ಮಂಗಳೂರು, ಮೇ 28: ಹುಟ್ಟಿನಿಂದಲೇ ಮಾತು ಬಾರದ, ಕಿವಿ ಕೇಳಿಸದ ಬಾಲಕನೊಬ್ಬ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 606 ಅಂಕಗಳನ್ನು ಪಡೆಯುವ ಮೂಲಕ ಹುಬ್ಬೇರಿಸಿದ್ದಾನೆ. ಕಾರವಾರ ಜಿಲ್ಲೆಯ ಕದ್ರಾದ ಕೆ.ಎಚ್.ಇ.ಪಿ ಹೈಸ್ಕೂಲಿನ ವಿದ್ಯಾರ್ಥಿಯಾಗಿರುವ ಬಿ.ಎನ್. ಶಿವಯೋಗಿಯೇ ಈ ಪ್ರತಿಭಾನ್ವಿತ.
ಈತ ಕನ್ನಡ, ಹಿಂದಿ ಹಾಗೂ ಗಣಿತದಲ್ಲಿ 100ಕ್ಕೆ 99 ಅಂಕಗಳಿಸಿದ್ದಾನೆ. ವಿಜ್ಞಾನದಲ್ಲಿ 95 ಹಾಗೂ ಸಾಮಾನ್ಯ ವಿಜ್ಞಾನದಲ್ಲಿ 93, ಹಾಗೂ ಇಂಗ್ಲಿಷ್ ವಿಷಯದಲ್ಲಿ 125ಕ್ಕೆ 121 ಅಂಕ ಗಳಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದಾನೆ. ಈತನ ಸಾಧನೆಯನ್ನು ಗಮನಿಸಿದ ಮಂಗಳೂರಿನ ಕರಾವಳಿ ಶ್ರೀ ಕನ್ಯಕಾಪರಮೇಶ್ವರಿ ಆರ್ಯವೈಶ್ಯ ಸಂಘ ಬುಧವಾರ ಶಿವಯೋಗಿಯನ್ನು ಅಭಿನಂದಿಸಿದೆ.
ಮುಂದೆ ಬೆಂಗಳೂರಿನಲ್ಲಿ ಬೃಹತ್ ಅಭಿನಂದನಾ ಕಾರ್ಯಕ್ರಮ ಆಯೋಜಿಸಿ ಆತನ ಬಾಳಿಗೆ ಬೆಳಕು ನೀಡುವ ಬಗ್ಗೆ ಯೋಚಿಸಿದೆ. ಈ ಬಗ್ಗೆ ವಿವರ ನೀಡಿದ ಸಂಘದ ಗೌರವ ಅಧ್ಯಕ್ಷ ಎಸ್.ಆರ್.ಕುಬೇರ ಶೆಟ್ಟಿ ಆರ್ಯವೈಶ್ಯದ ಸಮುದಾಯದ ಹುಡುಗನೊಬ್ಬ ಇದೇ ಮೊದಲ ಬಾರಿಗೆ ಇಂತಹ ಸಾಧನೆ ತೋರಿರುವುದು ತಮಗೆ ಹೆಮ್ಮೆಯ ವಿಚಾರ. ಅಂಗವೈಕಲ್ಯವನ್ನು ಆತ ಮೆಟ್ಟಿ ನಿಂತಿದ್ದಾನೆ. ಆತನನ್ನು ಬೆಂಗಳೂರಿನಲ್ಲಿ ಗೌರವಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಆರ್ಯವೈಶ್ಯ ಸಭಾದಿಂದ ನಡೆಯುವ ಈ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿಧಾನ ಪರಿಷತ್ ಅಧ್ಯಕ್ಷ ಡಿ.ಎಚ್.ಶಂಕರಮೂರ್ತಿಅಧ್ಯಕ್ಷತೆ ವಹಿಸುವರು ಎಂದರು.
