ಕನ್ನಡ ವಾರ್ತೆಗಳು

ಉರುಳಿಗೆ ಬಿದ್ದ ಚಿರತೆಯ ರಕ್ಷಣೆ : ಪಿಲಿಕುಳ ನಿಸರ್ಗಧಾಮಕ್ಕೆ ಹೊಸ ಅತಿಥಿಯ ಸೇರ್ಪಡೆ

Pinterest LinkedIn Tumblr

Kinnigoli_Leopard

ಮುಲ್ಕಿ, ಜೂ.8: ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿತ್ತಕುರ್ಬಿಲ್ ಎಂಬಲ್ಲಿನ ಶಾರದಾ ಎಂಬವರಿಗೆ ಸೇರಿದ ಗದ್ದೆ ಮತ್ತು ಗುಡ್ಡೆಯ ನಡುವಿನ ತೋಡಿನಲ್ಲಿ ಕಾಡುಹಂದಿಗೆಂದು ಇಟ್ಟಿದ್ದ ಉರುಳಿಗೆ ಆಹಾರ ಅರಸಿ ಬಂದ ಸುಮಾರು ಎರಡು ವರ್ಷದ ಹೆಣ್ಣು ಚಿರತೆಯೊಂದು ಸಿಲುಕಿದ್ದು, ಅದನ್ನು ಅರಣ್ಯಾಧಿಕಾರಿಗಳು ರಕ್ಷಿಸಿ ಪಿಲಿಕುಳ ನಿಸರ್ಗಧಾಮಕ್ಕೆ ರವಾನಿಸಲಾದ ಘಟನೆ ರವಿವಾರ ನಡೆದಿದೆ.

ಶಾರದಾ ಅವರ ಮನೆಯವರು ಶನಿವಾರ ರಾತ್ರಿ ಶುಭ ಕಾರ್ಯಕ್ರಮವೊಂದಕ್ಕೆ ತೆರಳಿದ್ದು, ರವಿವಾರ ಬೆಳಗ್ಗೆ ತಮ್ಮ ಮನೆಗೆ ಹಿಂದಿರುಗಿದ್ದರು. ಈ ಸಂದರ್ಭದಲ್ಲಿ ನಾಯಿ ಬೊಗಳುತ್ತಿರುವುದು ಹಾಗೂ ಪಕ್ಕದಲ್ಲೇ ಚಿರತೆ ಘರ್ಜಿಸುತ್ತಿದ್ದ ಸದ್ದು ಕೇಳಿಬಂದಿದೆ. ಇದರಿಂದ ಜಾಗೃತರಾದ ಅವರು ಗದ್ದೆ ಬಳಿಗೆ ಹೋಗಿ ಗಮನಿಸಿದಾಗ ಹಂದಿಗೆ ಇಟ್ಟಿದ್ದ ಉರುಳಿಗೆ ಚಿರತೆ ಬಿದ್ದು ಒದ್ದಾಡುತ್ತಿದ್ದ ದೃಶ್ಯ ಕಂಡುಬಂದಿದೆ.

ಘಟನೆಯ ಬಗ್ಗೆ ಸ್ಥಳೀಯರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಕಿನ್ನಿಗೋಳಿ ವಲಯದ ಅರಣ್ಯಾಧಿಕಾರಿ ಪರಮೇಶ್ವರ್ ಹಾಗೂ ಸಿಬ್ಬಂದಿ ಮೂಡುಬಿದಿರೆಯ ವಲಯ ಅರಣ್ಯಾಧಿಕಾರಿ ಜೆ.ಡಿ. ದಿನೇಶ್ ಅವರಿಗೆ ಮಾಹಿತಿ ನೀಡಿ ಮಂಗಳೂರಿನ ಪಿಲಿಕುಳದ ಅರಿವಳಿಕೆ ತಜ್ಞರು ಹಾಗೂ ವೈದ್ಯಾಧಿಕಾರಿಗಳನ್ನು ಕರೆಸಿ ಕಾರ್ಯಾಚರಣೆ ಆರಂಭಿಸಿದರು.

ಅರಣ್ಯಾಧಿಕಾರಿಗಳು ಹಾಗೂ ಅರಿವಳಿಕೆ ತಜ್ಞರು ಸತತ ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಚಿರತೆಗೆ ಅರಿವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಪ್ರಜ್ಞೆ ತಪ್ಪಿಸಿ ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಸುರಕ್ಷಿತವಾಗಿ ಬೋನಿಗೆ ಹಾಕಲಾಯಿತು. ಬಳಿಕ ಪಿಲಿಕುಳದ ಪಶು ಸಂಗೋಪನಾ ಇಲಾಖಾಧಿಕಾರಿ ಡಾ. ಜೆರಾಲ್ಡ್ ವಿಕ್ರಮ್ ಲೋಬೊ, ಅನಿಮಲ್ ಕೇರ್ ಟೇಕರ್ ದಿನೇಶ್ ಕುಮಾರ್ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ರವಾನಿಸಲಾಯಿತು.

ಶಾರದಾ, ಮಿತ್ತಕುಂರ್ಬಿಲ್ ಚಿರತೆಯ ಹಾವಳಿ ಇರುವ ಬಗ್ಗೆ ಮೂಡುಬಿದಿರೆ ವಲಯ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 200ಕ್ಕೂ ಅಧಿಕ ದೂರುಗಳು ದಾಖಲಾಗಿದ್ದು, ಈವರೆಗೂ 7 ಕಡೆಗಳಲ್ಲಿ ಚಿರತೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ.

ಚಿರತೆ ಉರುಳಿಗೆ ಬಿದ್ದಿರುವ ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಕೆಲವೊಂದು ಸ್ಥಳೀಯರು, ಚಿರತೆಯ ಹಲ್ಲು, ಘರ್ಜನೆ, ಗಾತ್ರ, ವೇಗ, ಅದು ಬೇಟೆಯಾಡುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರೆ, ಇನ್ನು ಕೆಲವರು, ತಮ್ಮ ಮನೆಗಳ ನಾಯಿ, ಬೆಕ್ಕು, ಕೋಳಿಗಳನ್ನು ತಿಂದುಹಾಕಿರುವುದಲ್ಲದೆ, ರಾತ್ರಿ ಪೂರ್ತಿ ಘರ್ಜಿಸುತ್ತಾ ನಿದ್ರಿಸಲೂ ಬಿಡುತ್ತಿರಲಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದರು.

ಹಲವು ತಿಂಗಳುಗಳಿಂದಲೂ ಈ ಭಾಗದಲ್ಲಿ ಚಿರತೆ ಇರುವ ಬಗ್ಗೆ ಗುಮಾನಿ ಇತ್ತು. ಅಲ್ಲದೆ, ಈ ಪ್ರದೇಶದ ಹಲವು ಮನೆಗಳ ಸಾಕು ನಾಯಿ, ಬೆಕ್ಕು, ಕೋಳಿಗಳು ಕಾಣೆಯಾಗುತ್ತಿರುವ ಬಗ್ಗೆಯೂ ಮಾತುಗಳು ಬರುತ್ತಿತ್ತು.

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖಾಧಿಕಾರಿ ಪರಮೇಶ್ವರ್, ಮಂಜುನಾಥ ಗಾಣಿಗ, ಶಿವಶಂಕರ, ಶೇಷಪ್ಪ ಹಾಗೂ ಸ್ಥಳೀಯ ಗ್ರಾಮಸ್ಥರು ಕೈಜೋಡಿಸಿದರು.

Write A Comment