ಕನ್ನಡ ವಾರ್ತೆಗಳು

ನಿರುದ್ಯೋಗಿಗಳಿಗೆ ಉದ್ಯೋಗದ ಅಮೀಷ : 37ಲಕ್ಷ ರೂ ಪಂಗನಾಮ ಹಾಕಿದ ವಂಚಕನ ಬಂಧನ.

Pinterest LinkedIn Tumblr

cheting_women_luck_1

ಬೆಂಗಳೂರು, ಜೂ. 18: ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಬಳ್ಳಾರಿಯ ಮಹಮ್ಮದ್ ಶಕೀಲ್ (34)ನನ್ನು ಬಂಧಿಸಿ ಮೂರುವರೆ ಲಕ್ಷ ಮೌಲ್ಯದ ಸಿ.ಪಿ.ಯು.ಗಳು, ಡಿವಿಆರ್, ಲ್ಯಾಪ್‍ಟಾಪ್‍ಗಳು, ನೋಂದಣಿ ಪ್ರಕ್ರಿಯೆಯ ದಾಖಲಾತಿ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ, ಕಾರ್ಯಾಚರಣೆ ಸಮಯದಲ್ಲಿ ಪ್ರಮುಖ ಆರೋಪಿ, ಕಂಪನಿಯ ಮಾಲೀಕ ಶಬೀರ್ ಅಹಮ್ಮದ್ ಪುನಃ ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ರಮೇಶ್ ತಿಳಿಸಿದ್ದಾರೆ.

ವಿಚಾರಣೆಯಲ್ಲಿ ಕಳೆದ ಜನವರಿಯಿಂದ ಇದುವರೆಗೂ ನೋಂದಣಿ ಮಾಡಿದ ಒಟ್ಟು 825 ಅಭ್ಯರ್ಥಿಗಳಿಂದ ತಲಾ 4500 ರೂ.ಗಳಂತೆ ಒಟ್ಟು 37,12,500 ರೂ, ಗಳನ್ನು ಹಾಗೂ ಪ್ರತಿಶತ 14% ರಂತೆ ಸೇವಾಶುಲ್ಕ 5,19,750 ಹಣವನ್ನು ಸಂಗ್ರಹಿಸಿದ್ದು, ಇದುವರೆಗೂ ಯಾರಿಗೂ ಕೂಡ ಹಣ ಮರುಪಾವತಿಸಿರುವುದಿಲ್ಲ ಹಾಗೂ ನೋಂದಣಿ ಮಾಡಿಸಿಕೊಂಡಿರುವ ಯಾವುದೇ ಅಭ್ಯರ್ಥಿಗಳಿಗೆ ಉದ್ಯೋಗ ದೊರಯದೇ ಇರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಸಿ.ಸಿ.ಬಿ. ಅಧಿಕಾರಿಗಳು ಕಳೆದ ಅಕ್ಟೋಬರ್‍ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ, 2011ನೇ ಸಾಲಿನಿಂದ ಅಕ್ಟೋಬರ್ 2014ನೇ ಸಾಲಿನವರೆಗೆ, ಒಟ್ಟು 13,497 ಅಭ್ಯರ್ಥಿಗಳನ್ನು ನೋಂದಣಿ ಮಾಡಿಸಿಕೊಂಡು 2,75,58,337 ರೂ. ಹಣವನ್ನು ಪಡೆದು, ಅದರಲ್ಲಿ ಕೇವಲ 54,37,408ರೂ.ಗಳನ್ನು ಮರು ಪಾವತಿ ಸಿದ್ದು, ಕೇವಲ 7 ಜನ ಅಭ್ಯರ್ಥಿಗಳು ಉದ್ಯೋಗ ಪಡೆದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು.

ಅಮಾಯಕ ನಿರುದ್ಯೋಗಿ ವಿದ್ಯಾವಂತರಿಗೆ ಸುಳ್ಳು ಆಶ್ವಾಸನೆ ನೀಡಿ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನೋಂದಣಿಗೆ ಹಣ ಪಡೆದು ಉದ್ಯೋಗವನ್ನು ಕೊಡಿಸದೇ ಸಂದರ್ಶನಕ್ಕೂ ಕೂಡ ವ್ಯವಸ್ಥೆ ಮಾಡದೇ ಮರುಪಾವತಿಸುವ ಹಣದಲ್ಲಿ ಸ್ವಲ್ಪ ಭಾಗವನ್ನು ಮಾತ್ರ ವಿಳಂಬ ನೀತಿ ಅನುಸರಿಸಿ ಪಾವತಿಸುತ್ತಾ ನಂಬಿಕೆ ದ್ರೋಹ ಮತ್ತು ವಂಚನೆ ಮಾಡುತ್ತಿರುವುದು ತಿಳಿದುಬಂದಿದೆ ಎಂದು ಹೇಳಿದ್ದಾರೆ

ನಿರುದ್ಯೋಗಿ ವಿದ್ಯಾವಂತರು ಈ ರೀತಿಯ ನಕಲಿ ಕಂಪನಿಗಳ ಆಸೆ ಆಮಿಷಗಳಿಗೆ ಬಲಿಯಾಗದಂತೆ ಎಚ್ಚರವಹಿಸಲು ಮನವಿ ಮಾಡಿದ್ದಾರೆ.

Write A Comment