ಕನ್ನಡ ವಾರ್ತೆಗಳು

ಬೀಚ್‌ ನ ಪಾರ್ಕಿಂಗ್ ಸ್ಥಳದಿಂದ 11.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳ

Pinterest LinkedIn Tumblr

Mumbai- Robbery

ಮಂಗಳೂರು,ಜೂನ್.09: ಪಣಂಬೂರು ಬೀಚ್ ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನಿಂದ ಸುಮಾರು 11.7 ಲಕ್ಷ ರೂ ಮೌಲ್ಯದ 520 ಗ್ರಾ ಚಿನ್ನಾಭರಣ ಕಳವು ಮಾಡಿದ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಪಣಂಬೂರ್ ಬೀಚ್‌ ಪ್ರವಾಸಕ್ಕಾಗಿ ಬಂದಿದ್ದ ಬೆಂಗಳೂರು ಕನಕಪುರ ಹಾರೋಹಳ್ಳಿಯ ಲಕ್ಷ್ಮೀ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ವಿವರ : ಪ್ರಸಿದ್ಧ ದೇವಳಗಳಿಗೆ ಭೇಟಿ ನೀಡಿ ಕ್ವಾಲಿಸ್ ಕಾರಿನಲ್ಲಿ ಬೀಚ್‌ಗೆ ಬಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೀಚ್‌ನ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ಬೀಚ್‌ಗೆ ತೆರೆಳಿದ್ದರು. ಸಂಜೆ 5ರ ಸುಮಾರಿಗೆ ಅವರು ಕಾರಿನ ಬಳಿಗೆ ಮರಳಿದಾಗ ಬೀಗ ಹಾಕಲಾಗಿದ್ದ ಕಾರಿನ ಗಾಜು ಒಡೆಯಲಾಗಿತ್ತು. ಕಾರಿನಲ್ಲಿದ ನೆಕ್ಲೇಸ್, ಬಳೆಗಳು ಸೇರಿ ಸುಮಾರು 520ಗ್ರಾಂ ಚಿನ್ನಾಭರಣ ಕಳವು ನಡೆಸಲಾಗಿತ್ತು. ಈ ವೇಳೆಗೆ ಇಲ್ಲಿ ಮಳೆಯಾಗುತ್ತಿದ್ದು ಇದೇ ಸಂದರ್ಭ ಕಳವು ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಲಕ್ಷ್ಮೀ ಅವರು ಬೆಂಗಳೂರಿನಲ್ಲಿ ಗಹ ರಕ್ಷಕ ದಳದ ಉದ್ಯೋಗಿಯಾಗಿದ್ದಾರೆ.

ಸಿಸಿ ಕೆಮರಾಕ್ಕೆ ಫಲಕ ಅಡ್ಡ: ಈ ಬಗ್ಗೆ ಸೋಮವಾರ ಬೆಳಗ್ಗೆ ಸ್ಥಳಕ್ಕೆ ಪಣಂಬೂರು ಎಸ್‌ಐ ಸತೀಶ್ ಮತ್ತು ಸಿಬಂದಿಗೆ ತನಿಖೆ ನಡೆಸಿದ್ದು ಪಾರ್ಕಿಂಗ್ ಸ್ಥಳದ ಬಳಿಯೇ ಪೊಲೀಸ್ ಇಲಾಖೆಯ ಸಿಸಿ ಕೆಮೆರಾ ಇದ್ದರೂ ಅದಕ್ಕೆ ಅಡ್ಡಲಾಗಿ ಹೋರ್ಡಿಂಗ್ ಹಾಕಲಾಗಿರುವುದು ಕಂಡು ಬಂದಿದೆ. ಅಲ್ಲದೆ ಪಾರ್ಕಿಂಗ್ ಸ್ಥಳದಲ್ಲಿ ಪೊದೆಗಳು ಬೆಳೆದಿರುವುದು ಕಳ್ಳರಿಗೆ ವರದಾನವಾಯಿತು. ಪಾರ್ಕಿಂಗ್ ಸ್ಥಳದಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ ಫಲಕ ಹಾಕಬೇಕು. ಅಲ್ಲದೆ ಕಳವು ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸರು ಸೂಚಿಸಿದರು.

ಮೂರನೇ ಕಳವು: ಕಳೆದ ಒಂದು ತಿಂಗಳಿನಲ್ಲಿ ಬೀಚ್‌ನಲ್ಲಿ ಪಾಕಿಂಗ್ ಸ್ಥಳದಲ್ಲಿ ಕಾರಿನಿಂದ ನಡೆದ ಮೂರನೇ ಕಳವು ಪ್ರಕರಣ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದು ಇತರ ಎರಡು ಪ್ರಕರಣಗಲ್ಲಿ ಸಂತ್ರಸ್ತರು ಲಿಖಿತ ದೂರು ನೀಡದ ಕಾರಣ ಪ್ರಕರಣ ದಾಖಲಾಗಿಲ್ಲ ಎಂದರು. ಬೀಚ್‌ನಿಂದಲೂ ಕಳವು ಬೀಚ್ ಬದಿಯಿಂದ ಪ್ರವಾಸಿಗರ ಚಿನ್ನಾಭರಣ, ನಗದು ಕಳವು ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದರು.

Write A Comment