ಕನ್ನಡ ವಾರ್ತೆಗಳು

ಖೋಟಾ ನೋಟು ಮುದ್ರಿಸಿ ಚಲಾವಣೆ ಗೈದ ಆರೋಪಿಗೆ 3 ವರ್ಷ ಕಠಿಣ ಶಿಕ್ಷೆ.

Pinterest LinkedIn Tumblr

10Currency

ಮಂಗಳೂರು,ಜೂನ್.02 : ಬಂಟ್ವಾಳ ಪಡ್ಪು ಮೇರೆ ಮಜಲು ಎಂಬಲ್ಲಿ ಖೋಟಾ ನೋಟುನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಮೇಳೆ ಸಿಕ್ಕಿಬಿದ್ದ ಆರೋಪಿಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ3 ವರ್ಷ ಕಠಿಣ ಶಿಕ್ಷೆ ವಿಧಿಸಲು ಆದೇಶ ಹೊರಡಿಸಿದೆ. ಶಿಕ್ಷೆಗೆಗೊಳಗಾದ ಆರೋಪಿಯನ್ನು ಮೇರೆ ಮಜಲು ಗ್ರಾಮದ ಜೇಸನ್ ಪೀಟರ್ ಡಿ’ಸೋಜಾ (34) ಎಂದು ಗುರುತಿಸಲಾಗಿದೆ.

ಆರೋಪಿ ಜೇಸನ್ ಬಜೆಪೆ ಬಸ್ ನಿಲ್ದಾಣದ ಬಳಿ ಹೊಂದಿದ್ದ ಬಾಡಿಗೆ ಕಟ್ಟಡದಲ್ಲಿ ಕಲರ್ ಜೆರಾಕ್ಸ್ ಮಶಿನ್ ಮೂಲಕ ಅಸಲಿ ನೋಟುಗಳನ್ನು ಸ್ಕ್ಯಾನ್ ಮಾಡಿ ನಕಲಿ ನೋಟುಗಳನ್ನು ಸೃಷ್ಟಿಸುತ್ತಿದ್ದ ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಜೇಸನ್‌ನನ್ನು ಬಂಧಿಸಲಾಗಿತ್ತು. ಆಗ ಬಜಪೆ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಆಗಿದ್ದ ಅನಂತ ಮುರ್ಡೇಶ್ವರ ತನಿಖೆಯನ್ನು ಮುಂದುವರಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

2013ರ ಫೆ. 21 ರಂದು ಆರೋಪಿ ಜೇಸನ್ ಪಡುಪೆರಾರ್ ದ್ವಾರದ ಬಳಿ ಅಂಗಡಿಯೊಂದರಲ್ಲಿ 10 ರೂ. ಮುಖ ಬೆಲೆಯ ಎರಡು ಮೊಬೈಲ್ ರಿಚಾರ್ಜ್ ಕಾರ್ಡ್‍ಗಳನ್ನು ಖರೀದಿಸಿ 100 ರೂ. ನಕಲಿ ನೋಟು ನೀಡಿ ಅಂಗಡಿಯ ಮಾಲೀಕರನ್ನು ವಂಚಿಸಲು ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು. ಅನುಮಾನಗೊಂಡ ಅಂಗಡಿ ಮಾಲೀಕ ಚಂದ್ರಹಾಸ್ ಜೇಸನ್‍ನನ್ನು ಪುನ: ಕರೆಸಿ ಪರಿಶೀಲನೆ ನಡೆಸಿದಾಗ ಆತನ ಬಳಿ 100 ರೂ. ಮುಖ ಬೆಲೆಯ ಇತರ 6 ನಕಲಿ ನೋಟುಗಳು ಕಂಡುಬಂದಿದ್ದವು. ಈ ಬಗ್ಗೆ ಚಂದ್ರಹಾಸ್ ಬಜಪೆ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾ. ಉಮಾ ಎಂ.ಜಿ. ಆರೋಪಿಗೆ ಐಪಿಸಿ ಸೆಕ್ಷನ್ 489ಸಿ ಮತ್ತು 420 ಅನ್ವಯ 3 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 3 ತಿಂಗಳ ಸಾದಾ ಸಜೆಯನ್ನು ಅನುಭವಿಸಬೇಕೆಂದು ತೀರ್ಪು ನೀಡಿದರು.

Write A Comment