ಮಂಗಳೂರು, ಮೇ .31: ಆಸ್ಟ್ರೇಲಿಯಾದ ಸರ್ಫ್‌ಲೈಫ್ ಸೇವಿಂಗ್ ಮಾದರಿಯಲ್ಲಿ ಪ್ರಸ್ತಾವಿತ ಸರ್ಫ್‌ಲೈಫ್ ಇಂಡಿಯಾಕ್ಕೆ ಚಾಲನೆ ದೊರೆತಲ್ಲಿ 2016ರಲ್ಲಿ ಭಾರತ ವಿಶ್ವ ಸರ್ಫಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯುವ ನಿರೀಕ್ಷೆ ಇದೆ ಎಂದು ಪಣಂಬೂರು ಬೀಚ್ ಅಭಿವೃದ್ಧಿ ಪ್ರವಾಸೋದ್ಯಮ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.
ಪಣಂಬೂರು ಬೀಚ್‌ನಲ್ಲಿ ಮೇ 29ರಿಂದ ಸರ್ಫಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತಾದರೂ ಚುನಾವಣೆಯ ಹಿನ್ನೆಲೆಯಲ್ಲಿ ಅದನ್ನು ಮುಂಡೂಡಲಾಗಿದೆ. ಆ ಹಿನ್ನೆಲೆಯಲ್ಲಿ ಶನಿವಾರ ಪಣಂಬೂರು ಕಡಲ ಕಿನಾರೆಗೆ ಆಗಮಿಸಿದ್ದ ಅಂತಾ ರಾಷ್ಟ್ರೀಯ ಸರ್ಫಿಂಗ್ ತರಬೇತುದಾರರಿಂದ ಸರ್ಫಿಂಗ್ ಬಗ್ಗೆ ಆಯೋಜಿಸಲಾಗಿದ್ದ ಪ್ರಾತ್ಯಕ್ಷಿಕೆಯ ಸಂದರ್ಭ ಅವರು ಪತ್ರಕರ್ತರ ಜತೆ ಈ ವಿಷಯ ಹಂಚಿಕೊಂಡರು.
ಮಂಗಳೂರಿನಲ್ಲಿ ಈ ಸರ್ಫ್ ಲೈಫ್ ಸೇವಿಂಗ್‌ಗೆ ಚಾಲನೆ ದೊರೆಯುವ ಸಾಧ್ಯತೆ ಇದ್ದು, ಇದರ ಮೂಲಕ ಭಾರತದ ಕರಾವಳಿಯ ತೀರಗಳಲ್ಲಿ ಜೀವ ರಕ್ಷಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಈ ಸರ್ಫ್ ಲೈಫ್ ಸೇವಿಂಗ್ ಇಂಡಿಯಾ, ಸರ್ಫಿಂಗ್ ಫೆಡರೇಶನ್ ಆಫ್ ಒಕ್ಕೂಟದ (ಎಸ್‌ಎಫ್‌ಐ) ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ.
ಪಣಂಬೂರು ಬೀಚ್‌ಗೆ ಆಗಮಿಸಿ ಇಂದು ಸರ್ಫಿಂಗ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ ಇಂಟರ್‌ನ್ಯಾಷನಲ್ ಸರ್ಫಿಂಗ್ ಅಸೋಸಿಯೇಶನ್‌ನ ಪ್ರಮುಖ ಅಂತಾರಾಷ್ಟ್ರೀಯ ತರ ಬೇತುದಾರರಲ್ಲಿ ಒಬ್ಬರಾದ ಜಮೊ ಬೊರ್ತ್‌ವಿಕ್, ಈ ಸರ್ಫ್ ಲೈಫ್ ಸೇವಿಂಗ್ ಇಂಡಿಯಾದ ಮೂಲಕ ಹೊಸ ತರಬೇತಿ ಸಾಧ್ಯತೆ, ಜೀವ ರಕ್ಷಕ ಮತ್ತು ಜೀವ ರಕ್ಷಕ ಸೇವೆಗಳ ಕುರಿತಾದ ಹೊಸ ಆಯಾಮಕ್ಕೆ ಅವಕಾಶ ನೀಡುವುದಲ್ಲದೆ, ಸರ್ಫ್ ಕ್ರೀಡೆಗೂ ಅವಕಾಶ ಕಲ್ಪಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಬೀಚ್‌ಗಳಲ್ಲಿ ಜೀವರಕ್ಷಕರು ಅತೀ ಅಗತ್ಯ. ಸಮುದ್ರದ ತೆರೆಗಳು ಮತ್ತು ಆಳವನ್ನು ಅವರು ಗ್ರಹಿಸಬಲ್ಲರು. ಸಮುದ್ರದಲ್ಲಿ ಸಂಭವಿಸುವ ಅವಘಡಗಳ ಬಗ್ಗೆ ಅವರು ತರಬೇತುಗೊಂಡಿರುತ್ತಾರೆ. ಸರ್ಫ್ ಲೈಫ್ ಸೇವಿಂಗ್ ಇಂಡಿಯಾ ಈ ಬಗ್ಗೆ ಪ್ರಮುಖ ಬೆಳಕು ಬೀರಲಿದೆ. ಕರಾವಳಿಯುದ್ದಕ್ಕೂ ಜೀವ ರಕ್ಷಣೆಯ ಶಿಬಿರಗಳನ್ನು ನಡೆಸುವ ಆಲೋಚನೆ ಇದೆ ಎಂದು ಎಸ್‌ಎಫ್‌ಐನ ಉಪಾಧ್ಯಕ್ಷ ರಾಮ್‌ಮೋಹನ್ ಪರಂಪಜೆ ತಿಳಿಸಿದರು.
ಸರ್ಫಿಂಗ್ ಸ್ಪರ್ಧೆ ಮುಂದೂಡಲ್ಪಟ್ಟಿರುವುದು ಬೇಸರದ ಸಂಗತಿ. ಆದರೆ ಇದರಿಂದ ಸರ್ಫಿಂಗ್ ಕ್ರೀಡಾಪಡುಗಳು ನಿರಾಶರಾಗಿಲ್ಲ ಎಂದು ಅವರು ಹೇಳಿದರು.