ಕನ್ನಡ ವಾರ್ತೆಗಳು

“ಅಶೋಬಾ” ಚಂಡಮಾರುತ ಹಿನ್ನೆಲೆ : ಕರಾವಳಿ ತೀರದಲ್ಲಿ ಭಾರಿ ಮಳೆ : ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಹವಾಮಾನ ಇಲಾಖೆ ಸೂಚನೆ

Pinterest LinkedIn Tumblr

 Mangalore_Havey_Rain_1

ಮಂಗಳೂರು: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದ ಚಂಡಮಾರುತದ ಭೀತಿಯಲ್ಲಿರುವ ಕರ್ನಾಟಕ ಕರಾವಳಿಯಲ್ಲಿ ದಟ್ಟ ಮೋಡ ಕವಿದ ವಾತಾವರಣದೊಂದಿಗೆ ಮಂಗಳವಾರ ಭಾರಿ ಮಳೆಯಾಗಿದೆ.

ಚಂಡಮಾರುತವು ಉತ್ತರ ಮತ್ತು ವಾಯವ್ಯ ದಿಕ್ಕಿನಲ್ಲಿ ಚಲಿಸುತ್ತಿದ್ದು, ಇದರ ಪರಿಣಾಮವಾಗಿ ಮುಂದಿನ 24 ಗಂಟೆಯೂ ಕರಾವಳಿ ತೀರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಗಂಟೆಗೆ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಅದರ ವೇಗ 100-120 ಕಿ.ಮೀ.ಗೂ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Mangalore_Havey_Rain_2 Mangalore_Havey_Rain_5

Mangalore_Havey_Rain_7

ಹವಾಮಾನ ಇಲಾಖೆ ಸೂಚನೆಯಂತೆ, ಜಿಲ್ಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ. ವಿಶೇಷವಾಗಿ ಸಮುದ್ರ ತೀರದಲ್ಲಿ ಮೀನುಗಾರರು, ಪ್ರವಾಸಿಗರು ಸಮುದ್ರಕ್ಕೆ ಇಳಿಯಬಾರದು. ಮಳೆ ನೀರು ಹರಿಯಲು ತೊಂದರೆ ಆಗದಂತೆ ನೋಡಿಕೊಳ್ಳಲು, ಸಾರ್ವಜನಿಕರಿಂದ ಯಾವುದೇ ಕರೆ ಬಂದಲ್ಲಿ ತುರ್ತಾಗಿ ಸ್ಪಂದಿಸಲು ಜಾಗೃತರಾಗಿ ಇರಲು ಮತ್ತು ಸಂಭಾವ್ಯ ನೆರೆಪೀಡಿತ ತಗ್ಗು ಪ್ರದೇಶದಲ್ಲಿ ದೋಣಿ ನಿಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.

“ಅಶೋಬಾ” ಚಂಡಮಾರುತ ಹಿನ್ನೆಲೆಯಲ್ಲಿ ಅರಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಮುಂದಿನ 48 ಗಂಟೆ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಮೀನುಗಾರಿಕೆಗೆ ತೆರಳದಂತೆ ಹಾಗೂ ಈಗಾಗಲೇ ಮೀನುಗಾರಿಕೆಗೆ ತೆರಳಿದವರು ಮೇಲೆ ಬರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಯಾಂತ್ರಿಕ ಬೋಟುಗಳನ್ನು ದಕ್ಕೆಗೆ ತಂದು ನಿಲ್ಲಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಡಿಪ್ರಸಾದ್ ತಿಳಿಸಿದ್ದಾರೆ.

Mangalore_Havey_Rain_3 Mangalore_Havey_Rain_4 Mangalore_Havey_Rain_6 Mangalore_Havey_Rain_8 Mangalore_Havey_Rain_9

ವಿಮಾನ ನಿಲ್ದಾಣದಲ್ಲೂ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ:

ಸಂಭಾವ್ಯ ಚಂಡಮಾರುತ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮೂರು ಗಂಟೆಗೊಮ್ಮೆ ಸ್ಥಳೀಯ ಗಾಳಿ ಮತ್ತು ಮಳೆ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರದ ದಿಲ್ಲಿಯ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಜೆ.ಟಿ.ರಾಧಾಕೃಷ್ಣ ತಿಳಿಸಿದರು.

ವಿಮಾನ ನಿಲ್ದಾಣದ ಹವಾಮಾನ ವಿಭಾಗದ ಮಾಹಿತಿ ಪ್ರಕಾರ ಈ ವರೆಗೆ ಯಾವುದೇ ಹವಾಮಾನ ವೈಪರೀತ್ಯ ಕಂಡುಬಂದಿಲ್ಲ. ಸೋಮವಾರ ಸಂಜೆ ಮಳೆಯಿಂದಾಗಿ ದುಬಾಯಿ ವಿಮಾನ ಇಳಿಯಲು ಸಾಧ್ಯವಾಗದೇ, ನೇರ ಕೇರಳಕ್ಕೆ ತೆರಳಿ, ರಾತ್ರಿ 8.30ರ ವೇಳೆಗೆ ಮರಳಿ ಮಂಗಳೂರಿಗೆ ಆಗಮಿಸಿ ಇಳಿದಿದೆ ಎಂದು ಅವರು ಹೇಳಿದರು.

ರಸ್ತೆಗುರುಳಿದ ಮರ :

ಗಾಳಿ ಮಳೆಗೆ ಮಂಗಳೂರಿನ ಮಣ್ಣಗುಡ್ಡ ಬಳಿ ಮರವೊಂದು ರಸ್ತೆಗೆ ಬಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು. ಬೆಳಗ್ಗೆಯೇ ಮರವನ್ನು ಕಡಿದು ರಸ್ತೆಯಿಂದ ತೆರವು ಮಾಡಲಾಯಿತು. ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದು, ಕೆಲವು ಕಡೆ ನೀರು ಹರಿಯಲು ಸಮಸ್ಯೆ ಆಗಿರುವ ಬಗ್ಗೆ ಪಾಲಿಕೆಗೆ ದೂರು ಬಂದಿದ್ದು, ಸ್ಥಳಕ್ಕೆ ತೆರಳಿ ಸಮಸ್ಯೆ ನಿವಾರಿಸಲಾಗಿದೆ.

Write A Comment