ಕನ್ನಡ ವಾರ್ತೆಗಳು

ನಕ್ಸಲ್‌ಪೀಡಿತ ಪ್ರದೇಶಗಳಿಗೆ ಹೊಸ ಪೊಲೀಸ್ ಠಾಣೆ: ಎಸ್ಪಿ ಡಾ. ಶರಣಪ್ಪ.ಎಸ್.ಡಿ

Pinterest LinkedIn Tumblr

Sc_st_meet_4

ಮಂಗಳೂರು, ಜೂ.08: ದೇಶದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 250 ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಬಗ್ಗೆ ಕೇಂದ್ರ ಸರಕಾರದ ಪ್ರಸ್ತಾವಿತ ಯೋಜನೆಯ ಅನ್ವಯ ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ಹೊಸ ಪೊಲೀಸ್ ಠಾಣೆ ಸ್ಥಾಪನೆಗೆ ಪರಿಶೀಲನೆ ನಡೆಸಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ.ಹೇಳಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲ್ ಸಕ್ರಿಯ ಪ್ರದೇಶಗಳಾದ ಕುತ್ಲೂರು, ಸುಲ್ಕೇರಿ ಸುತ್ತಮುತ್ತ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಅಳದಂಗಡಿಯಲ್ಲಿ ಪೊಲೀಸ್ ಠಾಣೆ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಈ ಪ್ರಸ್ತಾವನೆ ಪ್ರಾಥಮಿಕ ಹಂತದಲ್ಲಿದೆ ಎಂದರು. ಬೆಳ್ತಂಗಡಿ ಗ್ರಾಮಾಂತರ ಅಂದರೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಡಿವಾಳ ಚಡವು ಪ್ರದೇಶದಲ್ಲಿ ಜಾಗ ಪರಿಶೀಲನೆ ನಡೆಸಿ ಸರ್ವೇ ಕಾರ್ಯ ನೆರವೇರಿಸಲಾಗಿದೆ. ಕನಿಷ್ಠ ಮೂರು ವರ್ಷಗಳೊ ಳಗೆ ಕಟ್ಟಡ ನಿರ್ಮಿಸಲಾಗುವುದು ಎಂದು ಎಸ್ಪಿ ತಿಳಿಸಿದರು.ನೂತನ ಕಟ್ಟಡ ನಿರ್ಮಾಣದವರೆಗೆ ಖಾಸಗಿ ಅಥವಾ ಸರಕಾರಿ ಕಟ್ಟಡದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಠಾಣೆ ಪ್ರಾರಂಭಿಸುವ ಉದ್ದೇಶವಿದ್ದರೂ ಇದುವರೆಗೆ ಸೂಕ್ತ ಕಟ್ಟಡ ಸಿಕ್ಕಿಲ್ಲ ಎಂದು ಎಸ್ಪಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2005ರಲ್ಲಿ ಬೆಳ್ಳಾರೆ ಮತ್ತು ನೆಲ್ಯಾಡಿಯಲ್ಲಿ ಪೊಲೀಸ್ ಠಾಣೆ ಸ್ಥಾಪ ನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ರಾಷ್ಟ್ರೀಯ ಪೊಲೀಸ್ ಕಮಿಷನ್‌ನ ನಿಯಮಾವಳಿಗೆ ಹೊಂದಿಕೊಳ್ಳದ ಕಾರಣ ಈ ಪ್ರಸ್ತಾಪ ತಿರಸ್ಕರಿಸಲ್ಪಟ್ಟಿದೆ ಎಂದು ಎಸ್ಪಿ ಹೇಳಿದರು.ಬೆಳ್ಳಾರೆ ಹೊರ ಠಾಣೆ ಸ್ಥಾಪನೆಗೆ ಬೆಳ್ಳಾರೆಯ 5 ಗ್ರಾಮ, ಕಡಬ, ಪುತ್ತೂರು ಗ್ರಾಮಾಂತರ, ಸುಳ್ಯ, ಸುಬ್ರಹ್ಮಣ್ಯ ಸಹಿತ 20 ಗ್ರಾಮಗಳನ್ನು ಸೇರಿಸಿ 2013ರಲ್ಲಿ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದೀಗ ಪರಿಶೀಲನೆಯಲ್ಲಿದೆ ಎಂದು ಎಸ್ಪಿ ತಿಳಿಸಿದರು.

ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇದೆ. 323 ಹೆಚ್ಚುವರಿ ಸಿಬ್ಬಂದಿಗಾಗಿ ಬೇಡಿಕೆ ಸಲ್ಲಿಸಲಾಗಿದೆ. ಅಂತಾರಾಷ್ಟ್ರೀಯ ಸಮೀಕ್ಷೆ ಪ್ರಕಾರ 1 ಲಕ್ಷ ಮಂದಿಗೆ 250 ಪೊಲೀಸ್ ಸಿಬ್ಬಂದಿಯಿರಬೇಕು. ಆದರೆ ದ.ಕ. ಜಿಲ್ಲೆಯಲ್ಲಿ ಇದರನ್ವಯ ಕೇವಲ 52 ಸಿಬ್ಬಂದಿ ಮಾತ್ರ ಇದ್ದಾರೆ. ಜಿಲ್ಲಾ ವ್ಯಾಪ್ತಿಗೆ 571 ಪೊಲೀಸ್ ಹುದ್ದೆ ಮಂಜೂರಾಗಿದ್ದು, 90 ಹುದ್ದೆಗಳು ಖಾಲಿ ಇವೆ. ಶೀಘ್ರದಲ್ಲೇ 50 ಹುದ್ದೆ ಗಳು ಭರ್ತಿಯಾಗಲಿವೆ ಎಂದು ಎಸ್ಪಿ ಡಾ.ಶರಣಪ್ಪ ವಿವರಿಸಿದರು.

Write A Comment