ಮಂಗಳೂರು, ಮೇ .31: ಕಳೆದ ಐದು ವರ್ಷಗಳ ಆಡಳಿತದಲ್ಲಿ ಕ್ಯಾಂಪ್ಕೋ ಆಡಳಿತ ಮಂಡಳಿಯು ತನ್ನ 2014-15ನೆ ಸಾಲಿನಲ್ಲಿ ಒಟ್ಟು ವಾರ್ಷಿಕ ವಹಿವಾಟನ್ನು 1,540 ಕೋ.ರೂ.ಗೆ ಏರಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಮಾತ್ರವಲ್ಲದೆ ಈ ಅವಧಿಯಲ್ಲಿ 60 ಕೋ. ರೂ.ಗಳ ಲಾಭ ಗಳಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಪದ್ಮನಾಭ ಕೊಂಕೋಡಿ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೋದ ವಾರ್ಷಿಕ ವ್ಯವಹಾರದ ಮಾಹಿತಿ ಒದಗಿಸಿದ ಅವರು, ಕ್ಯಾಂಪ್ಕೋಗೆ ಅಡಿಕೆ ಮಾರಾಟ ಮಾಡಿದ ಸದಸ್ಯರಿಗೆ ಕಿಲೋಗೆ 1.50 ರೂ.ನಂತೆ ಪ್ರೋತ್ಸಾಹಧನ ಪಾವತಿ ಗರಿಷ್ಠ ಮಿತಿ 80 ಕ್ವಿಂಟಾಲ್ರಂತೆ ಒಟ್ಟು 12,000 ರೂ.ಗಳನ್ನು ನೀಡಲಾಗಿದೆ. ಅಡಿಕೆ ಖರೀದಿ ವೌಲ್ಯ 1,241.78 ಕೋ.ರೂ.ಯಾಗಿದ್ದು, ಮಾರಾಟ ವೌಲ್ಯ 1,292.77 ಕೋ.ರೂ.ಗಳಾಗಿವೆ. 63.46 ಕೋ.ರೂ. ಕೋಕ್ಕೋ ಖರೀದಿಸಲಾಗಿದ್ದು, 17.96 ಕೋ. ರೂ. ವೌಲ್ಯದ ರಬ್ಬರ್ ಖರೀದಿಸಲಾಗಿದೆ. ಇದೇ ವೇಳೆ 54 ಕೋ.ರೂ. ವೌಲ್ಯದ ಚಾಕಲೇಟ್ ಮಾರಾಟವಾಗಿದೆ. 129.04 ಕೋಟಿ ರೂ.ಗಳ ಕೈಗಾರಿಕಾ ಉತ್ಪನ್ನಗಳ ಮಾರಾಟವಾಗಿದೆ ಎಂದು ಹೇಳಿದರು.
ಇದೇ ಅವಧಿಯಲ್ಲಿ 13 ಸದಸ್ಯರಿಗೆ ತಲಾ 50,000 ರೂ.ಯಂತೆ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವು ನೀಡಲಾಗಿದೆ. 22 ಸದಸ್ಯರಿಗೆ ತಲಾ 5,000 ರೂ.ನಂತೆ ಡಯಾಲಿಸಿಸ್ಗೆ ನೆರವು ನೀಡಲಾಗಿದೆ ಎಂದು ಅವರು ಹೇಳಿದರು. 2010ರಲ್ಲಿ ಚಾಲಿ ಅಡಿಕೆಗೆ ಕಿಲೋಗೆ 78 ರೂ. ಇದ್ದು, ಅದೀಗ 330 ರೂ.ಗೆ ಏರಿಕೆಯಾಗಿದೆ. ಕೆಂಪು ಅಡಿಕೆ ಕಿಲೋಗೆ 93ರೂ.ನಿಂದ 405 ರೂ.ಗಳಿಗೆ ಏರಿಕೆಯಾಗಿದ್ದರೆ, ಅಡಿಕೆ ಖರೀದಿ 497.67 ಕೋ.ರೂ.ಗಳಿಂದ 1,241.78 ಕೋಟಿ ರೂ.ಗೆ ಏರಿಕೆಯಾಗಿದೆ. ಅಡಿಕೆ ಮಾರಾಟ 487.02 ಕೋ. ರೂ.ಯಿಂದ 1,292.77 ಕೋ.ರೂ.ಗೆ, ಕೊಕ್ಕೋ ಖರೀದಿ 22.52 ಕೋ.ರೂ.ಗಳಿಂದ 63.46 ಕೋ. ರೂ.ಗೆ, ರಬ್ಬರ್ ಖರೀದಿ 6.35 ಕೋ.ರೂ.ಯಿಂದ 17.96 ಕೋ.ರೂ., ರಬ್ಬರ್ ಮಾರಾಟ 4.35 ಕೋ.ರೂ.ಯಿಂದ 18.91 ಕೋ.ರೂ.ಗಳಿಗೆ, ಚಾಕಲೇಟ್ ಮಾರಾಟ 30.25 ಕೋ. ರೂ.ಯಿಂದ 54 ಕೋ. ರೂ.ಗೆ ವೃದ್ಧಿಯನ್ನು ಕಂಡಿದೆ.
