ಕನ್ನಡ ವಾರ್ತೆಗಳು

ಪರಿಸರ ಸಂರಕ್ಷಣೆಯೊಂದಿಗೆ ಜನರಿಗೆ ತೊಂದರೆಯಾಗದಂತೆ ಅಭಿವೃದ್ಧಿ : ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

Pinterest LinkedIn Tumblr

Bjp_press_meet_1

ಮಂಗಳೂರು, ಮೇ .29 : ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮಸಂವೇದನೆಯ ಪ್ರದೇಶವಾಗಿದ್ದು ಜೀವ ವೈವಿಧ್ಯಗಳ ತಾಣವಾಗಿದೆ. ಪ್ರಸಕ್ತ ಪರಿಸರ ಸಂರಕ್ಷಣೆ ಯೊಂದಿಗೆ ಅಭಿವೃದ್ಧಿ ಯೋಜನೆ ಸರಕಾರದ ನೀತಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಗಾಡ್ಗೀಳ್ ಸಮಿತಿಯೂ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಪ್ರಸಕ್ತ ಕಸ್ತೂರಿ ರಂಗನ್ ವರದಿ ಸರಕಾರದ ಮುಂದಿದೆ. ಆದರೆ ಸರಕಾರ ಪರಿಸರಕ್ಕೆ ಹಾಗೂ ಜನರಿಗೆ ತೊಂದರೆಯಾಗದಂತೆ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಳ್ಳುವ ಇಂಗಿತ ಹೊಂದಿರುವುದರಿಂದ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತಗೆದುಕೊಳ್ಳಲಾಗುವುದು ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.ಅವರು ಗುರುವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಸುದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.

ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇರಳ ರಾಜ್ಯ ಈಗಾಗಲೇ ವರದಿ ಸಲ್ಲಿಸಿದೆ. ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಸರಕಾರಗಳು ವರದಿ ನೀಡಲಿವೆೆ. ಕಸ್ತೂರಿ ರಂಗನ್ ವರದಿಯ ಪ್ರಕಾರ 7,000 ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಡಲಿದೆ. ಈ ಗ್ರಾಮಗಳು ಒಳಪಡುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆಯನ್ನು ನಡೆಸಲಾಗುವುದು. ಈ ವರ್ಷದ ಅಂತ್ಯದೊಳಗೆ ವರದಿ ಜಾರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಜಾವಡೇಕರ್ ತಿಳಿಸಿದರು. ಭೂ ಸುಧಾರಣಾ ತಿದ್ದುಪಡಿ ಮಸೂದೆ ಮುಂದಿನ ಅಧಿವೇಶದಲ್ಲಿ ಅಂಗೀಕಾರವಾಗುವ ಸಾಧ್ಯತೆ ಇದೆ ಎಂದು ಜಾವಡೇಕರ್ ತಿಳಿಸಿದರು.

Bjp_press_meet_2

ತ್ಯಾಜ್ಯನೀರನ್ನು ಕೆರೆಗಳಿಗೆ ಬಿಡುವ ಬಿಲ್ಡರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಲಾಗುವುದು. ಪ್ರಸಕ್ತ ಬೆಂಗಳೂರಿನ ಹಲವು ಕಡೆ ಈ ರೀತಿ ಕೊಳಚೆ ನೀರನ್ನು ಕೆರೆಗಳಿಗೆ ಬಿಡುವ ಮೂಲಕ ಜಲಮಾಲಿನ್ಯವಾಗುತ್ತಿರುವುದು ತನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಸರಕಾರದಿಂದ ವರದಿ ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.

Bjp_press_meet_3

ಕೇಂದ್ರ ಸರಕಾರದ ಸಾಧನೆಯನ್ನು ಜನತೆಗೆ ತಿಳಿಸಲು ಮಹಾ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಪ್ರಯುಕ್ತ ಕೇರಳ ರಾಜ್ಯದಲ್ಲಿ ಸಭೆ ನಡೆಸಿ ಮಹಾರಾಷ್ಟ್ರದಲ್ಲಿ ಈ ಬಗ್ಗೆ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿರುವುದಾಗಿ ಜಾವಡೇಕರ್ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಒಂದು ವರ್ಷದಲ್ಲಿ ಜನಸಾಮಾನ್ಯರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ನೇತೃತ್ವದ ಸರಕಾರ ಹಗರಣಗಳ ಸರಕಾರವಾಗಿ ಜನರಿಂದ ದೂರವಾದರೆ ಬಿಜೆಪಿ ಮೋದಿ ನೇತೃತ್ವದಲ್ಲಿ ಹಗರಣಗಳ ಕ್ಷೇತ್ರವನ್ನು ಸರಕಾರದ ಸಾಧನೆಯ ಕ್ಷೇತ್ರವಾಗಿ ಪರಿವರ್ತಿಸಿ ಸರಕಾರದ ಬೊಕ್ಕಸಕ್ಕೆ ಆದಾಯ ತಂದಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್, ಬಿಜೆಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಮೋನಪ್ಪ ಭಂಡಾರಿ, ನಿತಿನ್ ಕುಮಾರ್, ಕಿಶೋರ್ ರೈ, ವಿಕಾಸ್, ರವಿಕಿರಣ್, ಸುರೇಶ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Write A Comment