ಕನ್ನಡ ವಾರ್ತೆಗಳು

ಲಾರಿಗೆ ಸ್ಕಾರ್ಪಿಯೋ ಕಾರು ಡಿಕ್ಕಿ : ವಾಹನ ಸಂಚಾರಕ್ಕೆ ಅಡ್ಡಿ.

Pinterest LinkedIn Tumblr

Scorpio_lorry_photo_1

ಬಂಟ್ವಾಳ,ಜೂನ್.01: ಬಂಟ್ವಾಳ ತಾಲ್ಲೂಕಿನ ಕೊಯಿಲ ರಸ್ತೆಯಲ್ಲಿ ಮರ ಸಾಗಿಸುತ್ತಿದ್ದ ಲಾರಿಗೆ ಸ್ಕಾರ್ಪಿಯೋ ಕಾರೊಂದು ಭಾನುವಾರ ಬೆಳಿಗ್ಗೆ ಡಿಕ್ಕಿ ಹೊಡೆದ ಪರಿಣಾಮ ಕೆಲಹೊತ್ತು ಬಂಟ್ವಾಳ-ಮೂಡುಬಿದ್ರೆ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಬಾಳೆಹೊನ್ನೂರಿನ ಕಡ್ಲೆಮಕ್ಕಿ ನಿವಾಸಿ ನಯಾಝ್ ಅಹ್ಮದ್ ಎಂಬವರು ಲಾರಿಯಲ್ಲಿ ಚಿಕ್ಕಮಂಗಳೂರಿನ ಕೊಪ್ಪದಿಂದ ಮಂಗಳೂರಿನ ಮರದ ಮಿಲ್ಲಿಗೆ ಕ್ಲೀನರ್ ಹಸೈನಾರ್ ಎಂಬವರೊಂದಿಗೆ ಭಾನುವಾರ ಬೆಳಿಗ್ಗೆ ಸುಮಾರು ಆರು ಗಂಟೆಗೆ ಭಾರೀ ಗಾತ್ರದ ಮರ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಇದೇ ವೇಳೆ ಮೂಡುಬಿದ್ರೆ ಕಡೆಯಿಂದ ಮಂಗಳೂರಿನ ಜೋಕಟ್ಟೆ ಕಸಾಯಿಖಾನೆಗೆ ಅಕ್ರಮ ಜಾನುವಾರು ಸಾಗಾಟ ಮಾಡಿ ಹಿಂತಿರುಗುತ್ತಿದ್ದ ಸ್ಕಾರ್ಪೀಯೋ ವೇಗವಾಗಿ ಬಂದು ಲಾರಿ ಎದುರು ಮತ್ತು ಹಿಂಬದಿ ಚಕ್ರಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸ್ಕಾರ್ಪೀಯೋ ಮುಂಭಾಗ ನುಜ್ಜುಗುಜ್ಜಾಗಿ ಎದುರಿನ ಟಯರ್ ಸ್ಪೋಟಗೊಂಡಿದೆ. ಸ್ಕಾರ್ಪೀಯೋ ಕಾರು ಚಾಲಕ ಸಹಿತ ಮೂವರು ತಲೆಗೆ ಗಂಭೀರ ಗಾಯಗೊಂಡು ರಕ್ತ ಹರಿಸುತ್ತಲೇ ರಸ್ತೆಯಲ್ಲಿ ಓಡುತ್ತಾ ಪರಾರಿಯಾಗಿದ್ದಾರೆ.

Scorpio_lorry_photo_3 Scorpio_lorry_photo_2

ಅಪಘಾತದ ರಭಸಕ್ಕೆ ಲಾರಿಯ ಹಿಂಬದಿ ಎರಡು ಚಕ್ರಗಳ ಪೈಕಿ ಒಂದು ಸ್ಪೋಟಗೊಂಡು ಭಾರ ಹೊತ್ತಿದ್ದ ಲಾರಿ ರಸ್ತೆಗೆ ವಾಲತೊಡಗಿತ್ತು. ಭಾರೀ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಾದ ಕೇಶವ ಪೂಜಾರಿ ಮತ್ತು ತಿಮ್ಮಪ್ಪ ಪೂಜಾರಿ ಎಂಬವರು ಧಾವಿಸಿ ಬಂದು, ಲಾರಿ ಚಾಲಕ ಮತ್ತು ಕ್ಲೀನರ್ ಸೇರಿಕೊಂಡು ಲಾರಿಗೆ ಆಧಾರ ಕಂಬ ನಿಲ್ಲಿಸುವಲ್ಲಿ ಯಶಸ್ವಿಯಾದರು. ಈ ಅಪಘಾತದಿಂದ ಕೆಲಹೊತ್ತು ಬಂಟ್ವಾಳ-ಮೂಡುಬಿದ್ರೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದಂತೆಯೇ ಬಂಟ್ವಾಳ ಗ್ರಾಮಾಂತರ ಠಾಣೆ ಎಎಸೈ ಎಂ.ಕೆ.ಕುಟ್ಟಿ, ಸಂಚಾರಿ ಪೊಲೀಸ್ ಮೋನಪ್ಪ ಮತ್ತಿತರರು ಧಾವಿಸಿ ಬಂದು ಸ್ಥಳೀಯರ ಸಹಕಾರದಲ್ಲಿ ಸ್ಕಾರ್ಪೀಯೋ ಕಾರನ್ನು ರಸ್ತೆಬದಿಗೆ ಸರಿಸಿದ ಬಳಿಕ ಕ್ರೇನ್ ಮೂಲಕ ಪೊಲೀಸ್ ಠಾಣೆಗೆ ಸಾಗಿಸಿದರು.

ಸ್ಕಾರ್ಪಿಯೋ ಕಾರಿನ ಎದುರು ಭಾಗದಲ್ಲಿ ದೊಡ್ಡ ಗಾತ್ರದ ತಗಡಿನಲ್ಲಿ ದೇವಿ ಚಿತ್ರ ಅಳವಡಿಸಲಾಗಿದ್ದು, ಒಳಗೆ ಎಲ್ಲಾ ಸೀಟು ತೆಗೆಯಲಾಗಿತ್ತು. ವಾಹನದಲ್ಲಿ ಟರ್ಪಲು, ಹಗ್ಗ, ತಲವಾರು, ಸಗಣಿ ಮತ್ತಿತರ ಸೊತ್ತು ಕಂಡು ಬಂದಿದ್ದು, ಮಂಗಳೂರಿಗೆ ಅಕ್ರಮ ಜಾನುವಾರು ಸಾಗಾಟ ಮಾಡಿ ಈ ವಾಹನ ಹಿಂತಿರುಗುತ್ತಿತ್ತು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ

Write A Comment