ಇದೇ ವೇಳೆ ಕೈಗಾರಿಕಾ ಉತ್ಪನ್ನಗಳ ಮಾರಾಟವೂ 50.34 ಕೋ. ರೂ.ಯಿಂದ 129.04 ಕೋ.ರೂ.ಗಳಿಗೆ ಏರಿಕೆಯಾಗಿದೆ. ಧಾರಣೆ ವ್ಯತ್ಯಯ ನಿಧಿ 6.62 ಕೋ.ರೂ.ಯಿಂದ 17.73 ಕೋ.ರೂ., ಪಾಲು ಬಂಡವಾಳ 19.32 ಕೋ. ರೂ.ಯಿಂದ 37.71 ಕೋ. ರೂ.ಗಳಿಗೆ, ನೌಕರರ ಅಭಿವೃದ್ಧಿ ನಿಧಿ 6.62 ಕೋ.ರೂ.ಯಿಂದ 17.73 ಕೋ.ರೂ.ಗಳಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಕಾಯ್ದಿರಿಸಿದ ನಿಧಿಯು 51.92 ಕೋ. ರೂ.ಯಿಂದ 170.20 ಕೋ.ರೂ.ಗೆ ಏರಿಕೆಯಾಗಿದೆ (ಎಲ್ಲಾ ವಿಭಾಗಗಳ ಒಟ್ಟು ಕಾಯ್ದಿರಿಸಿದ ನಿಧಿಯು 250 ಕೋ.ರೂ.) ಎಂದು ಪದ್ಮನಾಭ ಕೊಂಕೋಡಿ ವಿವರಿಸಿದರು.
ಅಡಿಕೆ, ಕೋಕ್ಕೋ ಬೆಲೆ : ಆತಂಕ ಬೇಡ
ಅಡಿಕೆ ಹಾಗೂ ಕೋಕ್ಕೋ ಬೆಲೆಯ ಬಗ್ಗೆ ರೈತರು ಆತಂಕ ಪಡಬೇಕಾಗಿಲ್ಲ. ಬಿಳಿ ಅಡಿಕೆಗೆ ಉತ್ತಮ ದರವಿದೆ. ಕೋಕ್ಕೋ ಬೆಳೆಗಾರರಿಗೆ ನೆಸ್ಲೇ, ಕ್ಯಾಡ್ಬರಿ ಕಂಪೆನಿಗಳು ನೀಡುವುದಕ್ಕಿಂತಲೂ ಅಧಿಕ ದರವನ್ನು ನೀಡಿ ಖರೀದಿಸಲಾಗುತ್ತಿದೆ. ದೇಶದ ಸುಮಾರು 18 ರಾಜ್ಯಗಳಲ್ಲಿ ಪ್ರಸ್ತುತ ಕ್ಯಾಂಪ್ಕೋ ಬ್ರಾಂಡ್ನ ಚಾಕಲೇಟ್ ಮಾರಾಟವಾಗುತ್ತಿದೆ. 13 ಕೋ.ರೂ. ವೆಚ್ಚದಲ್ಲಿ ಅಟೋಮ್ಯಾಟಿಕ್ ಚಾಕಲೇಟ್ ಫ್ಯಾಕ್ಟರಿಯನ್ನು ತೆರೆಯಲಾಗುವುದು. ಇದೀಗ ಅಡಿಕೆಯನ್ನು ಬೇರೆ ದೇಶಗಳಿಂದ ಆಮದು ಮಾಡುವುದನ್ನು ನಿಷೇಧಿಸುವಂತೆ ಒತ್ತಾಯಿಸಿ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ರ ಗಮನ ಸೆಳೆಯಲಾಗಿದೆ. ಇದೀಗ ವಾಣಿಜ್ಯ ಸಚಿವರಲ್ಲದೆ ಪ್ರಧಾನಿ ಅವರನ್ನೂ ಭೇಟಿಯಾಗಿ ಅಡಿಕೆ ಆಮದು ಸಂಪೂರ್ಣ ನಿಷೇಧಿಸುವಂತೆ ಆಗ್ರಹಿಸಲು ತೀರ್ಮಾನಿಸಲಾಗಿದೆ ಎಂದು ಕೊಂಕೋಡಿ ತಿಳಿಸಿದರು.
ಅಡಿಕೆ ಸಿಪ್ಪೆಯಿಂದ ವೌತ್ ಫ್ರೆಶ್ನರ್
ಅಡಿಕೆ ಸಿಪ್ಪೆಯಿಂದ ವೌತ್ ಫ್ರೆಶ್ನರ್ ತಯಾರಿಸುವ ಸಲುವಾಗಿ ಹಸಿ ಅಡಿಕೆಯನ್ನು ಒದಗಿಸುವಂತೆ ಚೀನಾದ ಕಂಪೆನಿಯೊಂದು ಕ್ಯಾಂಪ್ಕೋ ಜತೆ ಮಾತುಕತೆ ನಡೆಸಿದೆ. 20 ಲಕ್ಷ ಮೆಟ್ರಿಕ್ ಟನ್ ಹಸಿ ಅಡಿಕೆಗೆ ಅವರು ಬೇಡಿಕೆ ಸಲ್ಲಿಸಿದ್ದು, ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಪದ್ಮನಾಭ ಕೊಂಕೋಡಿ ಹೇಳಿದರು.
ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ಉಪ ಮಹಾ ಪ್ರಬಂಧಕರಾದ (ಅಡಿಕೆ ಮಾರುಕಟ್ಟೆ ವಿಭಾಗ), ಪ್ರಮೋದ್ ಕುಮಾರ್, ಚಾಕಲೇಟ್ ವಿಭಾಗದ ಕೃಷ್ಣ ಕುಮಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.