ಮಗನ ಸಾಧನೆಗೆ ಅಮ್ಮನ ಪ್ರೋತ್ಸಾಹ
ಮಗನ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತಾಯಿ ನಾಗರತ್ನ್ನಾ, ಆತನ ಕಲಿಕೆಗೆ ತಾನು ನಿರಂತರ ಪ್ರೋತ್ಸಾಹ ನೀಡುತ್ತಿದ್ದೆ. ಆತ ಕೂಡ ಛಲ ಬಿಡದೆ ಓದಿದ. ಇದೀಗ ಹೆಚ್ಚಿನ ಅಂಕ ಪಡೆದಿರುವುದು ಖುಷಿ ತಂದಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ಧಾರವಾಡದ ಕಾಲೇಜೊಂದಕ್ಕೆ ಸೇರಿಸಿದ್ದೇವೆ ಎಂದರು. ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ಸರಿಯಾದ ಪ್ರೇರಣೆ, ಪ್ರೋತ್ಸಾಹ ನೀಡಿದರೆ ಅವರು ಅಸಾಧ್ಯವಾದುದನ್ನು ಸಾಧಿಸಬಲ್ಲರು. ಯಾರೂ ಕೂಡ ಅಂಗವೈಕಲ್ಯ ಮಕ್ಕಳನ್ನು ನಿರ್ಲಕ್ಷ್ಯದಿಂದ ಕಾಣಬಾರದು. ಅವರಿಗೂ ಬದುಕಲು ಅವಕಾಶ ಕಲ್ಪಿಸಬೇಕು. ಪ್ರೋತ್ಸಾಹ ನೀಡಬೇಕು ಎಂದು ನಾಗರತ್ನಾ ಮನವಿ ಮಾಡಿಕೊಂಡರು.
ಶಿವಯೋಗಿಯ ತಂದೆ ಬಿ.ಎಸ್.ನಾಗರಾಜ ಶೆಟ್ಟಿಯವರೂ ಕೂಡ ಮಗನ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಂಡರು. ಶಿವಯೋಗಿಯ ತನ್ನ ಸಾಧನೆ ನಿಜಕ್ಕೂ ಶ್ಲಾಘನೀಯವಾದುದು. ಇಂತಹ ವಿದ್ಯಾರ್ಥಿಗಳಿಗೆ ಸಮಾಜದಿಂದಲೂ ಪ್ರೋತ್ಸಾಹ ಅಗತ್ಯ ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ಡಾ.ಎನ್.ಉದಯ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಯೋಗಿಯ ಕಿವಿಯ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಆದರೆ 12 ಲಕ್ಷ ರೂ. ಖರ್ಚಾಗಬಹುದು ಎಂದು ಹೇಳಿದ್ದಾರೆ. ಆದರೆ ಅಷ್ಟು ಹಣವನ್ನು ಹೊಂದಿಸುವ ಶಕ್ತಿಯನ್ನು ಈತನ ಕುಟುಂಬ ಹೊಂದಿಲ್ಲ. ಜಿಲ್ಲೆಯ, ರಾಜ್ಯದ ವೈದ್ಯರು ಆತನನ್ನು ಚಿಕಿತ್ಸೆಗೊಳಪಡಿಸಿ ಉಚಿತವಾಗಿ ಶಸಚಿಕಿತ್ಸೆ ನಡೆಸುವ ಮನಸ್ಸು ತೋರಬೇಕು ಎಂದು ಕುಬೇರ ಶೆಟ್ಟಿ ಮನವಿ ಮಾಡಿದರು.
ನಾವು ಯಾರಿಂದಲೂ ಹಣವನ್ನು ಕೇಳುತ್ತಿಲ್ಲ. ಯಾರಾದರೂ ವೈದ್ಯರು ಆತನ ಕಿವಿಯನ್ನಾದರೂ ಶಸ ಚಿಕಿತ್ಸೆ ಮಾಡಿ ಕೇಳುವ ಭಾಗ್ಯವನ್ನಾದರೂ ಕರುಣಿಸಲಿ ಎಂದಷ್ಟೇ ಕೇಳಿಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲೂ ಈ ಅಂಶವನ್ನು ಉಲ್ಲೇಖಿಸುವುದಾಗಿ ಅವರು ಹೇಳಿದರು. ಕುಬೇರ ಶೆಟ್ಟಿಯವರ ಸಂಪರ್ಕ ಸಂಖ್ಯೆ-9448214844
