ಕನ್ನಡ ವಾರ್ತೆಗಳು

ಎಡಿಬಿ ಸಾಲಾಧಾರಿತ ಕ್ಯುಮಿಪ್ ಜಲಸಿರಿ ಯೋಜನೆ ಬಗ್ಗೆ ಮನಪಾದಲ್ಲಿ ವಿಶೇಷ ಚರ್ಚೆ.

Pinterest LinkedIn Tumblr

Mcc_meet_photo_1

ಮಂಗಳೂರು, ಮೇ .29 : ಮನಪಾ ವ್ಯಾಪ್ತಿಯಲ್ಲಿ ಎಡಿಬಿ ಸಾಲಾಧಾರಿತ ಕ್ಯುಮಿಪ್ ಜಲಸಿರಿ ಯೋಜನೆಗೆ ಸಂಬಂಧಿಸಿ ತಾಂತ್ರಿಕ ಸಲಹೆಗಾರ ಸಂಸ್ಥೆಯ ಪ್ರಾಥಮಿಕ ವರದಿಯಲ್ಲಿ ಬದಲಾವಣೆ ಕುರಿತಂತೆ ಜೂನ್ 1ರಂದು ಅಭಿವೃದ್ಧಿ ಸ್ಥಾಯಿ ಸಮಿತಿ ಚರ್ಚಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ಒಪ್ಪಿಗೆ ನೀಡಲು ಗುರುವಾರ ನಡೆದ ಮನಪಾ ವಿಶೇಷ ಸಭೆಯಲ್ಲಿ ನಿರ್ಣಯಿಸಲಾಯಿತು.

ಮನಪಾ ವ್ಯಾಪ್ತಿಯಲ್ಲಿ 24×7 ರೀತಿಯಲ್ಲಿ ನೀರು ಸರಬರಾಜು ವ್ಯವಸ್ಥೆ ಅನುಷ್ಠಾನಗೊಳಿಸಲು 160 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಶೇ.40 ಅನುದಾನ (64 ಕೋಟಿ ರೂ.), ಶೇ.50ರಷ್ಟು ಸಾಲ (80 ಕೋ.ರೂ.) ಮತ್ತು ಶೇ.10 ಮನಪಾ ಪಾಲು (16 ಕೋಟಿ ರೂ.) ಭರಿಸಲಿದೆ. ದ್ವಿತೀಯ ಹಂತದ ಕುಡ್ಸೆಂಪ್ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಒಳಚರಂಡಿ ವ್ಯವಸ್ಥೆಯ ಅನುಷ್ಠಾನಕ್ಕಾಗಿ 120 ಕೋಟಿ ರೂ. ಯೋಜನೆಯಡಿ ಶೇ. 50 ಅನುದಾನ (60 ಕೋಟಿ ರೂ.), ಶೇ. 40 ಸಾಲ (48 ಕೋಟಿ ರೂ.) ಹಾಗೂ ಶೇ. 10 (12) ಪಾಲಿಕೆಯ ಪಾಲಾಗಿರುತ್ತದೆ ಎಂದು ಯೋಜನೆಯ ತಾಂತ್ರಿಕ ಸಲಹೆಗಾರ ಸಂಸ್ಥೆ ಜಿಕೆಡಬ್ಲು ಕನ್‌ಸಲ್ಟ್‌ನ ಎಂಜಿನಿಯರ್ ವಿಶೇಷ ಸಭೆಯಲ್ಲಿ ಯೋಜನೆಯ ಕುರಿತಾದ ಪ್ರಾಥಮಿಕ ವರದಿ ಮಂಡಿಸಿದರು. ಆದರೆ ಈ ವರದಿಯಲ್ಲಿ ಸಾಕಷ್ಟು ಲೋಪ ದೋಷಗಳಿವೆ. ಪ್ರಥಮ ಹಂತದ ಕುಡ್ಸೆಂಪ್ ಯೋಜನೆಯಡಿ ಸಾಕಷ್ಟು ಹಣ ಪೋಲಾಗಿದೆ. ಇದನ್ನು ಜಾರಿಗೊಳಿಸಲು ಅಧ್ಯಯನ ಅಗತ್ಯ ಇದೆ ಎಂದು ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಸಹಿತ ವಿಪಕ್ಷದ ಸದಸ್ಯರು ಹಾಗೂ ಆಡಳಿತ ಪಕ್ಷದ ಸದಸ್ಯರೂ ಆಕ್ಷೇಪ ವ್ಯಕ್ತಪಡಿಸಿದರು.

Mcc_meet_photo_2 Mcc_meet_photo_3 Mcc_meet_photo_4

ಈ ವೇಳೆ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಎಡಿಬಿವತಿಯಿಂದ 2ನೆ ಹಂತದ ಈ ಯೋಜನೆಗೆ ನಾವು ಒಪ್ಪಿಗೆ ನೀಡದಿದ್ದರೆ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗೆ ಬರುವ ಹಣ ವಾಪಸ್ ಹೋಗಲಿದೆ ಎಂದರು. ಶಾಸಕರಾದ ಮೊಯ್ದಿನ್ ಬಾವ, ಐವನ್ ಡಿಸೋಜ ಮಾತನಾಡಿ, ಮಂಗಳೂರಿನ ಸಮಗ್ರ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗೆ 2ನೆ ಹಂತದ ಎಡಿಬಿ ಕಾಮಗಾರಿ ಅಗತ್ಯ ಎಂದರು. ಮನಪಾ ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ ಮಾತನಾಡಿ, ಪ್ರಾಥಮಿಕ ವರದಿಯನ್ನು ಸೋಮವಾರ ಅಭಿವೃದ್ಧಿ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದರು.

