ಮಂಗಳೂರು, ಜೂ.09: ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಮಳೆ ಚುರುಕು ಗೊಂಡಿದೆ. ರಾಜ್ಯಕ್ಕೆ ಜೂ.5ರಂದು ಮುಂಗಾರು ಮಳೆ ಮಾರುತ ಪ್ರವೇಶಿಸಿದ್ದು, ಮುಂದಿನ ಎರಡು ದಿನಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಮುಂಗಾರು ಚುರುಕುಗೊಳ್ಳಲಿದೆ ಎಂದು ರಾಜ್ಯ ಹವಾಮಾನ ಇಲಾ ಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ವರ್ಷ ಜೂನ್ನಲ್ಲಿ ಕೇರಳ ರಾಜ್ಯದ ಮೂಲಕ ಪ್ರವೇಶ ಮಾಡುವ ಮುಂಗಾರು ಮಾರುತ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ನಡುವಿನ ಪ್ರದೇಶದಲ್ಲಿ ವಾಯುಭಾರ ಕುಸಿತವುಂಟಾಗಿ ಮಳೆಯಾಗುವುದು ಸಾಮಾನ್ಯ. ಈ ಬಾರಿಯೂ ಅದೇ ರೀತಿ ಮಳೆಯಾಗಿದೆ. ಜೂನ್ನಿಂದ ಸೆಪ್ಟಂಬರ್ವರೆಗೆ ಮುಂಗಾರು ಮಳೆಯೊಂದಿಗೆ ರಾಜ್ಯದಲ್ಲಿ ಶೇ.70ರಷ್ಟು ಮಳೆಯಾಗುವುದು ವಾಡಿಕೆ. ಈ ಬಾರಿಯೂ ಅದೇ ರೀತಿ ವಾಡಿಕೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆಯಾಗಿದೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲೂ ಮಧ್ಯಾಹ್ನದ ಬಳಿಕ ಹೆಚ್ಚಿನ ಕಡೆಗಳಲ್ಲಿ ಮಳೆ ಸುರಿದಿರುವುದು ವರದಿಯಾಗಿದೆ. ಬೆಳಗ್ಗೆಯಿಂದಲೇ ಉಡುಪಿ ಜಿಲ್ಲಾದ್ಯಂತ ಮೋಡದ ಕವಿದ ವಾತಾವರಣವಿತ್ತು.
ಇಂದು ಮಂಗಳೂರು ಆಸುಪಾಸಿನಲ್ಲಿ 26.6 ಮಿ.ಮೀ., ಮೂಡುಬಿದಿರೆಯಲ್ಲಿ 26.2 ಮಿ.ಮೀ., ಬೆಳ್ತಗಂಡಿಯಲ್ಲಿ 12.2 ಮಿ.ಮೀ., ಬಂಟ್ವಾಳದಲ್ಲಿ 12.4 ಮಿ.ಮೀ. ಮಳೆಯಾಗಿದೆ. ಆದರೆ ಸುಳ್ಯ, ಪುತ್ತೂರು ಮೊದಲಾದೆಡೆಗಳಲ್ಲಿ ಮಳೆ ಪ್ರಮಾಣ ಕಡಿಮೆ ಇತ್ತು.ಸಂಜೆಯ ವೇಳೆ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ತುಂತುರು ಮಳೆಯೊಂದಿಗೆ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ತಾಪಮಾನದಲ್ಲೂ ಇಳಿಕೆಯಾಗಿದೆ.
