿವಾಸಿ ಟೋನಿ ತಾವರಿಸ್(32) ಹಾಗೂ ನೀರುಮಾರ್ಗದ ನಿವಾಸಿ ರಮೇಶ್(30) ಎಂಬವರೇ ನೀರುಪಾಲಾದ ಯುವಕರು.

ಟೋನಿ ತಾವರಿಸ್ ಮತ್ತು ರಮೇಶ್ ಇಬ್ಬರೂ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದು, ಮಂಗಳವಾರಮಧ್ಯಾಹ್ನ ಕ್ಯಾಟರಿಂಗ್ ಕೆಲಸ ಮುಗಿಸಿ ಚಿಪ್ಪು ಹೆಕ್ಕಲೆಂದು ಫಲ್ಗುಣಿ ನದಿಯತ್ತ ಹೆಜ್ಜೆ ಹಾಕಿದ್ದರು. ಇವರ ಜೊತೆಗೆ ದೀಪಕ್ ಎಂಬವರು ಕೂಡಾ ಇದ್ದರು. ದೀಪಕ್‌ಗೆ ಈಜಲು ಬಾರದ ಕಾರಣ ಅವರು ನದಿಯ ತಟದಲ್ಲೇ  ಕುಳಿತಿದ್ದರೆನ್ನಲಾಗಿದೆ. ಆದರೆ ಟೋನಿ ಹಾಗೂ ರಮೇಶ್ ನೀರಿಗೆ ಇಳಿದಿದ್ದರು. ಮಳೆಗಾಲದ ಹಿನ್ನೆಲೆಯಲ್ಲಿ ನದಿ ಯಲ್ಲಿ ನೀರು ಭಾರೀ ರಭಸವಾಗಿ ಹರಿಯುತ್ತಿದ್ದ ಕಾರಣ ಈ ಇಬ್ಬರು ಯುವಕರು ಈಜಲಾಗದೆ ನೀರಿನಲ್ಲೇ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ದೀಪಕ್ ಪೊಲೀಸರಿಗೆ ವಿವರಿಸಿದ್ದಾರೆ.

Vamanjoor_drown_2 Vamanjoor_drown_3 Vamanjoor_drown_4 Vamanjoor_drown_5

ಈ ಮೂವರು ಈ ಹಿಂದೆಯೂ ಕಪ್ಪೆ ಚಿಪ್ಪು ಹೆಕ್ಕಲು ಬರುತ್ತಿದ್ದರೆನ್ನಲಾಗಿದ್ದು, ಇಂದು ನದಿ ಹರಿವಿನ ತೀವ್ರತೆ ಅರಿವಿಗೆ ಬಾರದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ತಣ್ಣೀರುಬಾವಿಯ ಲೈಫ್‌ಗಾರ್ಡ್ ಸಿಬ್ಬಂದಿ, ಮುಳುಗು ತಜ್ಞರು ಆಗಮಿಸಿ ನೀರುಪಾಲಾದವರಿಗಾಗಿ ರಾತ್ರಿಯವರೆಗೆ ಶೋಧ ನಡೆಸಿದರೂ ಪತ್ತೆಯಾಗಿಲ್ಲ. ಶೋಧ ಕಾರ್ಯ ನಾಳೆ ಬೆಳಗ್ಗೆ ಮುಂದುವರಿಯಲಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.

ಕಳೆದ ವರ್ಷದ ಮಳೆಗಾಲದಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಇದೇ ಡ್ಯಾಮ್ ಬಲಿ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

Write A Comment