ಕನ್ನಡ ವಾರ್ತೆಗಳು

ಅಧಿಕಾರಿಗಳ ನಿರ್ಲಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ತಪ್ಪಿದೆ : ದ.ಕ. ಜಿಲ್ಲಾ ಮಾಸಿಕ ಎಸ್ಸಿ-ಎಸ್ಟಿ ಸಭೆಯಲ್ಲಿ ಎಸ್ಪಿ ಆರೋಪ

Pinterest LinkedIn Tumblr

Sc_st_meet_1

ಮಂಗಳೂರು, ಜೂ.8: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ದಲಿತರು ಎದುರಿಸುವ ಸಮಸ್ಯೆಗಳನ್ನು ಮಾಸಿಕ ಸಭೆಯಲ್ಲಿ ದೂರವಾಣಿ ಮೂಲಕ ಆಲಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶರಣಪ್ಪ ಎಸ್.ಡಿ. ಹೇಳಿದ್ದಾರೆ.ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ರವಿವಾರ ನಡೆದ ದಲಿತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡ ನಾರಾಯಣ ಪುಂಚಮೆ, ಜಿಲ್ಲೆಯ ದೂರದವರಿಗೆ ಕುಂದುಕೊರತೆ ಸಭೆಯಲ್ಲಿ ನೇರವಾಗಿ ಭಾಗವಹಿಸಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ದೂರವಾಣಿ ಮೂಲಕ ಅಹವಾಲು ಆಲಿಸುವ ವ್ಯವಸ್ಥೆಯನ್ನು ಪುನರರಾಂಭಿಸುವಂತೆ ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ಪಿ ಶರಣಪ್ಪ, ದೂರದ ಊರಿನಲ್ಲಿ ನೆಲೆಸಿರುವವರು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದು ಸಹಾಯಕವಾಗಬಹುದು ಎಂದರು.

Sc_st_meet_2 Sc_st_meet_4

ಕಡ್ಡಾಯ ವೀಡಿಯೊ ಚಿತ್ರೀಕರಣ:
ದಲಿತ ಮುಖಂಡ ಮುಖೇಶ್ ಮಾತನಾಡಿ, ಎರಡು ತಿಂಗಳ ಹಿಂದಿನ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನಗೆ ಹಲ್ಲೆ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಯುವಾಗ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಮುಂದಿನ ಸಭೆಯಿಂದ ಕಡ್ಡಾಯವಾಗಿ ವೀಡಿಯೊಗ್ರಫಿ ನಡೆಸಲಾಗುವುದು ಎಂದು ಭರವಸೆ ನೀಡಿದರು

ಅಧಿಕಾರಿಗಳ ನಿರ್ಲಕ್ಷ ಕಾರಣ :
ಅಧಿಕಾರಿಗಳ ನಿರ್ಲಕ್ಷ ಕಾರಣ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ತನ್ನ ಪತ್ನಿ ವಂಚಿತರಾಗಿದ್ದಾರೆ ಎಂದು ಅನಂತ ಮುಂಡಾಜೆ ಎಂಬವರು ದೂರಿದರು.

Sc_st_meet_3

ತನ್ನ ಪತ್ನಿ ಎಸ್‌ಸಿ ಮೀಸಲು ಅಭ್ಯರ್ಥಿಯಾಗಿ ಸ್ಪರ್ಧೆಗೆ ಆಕಾಂಕ್ಷಿಯಾಗಿದ್ದು, ಪ್ರಮಾಣ ಪತ್ರಕ್ಕಾಗಿ ಬೆಳ್ತಂಗಡಿ ತಹಶೀಲ್ದಾರ್ ಬಳಿ ತೆರಳಿದಾಗ ಸುತ್ತೋಲೆ ಪ್ರಕಾರ ಆಕೆ ತನ್ನ ತಾಯಿ ಮನೆಯ ಪ್ರದೇಶದ ತಹಶೀಲ್ದಾರ್‌ರಿಂದ ಪ್ರಮಾಣ ಪತ್ರ ಪಡೆಯಬೇಕು ಎಂದು ತಿಳಿಸಿದ್ದರು. ಅದರಂತೆ ಚಿಕ್ಕಮಗಳೂರಿಗೆ ತೆರಳಿದಾಗ ಅಲ್ಲಿನ ತಹಶೀಲ್ದಾರ್ ಪ್ರಮಾಣ ಪತ್ರ ನೀಡಲು ನಿರಾಕರಿಸಿದರು. ಸುತ್ತೋಲೆ ಬಗ್ಗೆ ತಿಳಿಸಿದರೂ ಅಲ್ಲಿನ ಯಾವ ಅಧಿಕಾರಿ ಬಳಿಯೂ ಸುತ್ತೋಲೆ ಪ್ರತಿ ಇರಲಿಲ್ಲ. ಬೆಳ್ತಂಗಡಿ ತಹಶೀಲ್ದಾರರಿಂದ ಸುತ್ತೋಲೆಯನ್ನು ಫ್ಯಾಕ್ಸ್ ಮೂಲಕ ತರಿಸಿ ನೀಡಿದರೂ ಅಲ್ಲಿನ ತಹಶೀಲ್ದಾರ್ ಪ್ರಮಾಣ ಪತ್ರ ನೀಡದೆ ‘ಸಾಧ್ಯವಿಲ್ಲ’ ಎಂಬುದಾಗಿ ಹಿಂಬರಹ ನೀಡಿದರು ಎಂದ ಅನಂತ ಮುಂಡಾಜೆ, ಎರಡು ಕಡೆಯೂ ಪ್ರಮಾಣ ಪತ್ರ ನೀಡದ ಕಾರಣ ತನ್ನ ಪತ್ನಿಗೆ ಸ್ಪರ್ಧಿಸಲು ಸಾಧ್ಯವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಈ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಬಹುದು ಅಥವಾ ದೂರಿನ ಪ್ರತಿ ನೀಡಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಎಸ್ಪಿ ಡಾ.ಶರಣಪ್ಪ ತಿಳಿಸಿದರು.

Write A Comment