Mcc_meet_photo_5 Mcc_meet_photo_6 Mcc_meet_photo_7

ಆಯುಕ್ತರಿಂದ ಇಬ್ಬರಿಗೆ ಶೋಕಾಸ್ ನೋಟಿಸ್:
ಮನಪಾ ನಗರ ಯೋಜನಾ ವಿಭಾಗದಲ್ಲಿ ಕಟ್ಟಡ ನಿರ್ಮಾಣ ಪರವಾನಿಗೆ ನೀಡುವ ಸಂದರ್ಭ ಸಂಗ್ರಹಿಸಲಾದ ಪ್ರೀಮಿಯಂ ಫ್ಲೋರ್ ಏರಿಯಾ ರೇಶಿಯೊ (ಎಫ್‌ಎಆರ್) ಶುಲ್ಕವನ್ನು ರಸ್ತೆ ಅಭಿವೃದ್ಧಿಯ ಸಲುವಾಗಿ ವಿನಿಯೋಗಿಸುವ ಚರ್ಚೆ ಸಂದರ್ಭ ಸಂಗ್ರಹಿಸಲಾದ (ಕಾರ್ಯಸೂಚಿಯಲ್ಲಿ 71 ಕೋಟಿ ರೂ. ಸಂಗ್ರಹ ಎಂದು ನಮೂದಾಗಿತ್ತು) ಮೊತ್ತಕ್ಕೆ ಸಂಬಂಧಿಸಿ ಕಾರ್ಯಸೂಚಿಯಲ್ಲಿ ತಪ್ಪು ಮಾಹಿತಿ ಒದಗಿಸಲಾಗಿದೆ ಎಂದು ವಿಪಕ್ಷ ಸದಸ್ಯ ರಾದ ಪ್ರೇಮಾನಂದ ಶೆಟ್ಟಿ ಹಾಗೂ ಸುಧೀರ್ ಶೆಟ್ಟಿ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಅಧಿಕಾರಿಗಳನ್ನು ಮೇಯರ್ ಸಭೆಯಲ್ಲಿ ಪ್ರಶ್ನಿಸಿದಾಗ, 2011ರಿಂದ 2015ರವರೆಗೆ ಒಟ್ಟು 75.87 ಕೋಟಿ ರೂ. ಸಂಗ್ರಹವಾಗಿದ್ದು, ಈ ಹಣಕ್ಕೆ ಬಡ್ಡಿಯ ರೂಪದಲ್ಲಿ 10.15 ಕೋಟಿ ರೂ. ಸೇರ್ಪಡೆಯಾಗಿದೆ ಎಂದು ತಿಳಿಸಿದರು. ಹಾಗಿದ್ದಲ್ಲಿ ಸಭೆಗೆ ತಪ್ಪು ಮಾಹಿತಿ ನೀಡಿದ್ದು ಯಾಕೆ ಮತ್ತು ಈಗಾಗಲೇ ಈ ಸಂಗ್ರಹವಾದ ಹಣ ದಲ್ಲಿ ಎಷ್ಟು ಖರ್ಚಾಗಿದೆ ಎಂಬುದನ್ನು ಸದನದ ಮುಂದಿಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಆಯುಕ್ತೆ ಹೆಫ್ಸಿಬಾ ರಾಣಿ, ಸಂಗ್ರಹವಾದ ಮೊತ್ತಕ್ಕೆ ಸಂಬಂಧಿಸಿ ವ್ಯತ್ಯಾಸ ಕಂಡು ಬಂದಿರುವುದರಿಂದ ಈಗಾಗಲೇ ಸಂಬಂಧಪಟ್ಟ ಇಬ್ಬರು ಅಧಿಕಾರಿಗಳಿಗೆ ಶೋಕಾಸ್‌ನೋಟಿಸ್ ನೀಡಿ 4 ಗಂಟೆಗಳಲ್ಲಿ ಉತ್ತರ ನೀಡಲು ತಿಳಿಸಿರುವುದಾಗಿ ಹೇಳಿದರು. 2011ರ ಕರ್ನಾಟಕ ರಾಜ್ಯಪತ್ರ ವಲಯ ನಿಯಮಗಳ ಪ್ರಕಾರ ಪ್ರೀಮಿಯಂ ಎಫ್‌ಎಆರ್ ಸಂಗ್ರಹಿಸಲಾದ ಕಟ್ಟಡ ರಸ್ತೆ ಅಗಲೀಕರಣ ಹಾಗೂ ಅದಕ್ಕೆ ಸಂಬಂಧಿಸಿದ ಅಭಿವೃದ್ಧಿಗೆ ಆ ಹಣವನ್ನು ಉಪಯೋಗಿಸಬೇಕು. ಬಳಿಕ ಉಳಿದ ಕಡೆಗೆ ಬಳಸಬಹುದು ಎಂದು ಹೇಳಲಾಗಿದೆ. ಎಲ್ಲೆಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎಂದು ಪಟ್ಟಿ ಮಾಡಿ ಯಾವ ರಸ್ತೆ ವಿಸ್ತರಣೆ ಮಾಡಬೇಕೆಂಬ ಬಗ್ಗೆ ಕ್ರಿಯಾ ಯೋಜನೆ ತಯಾರಿಸಲಾಗುವುದು ಎಂದು ಆಯುಕ್ತೆ ಈ ಸಂದರ್ಭ ತಿಳಿಸಿದರು.

ಸಭೆಯಲ್ಲಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರಿನಾಥ್, ಕೇಶವ, ದೀಪಕ್ ಕೆ.ಪೂಜಾರಿ, ಪ್ರಕಾಶ್ ಸಾಲ್ಯಾನ್ ಉಪಸ್ಥಿತರಿದ್ದರು.

Write A Comment