ಕನ್ನಡ ವಾರ್ತೆಗಳು

ರಾಷ್ಟ್ರೀಯ ವ್ಯಾಜ್ಯ ನೀತಿಯ ಬಗ್ಗೆ ಸಂಸತ್ ಅಧಿವೇಶನದಲ್ಲಿ ಮಂಡನೆ : ಸಚಿವ ಡಿ.ವಿ. ಸದಾನಂದ ಗೌಡ

Pinterest LinkedIn Tumblr

ExCm_sadanada_gowda

ಮಂಗಳೂರು,ಜೂನ್.09:  ಸರಕಾರಿ ಇಲಾಖೆಗಳ ನಡುವಿನ ವಿವಾದಗಳ ಪರಿಹಾರಕ್ಕಾಗಿ ಕೇಂದ್ರ ಸರಕಾರ ರಾಷ್ಟ್ರೀಯ ವ್ಯಾಜ್ಯ ನೀತಿಯನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸಿ, ಜಾರಿಗೆ ತರಲಾಗುವುದು ಎಂದು ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಸರಕಾರಿ ಇಲಾಖೆಗಳ ಶೇ. 50ರಷ್ಟು ವ್ಯಾಜ್ಯಗಳು ಕೋರ್ಟ್‌ನಲ್ಲಿ ಬಾಕಿ ಇವೆ. ಎರಡು ಇಲಾಖೆಗಳ ವಿವಾದ ಏರ್ಪಟ್ಟರೆ, ಕೋರ್ಟ್‌ಗೆ ಹೋಗಬಾರದು. ಬದಲಿಗೆ ಕಾರ್ಯದರ್ಶಿಗಳ ಮಟ್ಟದಲ್ಲಿ ಅಥವಾ ಸಚಿವಾಲಯದಿಂದ, ಅಲ್ಲೂ ಆಗದಿದ್ದರೆ ಸಂಪುಟ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲು ವ್ಯಾಜ್ಯ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಮಿಜಾರು ಮೈಟ್ ಕಾಲೇಜಿನಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ರೈತ ವಿರೋಧಿಯಲ್ಲ: ರೈತರ ಭೂಮಿ ಬಲವಂತದಿಂದ ಅಥವಾ ಏಕಾಏಕಿ ಸ್ವಾದೀನ ಮಾಡಲು ಸಾಧ್ಯವಿಲ್ಲ. ಭೂಮಿಗೆ ನಾಲ್ಕು ಪಟ್ಟು ದರ, ಸ್ವಾದೀನದ ಬಳಿಕ ಐದು ವರ್ಷ ಬಳಕೆ ಮಾಡದಿದ್ದರೆ ಮರಳಿಸಬೇಕು ಎಂಬ ಹಲವು ಶರತ್ತುಗಳಿವೆ. ಆದರೆ, ರಾಷ್ಟ್ರೀಯ ಹಿತಾಸಕ್ತಿಯ ಯೋಜನೆಗಳನ್ನು ರೂಪಿಸುವಾಗ ಸಾರ್ವಜನಿಕ ಪರಿಣಾಮ ಮೌಲ್ಯಮಾಪನ ಮಾಡಲು ಮತ್ತು ಭೂಮಾಲೀಕನ ವಿರೋಧ ಪರಿಗಣಿಸಲು ಸಾಧ್ಯವಿಲ್ಲ. ಹಾಗಂತ ಮಸೂದೆ ರೈತ ವಿರೋಧಿಯಲ್ಲ ಎಂದು ಅವರು ಹೇಳಿದರು.

ಉದ್ಯಮ ಸ್ಥಾಪನೆ, ಹೂಡಿಕೆ ನಿಟ್ಟಿನಲ್ಲಿ ಹಣಕಾಸು ಶಿಸ್ತು ಮುಖ್ಯ. ಹಿಂದೆ ಖಾಸಗಿ ಉದ್ಯಮಿಗಳು ಹೂಡಿಕೆಗೆ ಮುಂದೆ ಬರುತ್ತಿರಲಿಲ್ಲ. ಈಗ ಇಡೀ ದೇಶಕ್ಕೆ ಸಾಮಾನ್ಯ ಏಕ ಪ್ರಕಾರದ ತೆರಿಗೆ ಪದ್ಧತಿ ಜಾರಿಗೆ ತರುತ್ತಿದ್ದೇವೆ. ಕಪ್ಪು ಹಣ ವಿರುದ್ಧ ಬೇನಾಮಿ ಮಸೂದೆ ಮಂಡಿಸಿದ್ದೇವೆ. ವಿದೇಶದಲ್ಲಿ ಹಣ ಹೂಡುವವರಿಗೆ ಶೇ.30 ತೆರಿಗೆ, ಶೇ. 30 ಹೆಚ್ಚುವರಿ ದಂಡ ವಿಧಿಸಲಾಗುತ್ತಿದೆ. ಹೊಸ ಕಾರ್ಮಿಕ ಕಾನೂನು ರೂಪಿಸಲು ಪ್ರಧಾನಿ ನೇಮಿಸಿದ ಸಚಿವರು ಕೆಲಸ ಮಾಡುತ್ತಿದ್ದಾರೆ ಎಂದರು.

