ಕನ್ನಡ ವಾರ್ತೆಗಳು

ಎ.ಜೆ.ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಟ್ಟ ನಾಲ್ಕು ಬೆರಳುಗಳ ಯಶಸ್ವಿ ಜೋಡನೆ.

Pinterest LinkedIn Tumblr

AJ_HOSPITL_OPRTION

ಮಂಗಳೂರು ,ಜೂನ್.12 : ಪಡುಬಿದ್ರಿಯಲ್ಲಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕ ಅಪಘಾತಕ್ಕೊಳಗಾಗಿ ಸಂಪೂರ್ಣವಾಗಿ ಸಂದೀಪ್‌ (28 ) ಅವರ ಎಡಗೈಯ ನಾಲ್ಕು ಕೈ ಬೆರಳುಗಳು ಬೇರ್ಪಟ್ಟಿದ್ದವು. ಈ ಬೇರ್ಪಟ್ಟ ನಾಲ್ಕು ಬೆರಳುಗಳನ್ನು ಎ.ಜೆ. ಆಸ್ಪತ್ರೆಯ ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ವೈದ್ಯರು ಅಪರೂಪದ ಮರುಜೋಡಣಾ ಶಸ್ತ್ರಚಿಕಿತ್ಸೆ ಮೂಲಕ ಪುನಃ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ಪತ್ರೆಯ ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಮುಖ್ಯಸ್ಥ ಡಾ| ದಿನೇಶ್‌ ಕದಂರ ಅವರ ನೇತೃತ್ವದಲ್ಲಿ ಡಾ| ಸನತ್‌ ಭಂಡಾರಿ, ಡಾ| ರಾಜೇಶ್‌ ಹಕ್ಕೇರಿ ಮತ್ತು ಅರಿವಳಿಕೆ ತಜ್ಞ ಡಾ| ತ್ರಿವಿಕ್ರಮ್‌ ತಂತ್ರಿ ಅವರ ಸಹಯೋಗದೊಂದಿಗೆ ಆರು ಗಂಟೆಗಳ ಕಾಲ ನಡೆಸಿದ ಮೈಕ್ರೋವ್ಯಾಸ್ಕಾಲರ್‌ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಜೋಡಿಸಲಾಯಿತು.

ಈ ಯಶಸ್ವಿ ಅಂಗಾಂಗ ಮರು ಜೋಡಣೆ ಶಸ್ತ್ರಚಿಕಿತ್ಸೆಯಲ್ಲಿ ಬೇರ್ಪಟ್ಟ ಅಂಗಾಂಗಳ ಮೂಳೆ ರಚನೆ ಸೇರಿದಂತೆ ಸ್ನಾಯು, ನರ, ರಕ್ತನಾಳಗಳು ಮತ್ತು ಚರ್ಮದ ಮರು ರಚನೆ ಅಗತ್ಯವಿರುತ್ತದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಅತೀ ಮುಖ್ಯ ಹಂತವೆಂದರೆ ಬೇರ್ಪಟ್ಟ ಬೆರಳುಗಳಿಗೆ ಮರು ರಕ್ತ ಸಂಚಲನೆ ಸ್ಥಾಪಿಸಲು ಅನೇಕ ಸಣ್ಣ ಸಣ್ಣ ರಕ್ತನಾಳಗಳ ಮರುರೂಪಣೆ ಮಾಡುವುದು. ರಕ್ತನಾಳಗಳ ಮರುರೂಪಣೆ ಅನಂತರ ಅವುಗಳಲ್ಲಿ ರಕ್ತ ಸಂಚಲನೆ ಕಾಯ್ದುಕೊಳ್ಳುವಿಕೆ ಕೂಡ ಅಷ್ಟೇ ಮುಖ್ಯ.

ಸಾರ್ವಜನಿಕರಿಗೆ ಮಾಹಿತಿ:
ಸಾರ್ವಜನಿಕರು ಬೇರ್ಪಟ್ಟ ಅಂಗಾಂಗಗಳನ್ನು ಪಾಲಿಥಿನ್‌ ಚೀಲದಲ್ಲಿ ಹಾಕಿ ಮಂಜುಗಡ್ಡೆ ಹಾಕಿ ಅಥವಾ ಶೀತಲೀಕರಿಸಿದ ನೀರಿನಲ್ಲಿಟ್ಟು ಶೀಘ್ರವಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕು. ಅಂಗಾಂಗಗಳು ನೇರವಾಗಿ ನೀರು ಅಥವಾ ಮಂಜುಗಡ್ಡೆಯ ಸಂಪರ್ಕಕ್ಕೆ ಬರಬಾರದು.

ಎ.ಜೆ. ಆಸ್ಪತ್ರೆಯ ಪ್ಲಾಸ್ಟಿಕ್‌ ಸರ್ಜರಿ ವಿಭಾಗ ಈಗಾಗಲೇ ಕಾಸ್ಮೆಟಿಕ್‌ ರಿಕನ್‌ಸ್ಟ್ರಕ್ಟಿವ್‌ ಮತ್ತು ಮೈಕ್ರೋವ್ಯಾಸ್ಕಾಲರ್‌ ಶಸ್ತ್ರಚಿಕಿತ್ಸೆ ಸೇರಿದಂತೆ 12,000ಕ್ಕೂ ಹೆಚ್ಚು ಪ್ಲಾಸ್ಟಿಕ್‌ ಸರ್ಜರಿ ಚಿಕಿತ್ಸೆಗಳನ್ನು ನಡೆಸಿದೆ ಎಂದು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್‌ ಮಾರ್ಲ ಕೆ. ತಿಳಿಸಿದ್ದಾರೆ.

Write A Comment