ಮೋದಿ ಸರಕಾರ ಅಧಿಕಾರ ಬಂದಂದಿನಿಂದ ಆಹಾರದಲ್ಲಿ ಕಲಬೆರಕೆ, ವಿಷಾಹಾರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ತಂಬಾಕು ನಿಷೇಧ ಪ್ರಕರಣ ಸುಪ್ರಿಂ ಕೋರ್ಟ್‌ನಲ್ಲಿದೆ. ಮ್ಯಾಗಿಯನ್ನು ವಿವಿಧ ರಾಜ್ಯಗಳು ನಿಷೇಧಿಸಿದ್ದು, ಕೇಂದ್ರ ಯಾವುದೇ ನಿಷೇಧ ಕ್ರಮ ಕೈಗೊಂಡಿಲ್ಲ. ಅದರಲ್ಲಿ ಆರೋಗ್ಯಕ್ಕೆ ಹಾನಿಕರ ಅಂಶ ಇದೆ ಎಂದು ಪ್ರಯೋಗಾಲಯದಲ್ಲಿ ಸಾಬೀತಾದರೆ ಮಾತ್ರ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿದೆ. ಆ ವಿಷಯದಲ್ಲಿ ರಾಜಿ ಇಲ್ಲ ಎಂದು ಡಿವಿ ಹೇಳಿದರು.

ಅಡಕೆ ನಿಷೇಧದ ಯಾವುದೇ ಪ್ರಸ್ತಾಪ ಸರಕಾರದ ಮುಂದೆ ಇಲ್ಲ. ಹಿಂದಿನ ಯುಪಿಎ ಸರಕಾರ ಕೂಡಾ ಅಡಕೆ ನಿಷೇಧಕ್ಕೆ ಸುಪ್ರೀಂ ಕೋರ್ಟ್‌ಗೆ ಯಾವುದೇ ಅಫಿದವಿತ್ ಸಲ್ಲಿಸಿಲ್ಲ. ಅಡಕೆ ಹಾನಿಕರ ಅಲ್ಲ. ಅದರ ಜತೆ ನಿಕೋಟಿನ್, ತಂಬಾಕು ಸೇರಿಸಿದರೆ ಮಾತ್ರ ಆರೋಗ್ಯಕ್ಕೆ ಹಾನಿಕರ ಎಂದು ಅವರು ಹೇಳಿದರು.

ಕಂಬಳ ನಿಷೇಧ ಸರಿಯಲ್ಲ: ಕಂಬಳ ನಿಷೇಧ ಕುರಿತ ಪ್ರಸ್ತಾಪ ಹೈಕೋರ್ಟ್‌ನಲ್ಲಿದೆ. ಕಂಬಳ ಹೇಗೆ ನಡೆಸಬೇಕು ಎಂದು ಅಧಿಕಾರಿಗಳು, ಪ್ರಾಣಿ ದಯಾ ಸಂಘ ನಿಯಮ ರೂಪಿಸಿದೆ. ಕುದುರೆಯಂತೆ ಓಡುವ ದೇಹ ರಚನೆ ಕೋಣಕ್ಕಿಲ್ಲ ಎಂಬುದು ಅವರವಾದ. ನಮ್ಮಲ್ಲಿ ಹಿಂದಿನ ಕಾಲದಿಂದ ಕೋಣ ಓಡಿಸುವ ಕ್ರಮವಿದೆ. ಹಾಗಾಗಿ ಕಂಬಳ ನಿಷೇಧ ಸರಿಯಲ್ಲ. ಕೋಣಗಳನ್ನು ಮುದ್ದಿನಿಂದ ಸಾಕುವ, ಅಹಾರ ನೀಡುವ ಕ್ರಮ ನೋಡುವಾಗ ನಾವೂ ಕಂಬಳದ ಕೋಣಗಳಾಗಿ ಹುಟ್ಟಬೇಕಿತ್ತು ಎಂದು ಅನಿಸುತ್ತಿದೆ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.

Write A Comment